ಹೊರ ಊರಿನವರಿಗೆ ನೀಡುವ ಬದಲು ಗ್ರಾಮದ ನಿವೇಶನ ರಹಿತರಿಗೆ ನೀಡುವಂತೆ ಕ್ರಮ ಕೈಗೊಳ್ಳಲು ಶಿವನಾಥ ರೈಯವರಿಂದ ಶಾಸಕರಿಗೆ ಮನವಿ
ಪುತ್ತೂರು: ಸರ್ವೆ ಗ್ರಾಮದ ನೆಕ್ಕಿತಡ್ಕ ಎಂಬಲ್ಲಿ ವಿಟ್ಲದ ಸೈನಿಕರೋರ್ವರಿಗೆ ಗ್ರಾಮ ಪಂಚಾಯತ್‌ನ ಅನುಮತಿ ಇಲ್ಲದೆ ಜಮೀನು ಮಂಜೂರು ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಮ್ಮ ಊರಿನ ಸೈನಿಕರಿಗೆ ಮತ್ತು ನಿವೇಶನ ಇಲ್ಲದ ಬಡವರಿಗೆ ಆದ್ಯತೆ ಅನುಸಾರ ಜಾಗ ಒದಗಿಸಲು ಕ್ರಮ ವಹಿಸಬೇಕು ಮತ್ತು ಹೊರ ಊರಿನವರಿಗೆ ಇಲ್ಲಿ ಜಾಗ ಮಂಜೂರಾತಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಮುಂಡೂರು ಸಿಎ ಬ್ಯಾಂಕ್ ನಿರ್ದೇಶಕ ಶಿವನಾಥ ರೈ ಮೇಗಿನಗುತ್ತು ಅವರು ಶಾಸಕ ಅಶೋಕ್ ಕುಮಾರ್ ರೈ ರಿಗೆ ಮನವಿ ಸಲ್ಲಿಸಿದ್ಧಾರೆ.
ನಮ್ಮ ಪಂಚಾಯತ್ ವ್ಯಾಪ್ತಿಯ ನೂರಾರು ಬಡವರಿಗೆ ನಿವೇಶನ ಇಲ್ಲ ಹಾಗಿದ್ದರೆ ಈ ಕೆಸಿಡಿಸಿ ಜಾಗವನ್ನು ಗ್ರಾ.ಪಂಗೆ ಹ್ಯಾಂಡ್ ಓವರ್ ಮಾಡಿ ಬಡವರಿಗೆ ಹಂಚಿದರೆ ಉತ್ತಮ. ಸದ್ರಿ ಸೈನಿಕರೋರ್ವರಿಗೆ ಜಮೀನು ಮಂಜೂರು ಮಾಡಿರುವುದು ತಪ್ಪೋ ಸರಿಯೋ ಎಂಬ ಪ್ರಶ್ನೆ ಅಲ್ಲ ಆದರೆ ನಮ್ಮ ಊರಿನ ಸೈನಿಕರಿಗೆ ಹಾಗೂ ಬಡ ಜನರಿಗೆ ಜಮೀನು ಇಲ್ಲ ಎಂದ ಮೇಲೆ ಇಲ್ಲಿ ಹೊರಗಿನವರಿಗೆ ಯಾಕೆ ಕೊಡಬೇಕು ? ಆದ್ದರಿಂದ ತಾವು ಸರಕಾರಿ ಜಾಗವನ್ನು ಮತ್ತು ಕೆಸಿಡಿಸಿ ಜಾಗವನ್ನು ಮುಂಡೂರು ಗ್ರಾ.ಪಂ ವ್ಯಾಪ್ತಿಯ ಬಡವರಿಗೆ ಹಂಚಿಕೆ ಮಾಡುವುದಕ್ಕಾಗಿ ಗ್ರಾ.ಪಂಗೆ ಹ್ಯಾಂಡ್‌ಓವರ್ ಮಾಡಲು ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
ಮುಂಡೂರು ಗ್ರಾ.ಪಂ ಸದಸ್ಯ ಮಹಮ್ಮದ್ ಆಲಿ ಮತ್ತು ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಕಲ್ಲಗುಡ್ಡೆ ಮನವಿ ನೀಡುವ ನಿಯೋಗದಲ್ಲಿದ್ದರು.