ಪುತ್ತೂರು: ಅಖಂಡತೆಯಲ್ಲಿ ಏಕತೆಯನ್ನು ಕಂಡ ನಮ್ಮ ದೇಶವನ್ನು ವಿಶ್ವ ಗುರುವಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ. ದೇಶವು ನಮಗೇನು ಕೊಟ್ಟಿದೆ ಅನ್ನೋದಕ್ಕಿಂತ ಮಿಗಿಲಾಗಿ ದೇಶಕ್ಕಾಗಿ ನಾವೇನು ಕೊಡುಗೆಯನ್ನು ನೀಡಿದ್ದೇವೆ ಎಂಬುದನ್ನು ಚಿಂತಿಸೋಣ ಎಂದು ಮುಂಡೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ತಿಳಿಸಿದರು.
77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಆ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಂಡೂರು ಗ್ರಾ.ಪಂ ಸದಸ್ಯರು, ಮುಂಡೂರು ಶಾಲಾ ನಾಮ ನಿರ್ದೇಶಿತ ಸದಸ್ಯರೂ ಆಗಿರುವ ಉಮೇಶ್ ಗೌಡ ಅಂಬಟ ಶುಭ ಹಾರೈಸಿದರು. ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯಗುರು ವಿಜಯಾ ಪಿ, ಎಸ್ಡಿಎಂಸಿ ಉಪಾಧ್ಯಕ್ಷೆ ಸಂಗೀತ, ಗುಬ್ಬಚ್ಚಿ ಕಲರವ ಎಲ್ಕೆಜಿ ಯುಕೆಜಿ ಸಮಿತಿಯ ಅಧ್ಯಕ್ಷೆ ಸುನಿತಾ, ಶಿಕ್ಷಕ ರಾಮಚಂದ್ರ ಬಿ ಶುಭ ಹಾರೈಸಿದರು.
ಧ್ವಜಾರೋಹಣದ ಬಳಿಕ ಮುಂಡೂರು ಗ್ರಾ.ಪಂಗೆ ತೆರಳಿ ಅಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಘೋಷಣೆಗಳನ್ನು ಕೂಗುತ್ತಾ ಜಾಥಾದ ಮೂಲಕ ಸಾಗಿ ಬದಿಯಡ್ಕ ಸಿಂಚನ ಬಳಗದವರು ನಡೆಸಿದ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾದರು.
ಧ್ವಜಾರೋಹಣದ ಸಂದರ್ಭದಲ್ಲಿ ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್, ಎಸ್ಡಿಎಂಸಿ ಸದಸ್ಯರು, ಪೋಷಕ ವೃಂದ ಹಾಗೂ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ವಿಜಯ ಪಿ ಸ್ವಾಗತಿಸಿದರು. ಎಲ್ಕೆಜಿ ಯುಕೆಜಿ ಶಿಕ್ಷಕಿ ಶಕುಂತಲಾ ಹಾಗೂ ಗೌರವ ಶಿಕ್ಷಕಿ ರೂಪಾ ಅವರು ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಹಶಿಕ್ಷಕಿ ನಾಗವೇಣಿ ವಂದಿಸಿದರು. ಶಿಕ್ಷಕಿ ಶಶಿಕಲಾ ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.