ಪುತ್ತೂರು: 2023ನೇ ಸಾಲಿನ ವೇ.ಮೂ. ಲಷ್ಕರಿ ಕೇಶವ ಭಟ್ ಜನ್ಮ ಶತಮಾನೋತ್ಸವದ ಪ್ರಶಸ್ತಿಗೆ ಎಲ್.ಎಸ್. ಶಾಸ್ತ್ರಿ ಬೆಳಗಾವಿ ಇವರನ್ನು ಆಯ್ಕೆ ಮಾಡಲಾಗಿದೆ.ಇವರ ಜನ್ಮ ಭೂಮಿ ಉತ್ತರ ಕನ್ನಡವಾದರೂ ಕರ್ಮಭೂಮಿ ಗಡಿಪ್ರದೇಶವಾದ ಬೆಳಗಾವಿ.ಈ ಜಿಲ್ಲೆಯಾದ್ಯಂತ ಸಾಹಿತ್ಯ, ಸಾಂಸ್ಕೃತಿಕ, ಪತ್ರಿಕಾ ಸಂಘಟನೆಗಳನ್ನು ಕಟ್ಟಿ ಬೆಳೆಸಿದವರು. ಅಸಂಖ್ಯಾತ ಹೊಸ ಬರಹಗಾರರಿಗೆ, ಕಲಾವಿದರಿಗೆ, ಪತ್ರಕರ್ತರಿಗೆ ವೇದಿಕೆ ಕಲ್ಪಿಸಿ ಉತ್ತೇಜನ ನೀಡಿದವರು. ಶಾಸ್ತ್ರಿಯವರು ಸುಮಾರು ಐವತ್ತರಷ್ಟು ಸೃಜನ ಕೃತಿಗಳು, ನೂರಕ್ಕು ಹೆಚ್ಚು ಸಂಪಾದಿತ ಕೃತಿಗಳು ಹಾಗೂ ನಲವತ್ತು ಸಾವಿರಕ್ಕೂ ಹೆಚ್ಚು ಬಿಡಿ ಬರಹಗಳನ್ನು ಬರೆದಿದ್ದಾರೆ. ಎಲ್. ಎಸ್. ಶಾಸ್ತ್ರಿಯವರದು ಪತ್ರಿಕೆ, ಸಂಗೀತ, ಗಮಕ, ನಾಟಕ, ಯಕ್ಷಗಾನ, ಸಾಂಸ್ಕೃತಿಕ ಸಂಘಟನೆ ಹೀಗೆ ಬಹುಮುಖ ಪ್ರತಿಭೆ.ಇವರ ಇಂತಹ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಆ.20ರಂದು ಪುತ್ತೂರಿನ ಕೃಷ್ಣ ಆರ್ಕೇಡ್ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಮತ್ತು ಸಮಾಜದ ದುರ್ಬಲರಿಗೆ ಧನ ಸಹಾಯ ವಿತರಣೆಯೂ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಷ್ಕರಿ ಕೇಶವ ಭಟ್ಟರು ಸಾಮಾಜಿಕ, ಧಾರ್ಮಿಕ, ಕ್ಷೇತ್ರಗಳಲ್ಲಿ ತಮ್ಮನ್ನು ಸದಾಕಾಲ ತೊಡಗಿಸಿಕೊಂಡು, ಕೃಷಿ ಕ್ಷೇತ್ರದಲ್ಲೂ ಪರಿಣತಿ ಪಡೆದವರಾಗಿದ್ದರು. ಅವರು ಶಿಕ್ಷಣಕ್ಕೆ ಮತ್ತು ಶಿಕ್ಷಣಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ನೀಡುತಿದ್ದರು. ಅವರ ಪುತ್ರ ನಿವೃತ್ತ ಶಿಕ್ಷಣಾಧಿಕಾರಿ, ಸಾಹಿತಿ ಎಸ್.ಜಿ.ಕೃಷ್ಣ ಇವರು ಸಾಮಾಜಿಕ ಸಮಸ್ಯೆಗಳ ಬಗ್ಗೆ ತೀವ್ರ ಕಳಕಳಿಯುಳ್ಳವರು.ನಮ್ಮ ಸಮಾಜದ ವಿವಿಧ ಸಮಸ್ಯೆಗಳ ಕುರಿತು ಹತ್ತಾರು ಪುಸ್ತಕಗಳನ್ನು ಬರೆದ ಎಸ್. ಜಿ. ಕೃಷ್ಣರವರು ಸ್ಥಾಪಿಸಿದ ಈ ಪ್ರಶಸ್ತಿಯನ್ನು ಕಳೆದ ೨೨ ವರ್ಷಗಳಿಂದ ಸಮಾಜದ ವಿವಿಧ ಕ್ಷೇತ್ರಗಳ ವಿಶಿಷ್ಟ ಸಾಧಕರಿಗೆ ನೀಡಲಾಗುತ್ತಿದೆ.