ವರ್ಷದಲ್ಲಿ ರೂ.41.65 ಕೋಟಿ ವ್ಯವಹಾರ, ರೂ. 38. 41 ಲಾಭ, ಶೇ.11 ಡಿವಿಡೆಂಡ್ ಘೋಷಣೆ
ಎಲ್ಲಾ ಸದಸ್ಯರ ಹಿತ ಕಾಪಾಡಲು ಪ್ರಯತ್ನ – ಡಾ.ಯು.ಪಿ.ಶಿವಾನಂದ
ಪುತ್ತೂರು: ಸುಳ್ಯದಲ್ಲಿ ಶಾಖಾ ಕಚೇರಿಯನ್ನು ಹೊಂದಿದ್ದು ಪುತ್ತೂರಿನ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸುದ್ದಿ ಸೌಹಾರ್ದ ಸಹಕಾರಿಯು ವರದಿ ವರ್ಷದಲ್ಲಿ ಸಂಘವು ಒಟ್ಟು ರೂ.41.65 ಕೋಟಿ ವ್ಯವಹಾರ ನಡೆಸಿದ್ದು, ಕಳೆದ ವರ್ಷಕ್ಕಿಂತ ಶೇ.23.40ರಷ್ಟು ಹೆಚ್ಚಳವನ್ನು ಸಾಧಿಸಿದೆ. ಇದರ ಜೊತೆಗೆ ಸಂಘವು ವರದಿ ವರ್ಷದಲ್ಲಿ ಒಟ್ಟು ರೂ.38,41,294 ರಷ್ಟು ನಿವ್ವಳ ಲಾಭವನ್ನು ಗಳಿಸಿಕೊಂಡಿದ್ದು, ಶೇ.11 ಡಿವಿಡೆಂಡ್ ವಿತರಣೆಯನ್ನು ಘೋಷಣೆ ಮಾಡಲಾಗಿದೆ.
ಸಂಘದ ಅಧ್ಯಕ್ಷ ಡಾ. ಯು.ಪಿ.ಶಿವಾನಂದ ಅವರ ಅಧ್ಯಕ್ಷತೆಯಲ್ಲಿ ಆ.19ರಂದು ಪುತ್ತೂರು ಲಯನ್ಸ್ ಕ್ಲಬ್ ಸಭಾಭವನದಲ್ಲಿ ನಡೆದ ಸಂಘದ 8ನೇ ವಾರ್ಷಿಕ ಮಹಾಸಭೆಯಲ್ಲಿ ಡಿವಿಡೆಂಡ್ ಘೋಷಣೆ ಮಾಡಲಾಯಿತು. ಸಂಘದ ಅಧ್ಯಕ್ಷರ ಪರವಾಗಿ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಅವರು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ, ಸಂಘದ ಒಟ್ಟು ವ್ಯವಹಾರದ ಕುರಿತು ಲೆಕ್ಕಪರಿಶೋಧಕರು ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ಸಭೆಗೆ ತಿಳಿಸಿದ ಅವರು ಸಂಘದ ಒಟ್ಟು ಲಾಭಾಂಶವನ್ನು ನಿಯಮಾನುಸಾರ ವಿಂಗಡಣೆ ಮಾಡಿ ಶೇ.11 ಡಿವಿಡೆಂಡ್ ನೀಡುವುದಾಗಿ ತಿಳಿಸಿದರು. ಮತ್ತು ಲಾಭಾಂಶದಲ್ಲಿ ಉಳಿಕೆ ಹಣವನ್ನು ಸಮಾಜಕ್ಕೆ ತೊಡಗಿಸುವ ಮತ್ತು ಸಂಘಕ್ಕೆ ಸ್ವಂತ ಕಟ್ಟಡ ಮಾಡುವ ರೂ. 11.70ಲಕ್ಷವನ್ನು ಕ್ಷೇಮ ನಿಧಿಗೆ ಅಧ್ಯಕ್ಷರ ಒಪ್ಪಿಗೆಯಂತೆ ಇಡಲಾಗುವುದು ಎಂದರು.
ಹಿಂದಿನ ಸಾಲಿಗಿಂತ ಹೆಚ್ಚಿನ ಪ್ರಗತಿ:
ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಂ.ನರೇಂದ್ರರವರು 2022-23 ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡನೆ ಮಾಡಿದರು.ಸಹಕಾರಿಯು ವರ್ಷಾಂತ್ಯಕ್ಕೆ ಎ ತರಗತಿಯ 2848 ಮಂದಿ ಸದಸ್ಯರನ್ನು ಹೊಂದಿದ್ದು ರೂ 56,12,300 ಪಾಲು ಬಂಡವಾಳವನ್ನು ಹೊಂದಿದೆ. ರೂ.9,77,22,300 ಒಟ್ಟು ಠೇವಣಾತಿಗಳನ್ನು ಹೊಂದಿದ್ದು ಕಳೆದ ವರ್ಷಕ್ಕಿಂತ ಶೇ.29 ರಷ್ಟು ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿದೆ. ಸಂಘವು ನಿರಖು ಠೇವಣಾತಿಗಳಿಗೆ ಒಂದು ವರ್ಷದ ಅವಧಿಗೆ ಶೇ. 9 ಹಾಗೂ ಹಿರಿಯ ನಾಗರಿಕರಿಗೆ ಶೇ. 0.5 ಹೆಚ್ಚು ಬಡ್ಡಿ ನೀಡಲಾಗುತ್ತದೆ ಎಂದರು. ಸದಸ್ಯರ ಸಾಲಗಳಲ್ಲಿ ವಾಹನ ಸಾಲ, ಠೇವಣಾತಿ ಸಾಲ, ಗೃಹ ಸಾಲ, ಆಭರಣ ಈಡಿನ ಸಾಲ, ಅಡವು ಸಾಲ, ಜಾಮೀನು ಸಾಲ, ವೇತನ ಸಾಲ, ಭೂ ಖರೀದಿ ಸಾಲ, ಸ್ವಸಹಾಯ ಸಂಘದ ಸಾಲ ಸೇರಿದಂತೆ ವರ್ಷಾಂತ್ಯಕ್ಕೆ ಒಟ್ಟು ರೂ.8,21,99,853 ಸಾಲ ನೀಡಲಾಗಿದೆ. ವರದಿ ವರ್ಷದಲ್ಲಿ ಸಂಘವು ಒಟ್ಟು ರೂ.41.65 ಕೋಟಿ ವ್ಯವಹಾರ ನಡೆಸಿದ್ದು, ಕಳೆದ ವರ್ಷಕ್ಕಿಂತ ಶೇ.23.40 ಹೆಚ್ಚಳವನ್ನು ಸಾಧಿಸಿದೆ. ವರದಿ ವರ್ಷದಲ್ಲಿ ಶೇ.95.05 ರಷ್ಟು ಸಾಲ ವಸೂಲಾತಿ ಮಾಡಿದ್ದು ಹಿಂದಿನ ಸಾಲಿಗಿಂತ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ. ಸಂಘವು ವರದಿ ವರ್ಷದಲ್ಲಿ ಒಟ್ಟು ರೂ.38,41,294 ರಷ್ಟು ನಿವ್ವಳ ಲಾಭವನ್ನು ಗಳಿಸಿಕೊಂಡಿದೆ. ಅಡಿಟ್ ವರ್ಗೀಕರಣದಲ್ಲಿ ಸಂಘವು ಎ ಶ್ರೇಣಿಯಲ್ಲಿ ವರ್ಗೀಕರಿಸಲ್ಪಟ್ಟಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮುಂದಿನ ಲೆಕ್ಕಪರಿಶೋಧಕರಾಗಿ ಸಂಘದ ಸದಸ್ಯರ ತೀರ್ಮಾನದಂತೆ ಗಣೇಶ್ ಜ್ಯೋಶಿಯವರನ್ನು ಆಯ್ಕೆ ಮಾಡಲಾಯಿತು. ಸಹಕಾರಿ ಸಂಘದ ಸಿಬ್ಬಂದಿ ಅನಂತರಾಮರವರು ಮಹಾಸಭೆಯ ನೋಟೀಸನ್ನು ಓದಿ ದಾಖಲಿಸಿದರು. 2023-24 ನೇ ಸಾಲಿನ ಅಂದಾಜು ಆಯವ್ಯಯವನ್ನು ನಿರ್ದೇಶಕ ಸುಂದರ ನಾಯ್ಕ್ ರವರು ಸಭೆಗೆ ಮಂಡಿಸಿದರು. 2022-23 ನೇ ಸಾಲಿನ ಅಡಿಟ್ ವರದಿಯನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯಂ.ನರೇಂದ್ರ ಸಭೆಗೆ ತಿಳಿಸಿದರು.
ಎಲ್ಲಾ ಸದಸ್ಯರ ಹಿತ ಕಾಪಾಡಲು ಪ್ರಯತ್ನ:
ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಡಾ. ಯು.ಪಿ.ಶಿವಾನಂದ ಅವರು ಮಾತನಾಡಿ ಕೇವಲ ಆರ್ಥಿಕ ವಿಚಾರಕ್ಕೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಕ್ಕೂ ಮುಂದಡಿ ಇಡಲಿದ್ದೇವೆ. ಸಂಘದ ಸದಸ್ಯರು ಉತ್ತಮ ಸಾಧನೆ ಮಾಡಿದಲ್ಲಿ ಮತ್ತು ಅವರ ಸಬಲೀಕರಣಕ್ಕೆ ವಿಶೇಷ ಕಾರ್ಯಕ್ರಮ, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸದ್ಯರಿಗೆ ಕ್ರೀಡೆ ಸಹಿತ ವಿವಿಧ ಕಾರ್ಯಕ್ರಮ ಮಾಡುವ ಮೂಲಕ ಸುದ್ದಿಯ ಸೌಹಾರ್ದ ಸದಸ್ಯರ ಕೂಟ ಮಾಡುವ ಕುರಿತು ಚಿಂತನೆ ಮಾಡುವ ಮೂಲಕ ಎಲ್ಲಾ ಸದಸ್ಯರ ಹಿತ ಕಾಪಾಡಲು ಪ್ರಯತ್ನ ಮಾಡಲಾಗುವುದು ಎಂದ ಅವರು ಸಾಮಾಜಿಕ ಬದಲಾವಣೆಯಾಗಿ ಭ್ರಷ್ಟಾಚಾರದ ವಿರೋಧ ಆಂದೋಲನ, ಬಂದ್, ರಸ್ತೆ ತಡೆಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.
ಸದಸ್ಯರು ಸಂಘವನ್ನು ಎತ್ತಿ ಹಿಡಿದ್ದಿದ್ದಾರೆ:
ಸಂಘದ ಸದಸ್ಯರ ಅಭಿಪ್ರಾಯವನ್ನು ಆಲಿಸಿದ ಬಳಿಕ ಅಧ್ಯಕ್ಷ ಡಾ. ಯು.ಪಿ.ಶಿವಾನಂದ ಅವರು ಮಾತನಾಡಿ ಸಂಘದ ಸದಸ್ಯರು ಸಂಘವನ್ನು ಎತ್ತಿ ಹಿಡಿದ್ದಿದ್ದಾರೆ. ಸಿಬ್ಬಂದಿಯೊಂದಿಗಿನ ಸಂಬಂಧ, ಸಂಘದ ಬೆಳವಣಿಗೆಗೆ ಉತ್ತೇಜನ ಸಲಹೆ ಕೊಡುವ ಸದಸ್ಯರು ಸಂಸ್ಥೆಯೊಂದಿಗೆ ಸದಾ ಇರಬೇಕು. ಸದಸ್ಯರ ಸಲಹೆಯಂತೆ ಸಾಲ ತೀರಿಸಿದವರ ಸದಸ್ಯತ್ವ ಉಳಿಸಿಕೊಳ್ಳುವುದು ಉತ್ತಮ. ಇದಕ್ಕೆ ಸಂಘ ಪ್ರಯತ್ನ ಮಾಡಲಿದೆ. ಶೇರುಗಳಿಗೆ ಸಂಬಂಧಿಸಿ ಕ್ಷೇಮ ನಿಧಿಯಲ್ಲಿ ಉಳಿಕೆ ಹಣ ಇಟ್ಟಿರುವುದು ಸುಳ್ಯದಲ್ಲಿ ಈಗಾಗಲೇ ಶಾಖೆ ಆರಂಭಗೊಂಡಿದೆ. ಅಲ್ಲಿನ ಖರ್ಚಿಗೆ ಮತ್ತು ಬೆಳ್ತಂಗಡಿಯಲ್ಲಿ ಹೊಸ ಶಾಖೆ ಮಾಡುವ ಚಿಂತನೆಯಲ್ಲಿ ಇಟ್ಟಿದ್ದೇವೆ. ಮುಂದಿನ ವರ್ಷ ಡಿವಿಡೆಂಡ್ ಇನ್ನಷ್ಟು ಹೆಚ್ಚಿಗೆ ಕೊಡುವ ಪ್ರಯತ್ನ ಮಾಡಲಾಗುವುದು ಎಂದರು.
ವೇತನ, ವ್ಯಾಪಾರ ಇಲ್ಲದ ಸಾಲ ಶೇ.95 ವಸೂಲಾತಿಗೆ ಅಭಿನಂದನೆ:
ಸಂಸ್ಥೆಯಲ್ಲಿ ಚಿನ್ನದ ಮತ್ತು ಅಡಮಾನ ಸಾಲವನ್ನು ಯಾರು ಬೇಕಾದರೂ ಕೊಡುತ್ತಾರೆ. ಆದರೆ ಕೇವಲ ಸಾಲರಿ ಪ್ರಮಾಣ ಪತ್ರದೊಂದಿಗೆ ವೇತನ ಮತ್ತು ವ್ಯಾಪಾರ ಸಾಲ ನೀಡಿದರೂ ಶೇ.95ಸಾಲ ವಸೂಲಾತಿ ಮಾಡಿರುವುದು ಸಾಧನೆಯಾಗಿದೆ. ಈ ನಿಟ್ಟಿನಲ್ಲಿ ಸಂಘದ ನಿರ್ದೇಶಕರು ಮತ್ತು ಮುಖ್ಯ ಕಾರ್ಯರ್ನಿಹಣಾಧಿಕಾರಿ ಹಾಗು ಸಿಬ್ಬಂದಿಗಳ ಕಾರ್ಯಕ್ಷಮತೆಗೆ ಡಾ. ಯು.ಪಿ.ಶಿವಾನಂದ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇಂತಹ ಸಾಲ ಪಡೆದು ಕೊಂಡವರಿಗೆ ತುಂಬಾ ಪ್ರಯೋಜನ ಕೂಡಾ ಆಗಿದೆ ಎಂದರು.
ಸುದ್ದಿ ಸೊಸೈಟಿಯ ಯಶಸ್ವಿಗೆ ಸದಸ್ಯರ ಸಲಹೆಗಳು:
ಸುದ್ದಿ ಸೌಹಾರ್ದ ಸಹಕಾರಿಯು ತನ್ನ 8 ವರ್ಷಗಳ ಅಲ್ಪ ಅವಧಿಯಲ್ಲಿ ಗುರಿ ಮೀರಿದ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಹಕರು ತಮ್ಮ ಅಭಿನಂದನೆಗಳನ್ನು ಸಲಹೆ ಸೂಚನೆಗಳನ್ನು ತಿಳಿಸಿದರು. ನಿವೃತ್ತ ಉಪವಲಯ ಅರಣ್ಯಾಧಿಕಾರಿ ಕೃಷ್ಣಪ್ಪ ಕೆ ಅವರು ಮಾತನಾಡಿ ಸಂಘಕ್ಕೆ ಇನ್ನಷ್ಟು ಸದಸ್ಯರನ್ನು ಸೇರ್ಪಡೆಗೊಳಿಸಬೇಕು ಮತ್ತು ಸದಸ್ಯರು ತಮ್ಮ ಸದಸ್ಯತನವನ್ನು ಕಳೆದು ಕೊಳ್ಳದಂತೆ ನೋಡುವುದು ಉತ್ತಮ. ಇದರ ಜೊತೆಗೆ ಉಪ್ಪಿನಂಗಡಿ ಪರಿಸರದಲ್ಲಿ ಶಾಖೆಯನ್ನು ತೆರೆಯಬೇಕೆಂದು ಸಲಹೆ ನೀಡಿದರು.
ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಟಿ ಸದಾಶಿವ ನಾಯಕ್ ಮತ್ತು ಬಾಲಕೃಷ್ಣ ಅವರು ಮಾತನಾಡಿ ಸಂಘದ ಸೇವೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಪುತ್ತೂರು ಮಹಮ್ಮಾಯಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶೀನ ನಾಯ್ಕರವರು ಮಾತನಾಡಿ ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ನ ಅನುಭವಿಯಾಗಿರುವ ನರೇಂದ್ರರವರು ಸಂಸ್ಥೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವುದು ಸಂಘದ ಅಭಿವೃದ್ಧಿಗೆ ಪೂರಕ ಕೆಲಸ ನಡೆಯುತ್ತಿದೆ. ಇದರೊಂದಿಗೆ ಸಂಘದಲ್ಲಿ ಸರಿಯಾದ ನಿರ್ದೇಶನ ನೀಡುವ ದಕ್ಷ ಆಡಳಿತ ಮಂಡಳಿಯೂ ಇದೆ ಎಂದು ಸಂಘದ ಕಾರ್ಯವೈಖರಿಗಳನ್ನು ಅಭಿನಂದಿಸಿದರು. ವಸಂತ ಕೆ ರೈ ಅವರು ಮಾತನಾಡಿ ಆರಂಭದಲ್ಲಿ ಮೂಲ ಬಂಡವಾಳವಾಗಿ ಯವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶೇರು ಬಂಡವಾಳ ನೀಡಿದವರನ್ನು ಸಂಪರ್ಕ ಮಾಡಿ ಅವರಿಗೆ ಉಳಿತಾಯ ಖಾತೆ ಮಾಡಿಸಿ ಅವರಿ ಲಾಭಾಂಶ ಪಡೆಯುವಂತೆ ತಿಳಿಸುವ ಕೆಲಸ ಆಗಬೇಕೆಂದು ಸಲಹೆ ನೀಡಿದರು. ಮಹಮ್ಮದ್ ಅವರು ಮಾತನಾಡಿ ಸಂಘದಿಂದ ನನಗೆ ದೊಡ್ಡ ಮೊತ್ತದ ಸಾಲವು ಸರಳವಾಗಿ ಸಿಕ್ಕಿದೆ. ಅದೆ ರೀತಿ ಅದನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಿದ್ದು, ನಮಗೆ ಸಂಘದಿಂದ ಸಿಗುವ ಎಲ್ಲಾ ರೀತಿಯ ಸೇವೆಗಳಿಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಸಹಕಾರಿ
ಸಂಘದ ಉಪಾಧ್ಯಕ್ಷ ಯು.ಪಿ. ರಾಮಕೃಷ್ಣ, ನಿರ್ದೇಶಕರುಗಳಾದ ಡಾ| ಜೆ.ಸಿ ಅಡಿಗ, ಜೋಹರಾ ನಿಸಾರ್ ಅಹಮ್ಮದ್, ಎ.ವಿ ನಾರಾಯಣ, ಹರೀಶ್ ಬಂಟ್ವಾಳ, ಮೋಹನ್ ರೈ ಕೆ.ಎಂ, ರಾಜೇಶ್ ಎಂ.ಎಸ್, ಸಿ.ಶೇಷಪ್ಪ ಕಜೆಮಾರ್, ಪಾರೂಕ್ ಶೇಖ್, ಈಶ್ವರ ವಾರಣಾಸಿ ಉಪಸ್ಥಿತರಿದ್ದರು. ಸಹಕಾರಿಯ ನಿರ್ದೇಶಕ ಎನ್.ಕೆ ಜಗನ್ನೀವಾಸ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಿತ್ಯ ನಿಧಿ ಸಂಗ್ರಾಹಕ ಕೆ.ಸುಬ್ರಹ್ಮಣ್ಯ ಪ್ರಾರ್ಥಿಸಿದರು. ನಿರ್ದೇಶಕಿ ಸ್ವಾತಿ ಮಲ್ಲಾರ, ವಂದಿಸಿದರು. ಸುದ್ದಿ ಚಾನೆಲ್ನ ಆಂಕರ್ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ಕೆ.ಅನಂತರಾಮ, ಚೇತನ್, ಅಶ್ವಿನಿ ಎನ್.ಎಸ್, ನಿತ್ಯನಿಧಿ ಸಂಗ್ರಾಹಕರಾದ ಸತೀಶ್ ಪ್ರಭು, ಶ್ರೀಧರ್, ಶಿವರಾಮ ಅಮೈ , ಸುಳ್ಯ ಶಾಖೆಯ ವ್ಯವಸ್ಥಾಪಕ ಚೇತನ್ ಎ.ವಿ, ಅನ್ವಿತಾ, ಪಿಗ್ಮಿ ಸಂಗ್ರಹಕರಾದ ಪವಿತ್ರ ಸಹಕರಿಸಿದ್ದರು.
ಸಹಕಾರಿಯ ವಿಶೇಷತೆಗಳು:
ಹಿರಿಯ ನಾಗರೀಕರಿಗೆ ಶೇ.0.5 ಹೆಚ್ಚುವರಿ ಬಡ್ಡಿ, ಭೂ ಅಡಮಾನ ಸಾಲ,ಗೃಹಸಾಲ, ಆಭರಣ ಈಡಿನ ಸಾಲ, ವೇತನ ಸಾಲ, ವ್ಯಾಪಾರ ಸಾಲ, ಭೂ ಖರೀದಿ ಸಾಲ, ಮನೆ ನಿವೇಶನ ಖರೀದಿ ಸಾಲ. ಕಡಿಮೆ ಬಡ್ಡಿ ಹಾಗೂ ತ್ವರಿತಗತಿಯಲ್ಲಿ ಕ್ಲಪ್ತ ಸಮಯದಲ್ಲಿ ನೀಡಲಾಗುತ್ತದೆ. ಇ-ಸ್ಟಾಂಪಿಂಗ್ ಸೌಲಭ್ಯ ಇದೆ.