ಕಾಯೂರು: ಬೆಳಂದೂರು ಗ್ರಾಮ ಪಂಚಾಯತ್ನ 2ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಪಾರ್ವತಿ ಮರಕ್ಕಡ ಹಾಗೂ ಉಪಾಧ್ಯಕ್ಷರಾಗಿ ಜಯಂತ ಅಬೀರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗದ ಎ ಮಹಿಳೆ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಕಾಯಿಮಣ ವಾರ್ಡ್ 1ರ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಪಾರ್ವತಿ ಮರಕ್ಕಡ ಮತ್ತು ಸಾಮಾನ್ಯ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಬೆಳಂದೂರು ವಾರ್ಡ್ 2ರ ಬಿಜೆಪಿ ಬೆಂಬಲಿತ ಸದಸ್ಯ ಜಯಂತ ಅಬೀರರವರು ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾಗಿದ್ದಾರೆ.
ಒಟ್ಟು 15 ಸ್ಥಾನಗಳ ಬಲ ಹೊಂದಿರುವ ಬೆಳಂದೂರು ಗ್ರಾಮ ಪಂಚಾಯತ್ನಲ್ಲಿ 10 ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 5 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಆ 19ರಂದು ಗ್ರಾ. ಪಂ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಚುನಾವಣಾಽಕಾರಿಯಾಗಿದ್ದ ಕಾಯೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಜಾರ್ಜ್ ಅವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ್ ಸಹಕರಿಸಿದರು. ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ನಿಕಟಪೂರ್ವ ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸದಸ್ಯರಾದ ವಿಠಲ ಗೌಡ ಅಗಳಿ, ಪ್ರವೀಣ್ ಕೆರೆನಾರು, ಮೋಹನ್ ಅಗಳಿ, ರವಿಕುಮಾರ್ ಕೆಡೆಂಜಿ, ಜಯರಾಮ ಬೆಳಂದೂರು, ಉಮೇಶ್ವರಿ ಅಗಳಿ, ಗೌರಿ ಮಾದೋಡಿ, ಗೀತಾ ಕುವೆತ್ತೋಡಿ, ಹರಿಣಾಕ್ಷಿ ಬನಾರಿ, ಕುಸುಮಾ ಅಂಕಜಾಲು, ತಾರಾ ಅನ್ಯಾಡಿ ಉಪಸ್ಥಿತರಿದ್ದರು. ಲೆಕ್ಕಸಹಾಯಕಿ, ಸುನಂದಾ ವಂದಿಸಿದರು. ಸಿಬ್ಬಂದಿಗಳಾದ ಮಮತಾ, ಗೀತಾ, ಹರ್ಷಿತ್, ಸಂತೋಷ್ ಸಹಕರಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆ: ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಪಾರ್ವತಿ ಮರಕ್ಕಡ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಜಯಂತ ಅಬೀರ ಅವರನ್ನು ತಾ.ಪಂ.ಮಾಜಿ ಉಪಾಧ್ಯಕ್ಷ ಶೀನಪ್ಪ ಗೌಡ ಬೈತಡ್ಕ, ಲಲಿತಾ ಈಶ್ವರ, ಸುಳ್ಯ ಬಿಜೆಪಿ ಮಂಡಲ ಸಮಿತಿಯ ಕಾರ್ಯದರ್ಶಿ ಇಂದಿರಾ ಬಿ.ಕೆ, ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಬೆಳಂದೂರು ಗ್ರಾ.ಪಂ.ಮಾಜಿ ಅಧ್ಯಕ್ಷರಾದ ನಾರಾಯಣ ಗೌಡ ಬೈತಡ್ಕ, ನಝೀರ್ ದೇವಸ್ಯ, ಸಂಪತ್ ಕುಮಾರ್ ರೈ ಪಾತಾಜೆ, ಸತೀಶ್ ಮಾರ್ಕಜೆ, , ಕಾಣಿಯೂರು ಗ್ರಾ.ಪಂ. ನಿಟಕಪೂರ್ವ ಅಧ್ಯಕ್ಷೆ ಲಲಿತಾ ದರ್ಖಾಸು, ಸದಸ್ಯರಾದ ತೇಜಾಕ್ಷಿ ಕೊಡಂಗೆ, ಸುಲೋಚನ ಮಿಯೋಳ್ಪೆ, ಅಂಬಾಕ್ಷಿ ಕೂರೇಲು, ಜಿನ್ನಪ್ಪ ಗೌಡ ಅಂಕಜಾಲು, ಪ್ರವೀಣ್ ಮರಕ್ಕಡ, ನಾಗೇಶ್ ಬರಮೇಲು, ನವಾಜ್ ಪಳ್ಳತ್ತಾರು ಮತ್ತಿತರರು ಅಭಿನಂದಿಸಿದ್ದಾರೆ.
ಅಧ್ಯಕ್ಷ ಸ್ಥಾನ ಕಾಂಗ್ರೆಸ್ಗೆ: ಬೆಳಂದೂರು ಗ್ರಾ.ಪಂ.ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಅಧ್ಯಕ್ಷತೆ ಮೀಸಲು ಸದಸ್ಯರಿಲ್ಲದ ಕಾರಣ ಅಧ್ಯಕ್ಷ ಸ್ಥಾನದ ಅದೃಷ್ಟ. ಕಾಂಗ್ರೆಸ್ ಬೆಂಬಲಿತ ಸದಸ್ಯೆ ಪಾರ್ವತಿ ಮರಕ್ಕಡ ಅವರಿಗೊಲಿದಿದೆ. ಮೊದಲ ಅವಧಿಯಲ್ಲಿ ಮೀಸಲಾತಿಯಲ್ಲಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತರ ಪಾಲಾಗಿತ್ತು.