ಉಪ್ಪಿನಂಗಡಿ : ಇಲ್ಲಿನ ಕಜೆಕ್ಕಾರ್ ಕಾಲೋನಿಯ ಶ್ರೀ ಸತ್ಯಸಾರಮಾನಿ ದೈವಸ್ಥಾನದ ಜೀರ್ಣೋದ್ದಾರಕ್ಕೆ ಸಂಬಂಧಿಸಿ ಕಾಲೋನಿ ನಿವಾಸಿಗರು ಶ್ರೀ ಕ್ಷೇತ್ರ ಒಡಿಯೂರು ಸಂಸ್ಥಾನದ ಸಾದ್ವಿ ಮಾತಾನಂದಮಯೀ ರವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಾದ್ವಿಯವರು ಕಳೆದ ಬಾರಿಯ ದೀಪಾವಳಿ ಉತ್ಸವದ ವೇಳೆ ಕಾಲೋನಿಯಲ್ಲಿ ಆಚರಿಸಲಾದ ತುಡರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಮಾಜದಲ್ಲಿ ಉಪೇಕ್ಷಿಸಲ್ಪಟ್ಟ ಬಂಧುಗಳೊಂದಿಗೆ ಬೆರೆತು ದೀಪಾವಳಿ ಆಚರಿಸಿದ ಬಳಿಕ ಕಾಲೋನಿಯಲ್ಲಿ ಅಮೂಲಾಗ್ರ ಬದಲಾವಣೆಗಳು ಘಟಿಸಿದ್ದು, 40 ವರ್ಷಗಳಿಂದ ಜೀರ್ಣಸ್ಥಿತಿಯಲ್ಲಿದ್ದ ಸತ್ಯಸಾರಮಾನಿ ದೈವ ಸ್ಥಾನವನ್ನು ಪುನರ್ ನಿರ್ಮಿಸಲು ಅಲ್ಲಿಯ ನಿವಾಸಿಗರು ಮುಂದಾಗಿದ್ದಾರೆ. ಈ ಕಾರ್ಯಕ್ಕೆ ಪೂರ್ಣ ಬೆಂಬಲವನ್ನು ನೀಡಿರುವ ಸಾದ್ವಿಯವರು , ಪುನರ್ ನಿರ್ಮಿತ ದೈವ ಸ್ಥಾನದ ಶಿಲಾನ್ಯಾಸವನ್ನೂ ನೆರವೇರಿಸಿದ್ದರು.
ಈ ಹಿನ್ನೆಲೆಯಲ್ಲಿ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರರ್ವಾಧ್ಯಕ್ಷ ಮಹಾಲಿಂಗ , ಅಧ್ಯಕ್ಷ ಸತೀಶ ರವರ ನೇತೃತ್ವದಲ್ಲಿ ಕಾಲೋನಿಯ ಬಂಧುಗಳು ಸಾದ್ವಿಯವರನ್ನು ಭೇಟಿ ಮಾಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಾದ್ವಿಯವರು ಶ್ರೀ ಸಂಸ್ಥಾನದಲ್ಲಿ ಮಾತೃ ಪ್ರೇಮಭರಿತ ವಾತ್ಸಲ್ಯದಿಂದ ಎಲ್ಲರನ್ನು ಗೌರವಾದರಗಳಿಂದ ಉಪಚರಿಸಿ ಸತ್ಕರಿಸಿರುವುದು ನಮ್ಮ ಜೀವಿತದ ಅವಿಸ್ಮರಣೀಯ ಕ್ಷಣಗಳಾಗಿದೆ ಎಂದು ನಿಯೋಗದಲ್ಲಿದ್ದ ಭಾರತಿ ರವರು ತಿಳಿಸಿದ್ದಾರೆ.