ಸಾರ್ವಜನಿಕ ಹಿತಾಸಕ್ತಿ ಮೊಕ್ಕದ್ದಮೆ ಮತ್ತು ನ್ಯಾಯಾಂಗ ಚಟುವಟಿಕೆಯ ಉಪನ್ಯಾಸ
ಪುತ್ತೂರು : ಇಂದಿನ ಕಾನೂನಾತ್ಮಕ ಪರಿಕಲ್ಪನೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಗಳಿಂದ ನ್ಯಾಯಾಂಗವು ಕ್ರಿಯಾಶೀಲತೆಯಿಂದ ಬೆಳೆಯಲು ಸಹಕಾರಿಯಾಗಿದೆ. ಸಾರ್ವಜನಿಕ ಹಿತಾಸಕ್ತಿ ದಾವೆಗಳಿಂದ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯವು ಸುಲಭವಾಗಿ ಸಿಗುವಂತಾಗಿದೆ. ಎಂದು ಪುತ್ತೂರಿನ ನೋಟರಿ ಮತ್ತು ವಕೀಲರಾದ ಭಾಸ್ಕರ ಕೋಡಿಂಬಾಳ ಹೇಳಿದರು.
ಇವರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಮತ್ತು ಮಾನವಿಕ ಸಂಘದ ಆಶ್ರಯದಲ್ಲಿ ನಡೆದ ಸಾರ್ವಜನಿಕ ಹಿತಾಸಕ್ತಿ ಮೊಕ್ಕದ್ದಮೆ ಮತ್ತು ನ್ಯಾಯಾಂಗ ಚಟುವಟಿಕೆಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತಾನಾಡಿದರು. ಭಾರತೀಯ ಕಾನೂನು ವ್ಯವಸ್ಥೆಯ ಜಟಿಲತೆಗಳಿಂದಾಗಿ ಸಾರ್ವಜನಿಕ ಹಿತಾಸಕ್ತಿ ದಾವೆಗಳ ಜಾಗೃತಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಅಧ್ಯಯನವು ಇಂದಿನ ಕಾಲಘಟ್ಟಕ್ಕೆ ಬಹಳ ಮುಖ್ಯವೆನಿಸಿದೆ. ಬಡವರಿಗೆ ನ್ಯಾಯವನ್ನು ದೊರಕಿಸಿ ಕೊಡುವುದೇ ಸಾರ್ವಜನಿಕ ಹಿತಾಸಕ್ತಿ ಮೊಕ್ಕದ್ದಮೆಗಳ ಪ್ರಮುಖ ಉದ್ದೇಶವಾಗಿದೆ. ಪರಿಸರ ಮಾಲಿನ್ಯ ಭಯೋತ್ಪಾದನೆ, ರಸ್ತೆ ಭದ್ರತೆ ಹೀಗೆ ಒಟ್ಟಾರೆ ಸಾರ್ವಜನಿಕರ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುವ ಯಾವುದೇ ವಿಷಯವನ್ನು ನ್ಯಾಯಾಲಯದಲ್ಲಿ ಪರೀಶೀಲಿಸಬಹುದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತಾನಾಡಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವುದು ಇಂದಿಗೆ ಸೂಕ್ತ. ಕಾನೂನು ವ್ಯವಸ್ಥೆಯ ಬಗ್ಗೆ ತಿಳಿದುಕೊಂಡು ಸೂಕ್ತ ಅಧ್ಯಯನದಲ್ಲಿ ತೊಡಗಿಸಿಕೊಂಡಾಗ ನ್ಯಾಯಾಂಗ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಮಾನವಿಕ ಸಂಘದ ನಿರ್ದೇಶಕರಾದ ಭರತ್ಕುಮಾರ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಕಲಾ ವಿಭಾಗದ ವಿದ್ಯಾರ್ಥಿಗಳಾದ ಶಿಶಿಕ್ ಬಿ ಸ್ವಾಗತಿಸಿ, ಮುಹಮ್ಮದ್ ಮುಝಾಮಿಲ್ ವಂದಿಸಿ ಆಶ್ವಿನ್ ಎಂ ಎಂ ಕಾರ್ಯಕ್ರಮ ನಿರೂಪಿಸಿದರು