ಪುತ್ತೂರು: ಕೊಳ್ತಿಗೆ ಗ್ರಾಮ ಪಂಚಾಯತ್‌ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಕ್ಕಮ್ಮ ಹಾಗೂ ಉಪಾಧ್ಯಕ್ಷರಾಗಿ ಪ್ರಮೋದ್ ಕೆ.ಎಸ್.ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊಳ್ತಿಗೆ ಗ್ರಾಪಂ ಒಟ್ಟು 16 ಸದಸ್ಯ ಬಲ ಹೊಂದಿದ್ದು ಇದರಲ್ಲಿ ಕಾಂಗ್ರೆಸ್ ಬೆಂಬಲಿತ 11 ಸದಸ್ಯ ಬಲ ಹೊಂದಿತ್ತು ಆದರೆ ಬಿಜೆಪಿ ಬೆಂಬಲಿತ ಓರ್ವ ಸದಸ್ಯೆ ಕಾಂಗ್ರೆಸ್ ಸೇರ್ಪಡೆಯೊಂದಿಗೆ 12 ಸದಸ್ಯ ಬಲವನ್ನು ಪಡೆದುಕೊಂಡಿದೆ. ಬಿಜೆಪಿ ನಾಲ್ಕು ಸದಸ್ಯ ಬಲ ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಪುರುಷ ಮೀಸಲಾತಿ ಪ್ರಕಟಗೊಂಡಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಅಕ್ಕಮ್ಮ ಹಾಗೂ ಚಂದ್ರಾವತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮೋದ್ ಕೆ.ಎಸ್.ರವರು ನಾಮಪತ್ರ ಸಲ್ಲಿಸಿದ್ದರು. ಕೊನೆ ಕ್ಷಣದಲ್ಲಿ ಚಂದ್ರಾವತಿರವರು ನಾಮಪತ್ರ ಹಿಂತೆಗೆದುಕೊಂಡರು. ಆದ್ದರಿಂದ ಅಧ್ಯಕ್ಷರಾಗಿ ಅಕ್ಕಮ್ಮ ಹಾಗೂ ಉಪಾಧ್ಯಕ್ಷರಾಗಿ ಪ್ರಮೋದ್ ಕೆ.ಎಸ್.ರವರು ಅವಿರೋಧವಾಗಿ ಆಯ್ಕೆಯಾದರು. ಪುತ್ತೂರು ತಾಲೂಕು ತಹಶೀಲ್ದಾರ್ ಶಿವಶಂಕರ್‌ರವರು ಚುನಾವಣಾ ಅಧಿಕಾರಿಯಾಗಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುನೀಲ್ ಎಚ್.ಟಿ ಸಹಕರಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಶ್ಯಾಮ್‌ಸುಂದರ ರೈ, ನಿಕಟಪೂರ್ವ ಉಪಾಧ್ಯಕ್ಷೆ ನಾಗವೇಣಿ ಸದಸ್ಯರುಗಳಾದ ಪವನ್ ಡಿ.ಜಿ ದೊಡ್ಡಮನೆ, ಯತೀಂದ್ರ ಕೊಚ್ಚಿ, ಲತಾ ಕುಮಾರಿ, ಶುಭಲತಾ ರೈ, ಯಶೋಧಾ ಕೋಡಂಬು, ಯಶೋಧಾ ಬಾಬುರಾಜೇಂದ್ರ, ಪ್ರೇಮಾ, ವೇದಾವತಿ, ಕೆ.ಎಂ.ಬಾಲಕೃಷ್ಣ, ವಸಂತ ಕುಮಾರ್ ರೈ ದುಗ್ಗಳ, ಸುಂದರ, ಚಂದ್ರಾವತಿ ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾಂಗ್ರೆಸ್ ಸೇರ್ಪಡೆ
ಕೊಳ್ತಿಗೆ ಗ್ರಾಮ ಪಂಚಾಯತ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಸಂಖ್ಯೆ ಹೆಚ್ಚಿದ್ದರೂ ಎರಡನೇ ಅವಧಿಗೆ ಮೀಸಲಾತಿ ಪ್ರಕಟಗೊಂಡಾಗ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲಾತಿ ಪ್ರಕಟಗೊಂಡಿತ್ತು. ಗ್ರಾಪಂನ 16 ಸದಸ್ಯ ಬಲದಲ್ಲಿ ಅಕ್ಕಮ್ಮ ಹಾಗೂ ಚಂದ್ರಾವತಿ ಇಬ್ಬರು ಮಾತ್ರ ಪರಿಶಿಷ್ಟ ಜಾತಿ ಮಹಿಳಾ ಸದಸ್ಯೆಯಾಗಿದ್ದು ಇವರಿಬ್ಬರೂ ಬಿಜೆಪಿ ಬೆಂಬಲಿತ ಸದಸ್ಯಯಾಗಿದ್ದರು. ಆದ್ದರಿಂದ ಗ್ರಾಪಂನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇದ್ದರೂ ಅಧ್ಯಕ್ಷ ಸ್ಥಾನ ಬಹಳ ಸುಲಭದಲ್ಲಿ ಬಿಜೆಪಿ ಪಾಲಾಗುತ್ತಿತ್ತು. ಇದನ್ನು ಮನಗಂಡ ಕಾಂಗ್ರೆಸ್ ಮುಖಂಡರು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಅಕ್ಕಮ್ಮರವರು ಕಾಂಗ್ರೆಸ್ ಸೇರ್ಪಡೆಯಾಗುವುದರೊಂದಿಗೆ ಅಧ್ಯಕ್ಷ ಸ್ಥಾನವನ್ನು ತಮ್ಮ ತೆಕ್ಕೆಗೆ ಒಲಿಸಿಕೊಂಡಿದ್ದಾರೆ. ಇದರೊಂದಿಗೆ ಗ್ರಾಪಂನಲ್ಲಿ 12 ಕಾಂಗ್ರೆಸ್ ಬೆಂಬಲಿತ ಹಾಗೂ ನಾಲ್ಕು ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ.