ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ದೈಹಿಕ ಚಟುವಟಿಕೆ ಅಗತ್ಯವಾಗಿ ಬೇಕಾಗಿದೆ- ಶಾಸಕ ಅಶೋಕ್ ರೈ
ಪುತ್ತೂರು: ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ದೈಹಿಕ ಚಟುವಟಿಕೆಯೂ ದೇಹದ ಬೆಳವಣಿಗೆಗೆ ಮತ್ತು ಅವರಲ್ಲಿನ ಪ್ರತಿಭೆಗಳನ್ನು ಗುರುತಿಸಲು ಅತೀ ಅಗತ್ಯವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಸರ್ವೆ ಕಲ್ಪಣೆ ಪ್ರೌಢ ಶಾಲೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರೌಢ ಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರಿ ಶಾಲೆಗಳ ಕಡೆಗಣನೆ ಸಲ್ಲದು, ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಹೆಚ್ಚಿನ ಸೌಲಭ್ಯಗಳು ದೊರೆಯುವಂತಾಗಲಿದೆ. ಖಾಸಗಿ ಶಾಲೆಯನ್ನು ತೊರೆದು ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕು ಎಂಬ ಭಾವನೆ ಉಂಟಾಗುವಷ್ಟರ ಮಟ್ಟಿಗೆ ಸರಕಾರಿ ಶಾಲೆಗಳು ಅಭಿವೃದ್ದಿಯಾಗಬೇಕಿದೆ. ಇದಕ್ಕಾಗಿ ಸರಕಾರದ ಮುಂದೆ ವಿವಿಧ ಯೋಜನೆಗಳಿದ್ದು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.
ಎಲ್ಲಾ ಶಾಲೆಗಳಲ್ಲಿಯೂ ವಿಷಯವಾರು ಶಿಕ್ಷಕರ ನೇಮಕ:
ಎಲ್ಲಾ ಸರಕಾರಿ ಶಾಲಾ ಕಾಲೇಜುಗಳಲ್ಲಿ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಲು ಸರಕಾರ ಚಿಂತನೆ ನಡೆಸಿದ್ದು, ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. ಶಿಕ್ಷಕರ ನೇಮಕಾತಿ ವಿಚಾರ ನ್ಯಾಯಾಲಯದಲ್ಲಿರುವ ಕಾರಣ ಸ್ವಲ್ಪ ವಿಳಂಬವಾಗಿದ್ದು ಮುಂದಿನ ಒಂದೆರಡು ತಿಂಗಳಲ್ಲಿ ವಿವಾದ ಇತ್ಯರ್ಥವಾಗಿ ಎಲ್ಲಾ ಶಾಲೆಗಳಿಗೂ ವಿಷಯವಾರು ಶಿಕ್ಷಕರ ನೇಮಕಾತಿ ನಡೆಯಲಿದೆ. ಉನ್ನತ ತರಬೇತಿ ಪಡೆದ ಶಿಕ್ಷಕರೇ ಸರಕಾರಿ ಶಾಲೆಗಳಲ್ಲಿ ನೇಮಕವಾಗಲಿದ್ದು ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಬಲವನ್ನು ತಂದುಕೊಡಲಿದೆ ಎಂದು ಹೇಳಿದರು.
ಪುತ್ತೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ:
ಪುತ್ತೂರಿನ ಕಬಕದಲ್ಲಿ ಸುಮಾರು 20 ಎಕ್ರೆ ಜಾಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದ್ದು ಈಗಾಗಲೇ ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಜೊತೆ ಮಾತುಕತೆ ನಡೆಸಲಾಗಿದ್ದು, ಸುಮಾರು 70 ಕೋಟಿ ರೂ ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಾಣವಾಗಲಿದೆ. ಇದರಲ್ಲಿ ಒಂದು ಭಾಗ ಸ್ಟೇಡಿಯಂ ನಿರ್ಮಾಣವಾದರೆ ಇನ್ನೊಂದು ತರಬೇತಿ ಸ್ಟೇಡಿಯಂ ಹೊಂದಿರುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಕ್ರಿಕೆಟ್ ಆಸಕ್ತರು ಸ್ಟೇಡಿಯಂ ನಲ್ಲಿ ತರಬೇತಿ ಪಡೆದುಕೊಳ್ಳಬಹುದಾಗಿದೆ ಎಂದು ಶಾಸಕರು ಹೇಳಿದರು.
ವೇದಿಕೆಯಲ್ಲಿ ಕಲ್ಪಣೆ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಸಿದ್ದಿಕ್ ಸುಲ್ತಾನ್, ಮುಂಡೂರು ಗ್ರಾಪಂ ಸದಸ್ಯ ಕಮಲೇಶ್, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಲಾಡಿ, ಯುವ ಉದ್ಯಮಿ ಮಜೀದ್ ಬಾಳಯ, ಎಸ್ಡಿಎಂಸಿ ಸದಸ್ಯ ಅಝೀಝ್ ರೆಂಜಲಾಡಿ, ಮಾಜಿ ಗ್ರಾಪಂ ಸದಸ್ಯ ಗಣೇಶ್ ನೇರೋಲ್ತಡ್ಕ, ರಝಾಕ್ ಕೂಡುರಸ್ತೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಜಯರಾಂ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಕಾಂಚನ ವಂದಿಸಿದರು.