ನಾಟಿ ವೈದ್ಯರಿಗೆ ಸನ್ಮಾನ ಹಾಗೂ ಜಲ ಮರುಪೂರಣ ಮಾಹಿತಿ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಗ್ರಾಮ ವಿಕಾಸ ಸಂಘ, ವಿವೇಕ ಸಂಜೀವಿನಿ ಹಾಗೂ ಬನ್ನೂರು ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ನಾಟಿ ವೈದ್ಯರಿಗೆ ಸನ್ಮಾನ ಹಾಗೂ ಜಲ ಮರುಪೂರಣ ಮಾಹಿತಿ ಕಾರ್ಯಕ್ರಮ ಬನ್ನೂರು ಗ್ರಾಮದ ಕಂಜೂರು ನಲ್ಲಿ ಆ.23ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕಲಿಯುಗ ಸೇವ ಸಮಿತಿಯ ಸಂಚಾಲಕ ಸಂಪತ್ ಕುಮಾರ್ ಜೈನ್ ಮಾತನಾಡಿ, ಜೀವನಕ್ಕೆ ನೀರು ಅತ್ಯಗತ್ಯ ಸತತ ಬರಗಾಲದ ಮೂಲಕ ಜಾಗತಿಕ ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ನೀರಿನ ಸಂರಕ್ಷಣೆ, ಜಲ ಸಾಕ್ಷರತೆ, ಜಲಮೂಲಗಳ ಪುನಶ್ಚೇತನ ಮತ್ತು ಹಸಿರು ಹೊದಿಕೆಯನ್ನು ಗಮನದಲ್ಲಿಟ್ಟುಕೊಂಡು ಜಲ ಸಂರಕ್ಷಣೆ ಕಾರ್ಯಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಬೇಸಿಗೆಯಲ್ಲಿ ಅತಿಯಾದ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಜಲಮರುಪೂರಣ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಸಾರ್ವಜನಿಕರು ತಮ್ಮ ಬಾವಿ ಹಾಗೂ ಬೋರ್‌ವೆಲ್‌ಗಳಿಗೆ ನೀರು ಇಂಗಿಸಲು ಮುಂದಾದರೆ ಅಂತರ್ಜಲ ಮಟ್ಟವನ್ನು ವೃದ್ಧಿಸಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇಬ್ಬರು ನಾಟಿ ವೈದ್ಯೆಯರಾದ ಗಿರಿಜಾ ಮತ್ತು ಗಿರಿಜಾ ಇವರನ್ನು ಸನ್ಮಾನಿಸಲಾಯಿತು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಇಂದಿರಾ ಬಿ. ಕೆ. ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬನ್ನೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಸ್ಮಿತಾ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಬನ್ನೂರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಶೀನಪ್ಪ ಕುಲಾಲ್ ಮತ್ತು ಸದಸ್ಯರು ಉಪಸ್ಥಿತರಿದ್ದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಉಪನ್ಯಾಸಕಿ ಅನುಪಮಾ ಸ್ವಾಗತಿಸಿ, ಗ್ರೀಷ್ಮ ವಂದಿಸಿದರು. ಉಪನ್ಯಾಸಕಿ ಸುಮ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here