ನೆಲ್ಯಾಡಿ: ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಜಲಜೀವನ್ ಮಿಷನ್ ಕಾಮಗಾರಿ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನೆಲ್ಯಾಡಿ ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಯು.ಯಾನೆ ಸಲಾಂ ಬಿಲಾಲ್ ಅವರ ಅಧ್ಯಕ್ಷತೆಯಲ್ಲಿ ಆ.22ರಂದು ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. 2.37 ಕೋಟಿ ರೂ.ಅನುದಾನದಲ್ಲಿ ನೆಲ್ಯಾಡಿ ಗ್ರಾಮದಲ್ಲಿ ಜಲಜೀವನ್ ಯೋಜನೆ ಅನುಷ್ಠಾನಗೊಳ್ಳಲಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಯೋಜನೆಯ ಇಂಜಿನಿಯರ್ರವರು ಮಾಹಿತಿ ನೀಡಿದರು. ಸದ್ರಿ ಯೋಜನೆಯಡಿ ಸಮರ್ಪಕ ಕಾಮಗಾರಿ ನಡೆಯುತ್ತಿಲ್ಲ. ಅಲ್ಲಲ್ಲಿ ಗುಂಡಿ ಅಗೆದು ಹಾಕಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸದಸ್ಯ ಅಬ್ದುಲ್ ಜಬ್ಬಾರ್ ಅವರು, ಕಾಮಗಾರಿ ವೇಳೆ ಏಕಾಏಕಿ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಗಿದೆ. ಇನ್ನೂ ನೀವು ಪೈಪ್ಲೈನ್ ಕೊಟ್ಟಿಲ್ಲ. ಇನ್ನು ಹೇಗೆ ಕೊಡುತ್ತೀರಿ ಎಂದು ಯೋಜನೆಯ ಇಂಜಿನಿಯರ್ ಅವರನ್ನು ಪ್ರಶ್ನಿಸಿದರು. ಸದಸ್ಯ ಜಯಾನಂದ ಬಂಟ್ರಿಯಾಲ್ರವರು ಮಾತನಾಡಿ, ಯೋಜನೆ ಕುರಿತು ಪಂಚಾಯತ್ ಸದಸ್ಯರಿಗೇ ಸರಿಯಾದ ಮಾಹಿತಿ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ರವಿಪ್ರಸಾದ್ರವರು ಮಾತನಾಡಿ, ರಾಮನಗರದಲ್ಲಿ ರಸ್ತೆ ಬದಿಯೇ ಪೈಪ್ ಲೈನ್ ಹಾಕಲಾಗಿದೆ. ಇಲ್ಲಿ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಸಂಚಾರಕ್ಕೆ ತೊಂದರೆಯಾಗಿದ್ದು ಕೂಡಲೇ ಸರಿಪಡಿಸಿಕೊಡಬೇಕೆಂದು ಹೇಳಿದರು. ಪೈಪು ಹಾಕಲು ತೆಗೆದಿರುವ ಗುಂಡಿಗಳಲ್ಲಿ ಮಣ್ಣು ತುಂಬಿಕೊಂಡಿದೆ ಎಂದು ವರ್ಗೀಸ್ ಮಾದೇರಿ ಹೇಳಿದರು. ಇದ್ದ ಸಂಪರ್ಕ ಕಡಿತಗೊಳಿಸಿ ಹೊಸದಾಗಿ ಸಂಪರ್ಕ ಕೊಡುವುದು ಬೇಡ. ಇದ್ದ ಸಂಪರ್ಕ ಕಡಿತಗೊಳಿಸಿದಲ್ಲಿ ಜನರಿಗೆ ತೊಂದರೆಯಾಗಲಿದೆ ಎಂದು ಕೆ.ಪಿ.ಅಬ್ರಹಾಂ ಹೇಳಿದರು. ಕುಡಿಯುವ ನೀರು ಸರಿಯಾಗಿ ಕೊಡಿ ಎಂದು ಗ್ರಾಮಸ್ಥ ವಾಸುದೇವ ಗೌಡ ಹೇಳಿದರು. ಒಟ್ಟಿನಲ್ಲಿ ಜಲಜೀವನ್ ಕಾಮಗಾರಿ ಬಗ್ಗೆ ಗ್ರಾಮಸ್ಥರು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಪೈಪ್ಲೈನ್ ಕಾಮಗಾರಿ ಪೂರ್ಣಗೊಳ್ಳದೇ ಗ್ರಾಮ ಪಂಚಾಯತ್ಗೆ ಹಸ್ತಾಂತರ ಪಡೆದುಕೊಳ್ಳುವುದಿಲ್ಲ ಎಂದು ಸದಸ್ಯ ಜಬ್ಬಾರ್ ಹೇಳಿದರು. ಯೋಜನೆ ಶೀಘ್ರ ಸರ್ಮಪಕವಾಗಿ ಪೂರ್ಣಗೊಳಿಸುವಂತೆ ಅಧ್ಯಕ್ಷ ಸಲಾಂ ಬಿಲಾಲ್ ಹೇಳಿದರು.
ಎಲ್ಲಾ ಕಡೆ ಅನುದಾನ ಕೊಡಿ:
ಮಾದೇರಿ ಭಾಗಕ್ಕೆ ಶಾಸಕರ ಅನುದಾನ ಹಂಚಿಕೆಯಾಗಿದೆ. ಗ್ರಾಮದ ಇತರೇ ಭಾಗಗಳಿಗೂ ಅನುದಾನ ನೀಡಬೇಕೆಂದು ಗ್ರಾಮಸ್ಥ ಗುಡ್ಡಪ್ಪ ಶೆಟ್ಟಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಆನಂದ ಪಿಲವೂರು ಅವರು, ಮಾದೇರಿ ಭಾಗದಲ್ಲಿನ ಬಹುತೇಕ ರಸ್ತೆಗಳು ತೀರಾ ಹದಗೆಟ್ಟಿವೆ ಎಂದರು. ಗ್ರಾ.ಪಂ.ಜಾಗದ ಗಡಿಗುರುತು, ಸಂತೆಕಟ್ಟೆ ಒಳಗೆ ಬೀದಿದೀಪ ಅಳವಡಿಕೆ, ನೆಲ್ಯಾಡಿ ಹೊರಠಾಣೆಗೆ ಹೆಚ್ಚುವರಿ ಪೊಲೀಸರ ನಿಯೋಜನೆ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲ್ಯಾಬ್ ಟೆಕ್ನಿಷಿಯನ್ ನೇಮಕ, ನೆಲ್ಯಾಡಿ ಶಾಲೆಗೆ 20 ಸೆಂಟ್ಸ್ ಜಮೀನು ನೀಡುವುದು, ಗ್ರಾಮಕರಣಿಕರ ಕಚೇರಿ ಇರುವ ಕಟ್ಟಡ ದುರಸ್ತಿ, ಮೊರಂಕಳ ರಸ್ತೆಗೆ ಕಾಂಕ್ರಿಟೀಕರಣ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಗ್ರಾಮಸ್ಥರಾದ ವರ್ಗೀಸ್ ಮಾದೇರಿ, ಕೆ.ಪಿ.ಅಬ್ರಹಾಂ, ಪಿ.ಜೆ.ಸೆಬಾಸ್ಟಿಯನ್, ಅಣ್ಣಿ ಎಲ್ತಿಮಾರ್, ಗಣೇಶ್ ಪೊಸೊಳಿಗೆ, ಉಮೇಶ್ ಪೊಸೊಳಿಗೆ ಮತ್ತಿತರರು ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು.
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಅನ್ನಮ್ಮ ಕೆ.ಸಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪುಷ್ಪಾವತಿ, ಗ್ರಾಮಕರಣಿಕರಾದ ಲಾವಣ್ಯ, ಕೆಎಸ್ಆರ್ಟಿಸಿಯ ಅಬ್ಬಾಸ್ ಕೆ., ಸಿಆರ್ಪಿ ಪ್ರಕಾಶ್ ಬಿ., ನೆಲ್ಯಾಡಿ ಹೊರಠಾಣೆ ಹೆಡ್ಕಾನ್ಸ್ಸ್ಟೇಬಲ್ ಕುಶಾಲಪ್ಪ ನಾಯ್ಕ್, ಕೃಷಿ ಅಧಿಕಾರಿ ಭರಮಣ್ಣವರ, ಅರಣ್ಯ ಇಲಾಖೆಯ ಆಕಾಶ್, ಜನಾರ್ದನ ಡಿ.ಪಿ., ಸಾಮಾಜಿಕ ಅರಣ್ಯ ಇಲಾಖೆಯ ಕೃಷ್ಣಜೋಗಿ ಅವರು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ, ಸದಸ್ಯರಾದ ಚೇತನಾ, ಅಬ್ದುಲ್ ಜಬ್ಬಾರ್, ಜಯಾನಂದ ಬಂಟ್ರಿಯಾಲ್, ರವಿಪ್ರಸಾದ್ ಶೆಟ್ಟಿ, ಉಷಾ ಜೋಯಿ, ಜಯಲಕ್ಷ್ಮೀ ಪ್ರಸಾದ್, ಜಯಂತಿ, ಶ್ರೀಲತಾ ಸಿ.ಹೆಚ್., ಮಹಮ್ಮದ್ ಇಕ್ಬಾಲ್, ಪ್ರಕಾಶ್ ಕೆ., ಆನಂದ ಪಿಲವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಆನಂದ ಗೌಡ ಸ್ವಾಗತಿಸಿದರು. ಲೆಕ್ಕಸಹಾಯಕ ಅಂಗುರವರು ವರದಿ, ಜಮಾಖರ್ಚಿನ ವಿವರ ಮಂಡಿಸಿದರು. ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು.