ವಿದ್ಯಾರ್ಥಿ ಜೀವನ ಅಧ್ಯಯನಕ್ಕೆ ಮೀಸಲಾಗಿರುವಂತಹದ್ದು : ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ವಿದ್ಯಾರ್ಥಿ ಜೀವನ ಅಧ್ಯಯನಕ್ಕೆ ಮೀಸಲಾಗಿರುವಂತಹದ್ದು. ಆದರೆ ಇಂದಿನ ದಿನಮಾನಗಳಲ್ಲಿ ಅಧ್ಯಯನ ಪ್ರಕ್ರಿಯೆಯನ್ನು ಕೆಡಿಸುವಂತಹ ಹಲವಾರು ವಿಚಾರಗಳು ನಮ್ಮನ್ನು ಬಾಧಿಸುತ್ತಿವೆ. ಕಾಲೇಜು ಕ್ಯಾಂಪಸ್ಗಳಲ್ಲಿ ಡ್ರಗ್ಸ್ ವಿನಿಮಯವಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಸ್ಪಷ್ಟ ಗುರಿಯಿಟ್ಟುಕೊಂಡು, ಆತ್ಮಸಾಕ್ಷಿಯಾಗಿ ಮುನ್ನಡೆದಲ್ಲಿ ಯಶಸ್ಸು ನಮ್ಮದಾಗಲು ಸಾಧ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.
ನಮ್ಮ ವಿಕಾಸಕ್ಕೆ ಕಾಲೇಜು ಜೀವನವನ್ನು ವೇದಿಕೆಯನ್ನಾಗಿ ಮಾರ್ಪಡಿಸಿಕೊಳ್ಳಬೇಕು. ಸಂಸ್ಕಾರಯುತ ಬದುಕನ್ನು ನಿರೂಪಿಸುವಲ್ಲಿ ಶಿಕ್ಷಣ ನಮ್ಮ ದಾರಿದೀಪವಾಗಬೇಕು. ಬ್ರಹ್ಮಚರ್ಯ ಎಂಬುದು ಸಾಧನೆಯ ಅವಧಿ. ಹಾಗಾಗಿ ಬ್ರಹ್ಮಚರ್ಯದ ಕಾಲಘಟ್ಟದಲ್ಲಿರುವ ವಿದ್ಯಾರ್ಥಿದೆಸೆ ನಮ್ಮನ್ನು ಜ್ಞಾನದ ಉತ್ತುಂಗಕ್ಕೆ ಏರಿಸಬೇಕು. ಪರಿಶುದ್ಧ ವಾತಾವರಣದಲ್ಲಿ, ಸುಭದ್ರ ವ್ಯವಸ್ಥೆಯಲ್ಲಿ ಅಧ್ಯಯನ ನಡೆಸಿದಾಗ ಗೆಲುವು ಸುಲಭಸಾಧ್ಯವೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಭಾರತೀಯ ಪರಂಪರೆ, ಉನ್ನತಿಕೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ವಿದ್ಯಾರ್ಥಿಗಳನ್ನು ಆರತಿ ಬೆಳಗಿ ಸಂಸ್ಥೆಗೆ ಸ್ವಾಗತಿಸುವ ಪರಿಪಾಠ ನಮ್ಮದು. ಇದು ದೇಹಕ್ಕೆ ಬೆಳಗುವ ಆರತಿಯಲ್ಲ. ದೇಹದೊಳಗೆ ಅಡಕವಾಗಿರುವ ಭಗವಂತನಿಗೆ ಬೆಳಗುವ ದೀಪ. ಆದ್ದರಿಂದ ಪ್ರತಿಯೊಬ್ಬನ ಒಡಲಲ್ಲೂ ದೇವರಿದ್ದಾರೆ ಎಂಬ ದೃಢ ನಂಬಿಕೆಯ ಮುಖಾಂತರ ವ್ಯಕ್ತಿಗಳನ್ನು ಕಾಣುವ, ಗೌರವಿಸುವ ಉದಾತ್ತ ಜೀವನಮೌಲ್ಯ ಹಿಂದೂ ಧರ್ಮದಲ್ಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಪ್ರಥಮ ವರ್ಷದ ಪದವಿ ತರಗತಿಗಳಿಗೆ ಸೇರ್ಪಡೆಗೊಂಡ ಪ್ರತಿಯೊಬ್ಬ ವಿದ್ಯಾರ್ಥಿಗೂ ಆರತಿ ಬೆಳಗಿ ತಿಲಕವನ್ನಿತ್ತು ಸ್ವಾಗತಿಸಲಾಯಿತು.
ವಿದ್ಯಾರ್ಥಿನಿಯರಾದ ಅಂಕಿತ ಹಾಗೂ ಪಂಚಮಿ ಬಾಕಿಲಪದವು ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ವಂದಿಸಿದರು. ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು.