ಆತ್ಮದೊಂದಿಗಿನ ಅನುಸಂಧಾನದ ಮೂಲಕ ಸಾಧನೆ ಸಾಧ್ಯ : ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ಧರ್ಮದ ನೆಲೆಯಲ್ಲಿ ಆತ್ಮದರ್ಶನವನ್ನು ಕಂಡುಕೊಳ್ಳುವ ವಿಧಾನಗಳನ್ನು ಹಿಂದೂಧರ್ಮ ಬೋಧಿಸಿದೆ. ಆತ್ಮನಲ್ಲಿನ ಪರಮಾತ್ಮ ಶಕ್ತಿಯನ್ನು ಗುರುತಿಸುವ ಪ್ರಕ್ರಿಯೆಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ನಮ್ಮೊಳಗಿನ ಶಕ್ತಿ ಅನಾವರಣಗೊಂಡಾಗ, ಅಂತಃಸ್ಥವಾಗಿರುವ ಚೈತನ್ಯವನ್ನು ಉದ್ದೀಪನಗೊಳಿಸುವ ಕಾರ್ಯದಲ್ಲಿ ನಾವು ತೊಡಗಿಕೊಂಡಾಗ ಅಸಾಧ್ಯ ವಿಚಾರಗಳೂ ಸುಲಭಸಾಧ್ಯವೆನಿಸುತ್ತಾ ಸಾಗುತ್ತವೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಹಿಂದೂಧರ್ಮದಲ್ಲಿ ಆತ್ಮದರ್ಶನ’ ವಿಚಾರವಾಗಿ ಶನಿವಾರ ಮಾತನಾಡಿದರು.
ನಮ್ಮದೇಹದಲ್ಲಿ ಎಂಟು ಚಕ್ರಗಳಿವೆ. ಮೂಲಾಧಾರ ಚಕ್ರದಿಂದ ತೊಡಗಿ ನಾವು ಸಹಸ್ರಾರ ಚಕ್ರದ ವರೆಗಿನ ಚಕ್ರಗಳನ್ನು ಉದ್ದೀಪನಗೊಳಿಸುತ್ತಾ ಸಾಗಬೇಕು. ಎಲ್ಲಾ ಚಕ್ರಗಳನ್ನು ಚೈತನ್ಯಗೊಳಿಸಿದವನು ಮಹಾಯೋಗಿ, ಸಿದ್ಧಪುರುಷ ಎನಿಸಿಕೊಳ್ಳುತ್ತಾನೆ, ಹಠಸಾಧಕನೆನಿಸುತ್ತಾನೆ. ಆದರೆ ಕನಿಷ್ಟ ಉನ್ನತಿಕೆಯನ್ನಾದರೂ ನಾವು ಸಾಧಿಸಬೇಕಾದಲ್ಲಿ ಮೂಲಾಧಾರ ಚಕ್ರದಿಂದ ತೊಡಗಿ ನಂತರದ ಕೆಲವು ಚಕ್ರಗಳನ್ನಾದರೂ ಉದ್ದೀಪಿಸುವ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಒಂದು ಸ್ಪಷ್ಟ ನಿರ್ಧಾರ, ಧರ್ಮದ ಬಗೆಗಿನ ಶ್ರದ್ಧೆ ನಮ್ಮನ್ನು ಸಾಧನೆಯೆಡೆಗೆ ಒಯ್ಯಬಲ್ಲುದು ಎಂದು ತಿಳಿಸಿದರು.
ನಮ್ಮ ಬದುಕಿನುದ್ದಕ್ಕೂ ನಮ್ಮ ಜತೆಗಿರುವುದು ನಮ್ಮ ಆತ್ಮ ಮಾತ್ರ. ಅಪ್ಪ-ಅಮ್ಮ, ಗಂಡ-ಹೆಂಡತಿ, ಮಗ, ಮಗಳು, ಬಂಧುಗಳು ಎಂಬ ಸಂಬಂಧಗಳು ನಮ್ಮ ಬದುಕಿನ ಅನಂತರ ನಶಿಸಿಹೋಗುತ್ತವೆ. ಅಂತಿಮವಾಗಿ ಉಳಿಯುವುದು ನಮ್ಮೊಳಗಿರುವ ಆತ್ಮ ಮಾತ್ರ. ಆದರೆ ಕೇವಲ ಬದುಕಿರುವವರೆಗಷ್ಟೇ ಜತೆಗಿರುವ ಮಂದಿಗಳಲ್ಲಿ ನಾವು ತೋರುವ ವಿಶ್ವಾಸ, ಪ್ರೀತಿಗಳನ್ನು ನಮ್ಮದೇ ದೇಹದ ಒಳಗಿರುವ ಆತ್ಮದೆಡೆಗೆ ನಾವು ತೋರದಿರುವುದು ದುರಾದೃಷ್ಟ. ಹಾಗಾಗಿ ಆತ್ಮದೊಂದಿಗೆ ಅನುಸಂಧಾನ ನಡೆಸುವ ಪ್ರಕ್ರಿಯೆಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು ಹಾಗೂ ಅಂತಹ ಅನುಸಂಧಾನ ನಡೆಯಬೇಕಾದಲ್ಲಿ ದೇಹದ ಚಕ್ರಗಳನ್ನು ಉದ್ದೀಪನಗೊಳಿಸಬೇಕು ಎಂದರು.
ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಹಿಂದೂ ಧರ್ಮ ವಿವರಿಸಿದೆ. ಇಲ್ಲಿ ಧರ್ಮದ ಮೂಲಕ ಅರ್ಥ ಸಾಧನೆಯಾಗಿ ಅದರಿಂದ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಆದರೆ ಮೋಸ, ವಂಚನೆಗಳಿಂದ ಗಳಿಸುವ ಅರ್ಥಕ್ಕೆ ಮೌಲ್ಯವಿಲ್ಲ. ಅದು ಮೋಕ್ಷ ಸಾಧಕವೂ ಎನಿಸುವುದಿಲ್ಲ. ಹಾಗಾಗಿ ಧರ್ಮದ ಪರಿಧಿಯಲ್ಲಿ ಅರ್ಥ, ಕಾಮಗಳಿದ್ದಾಗ ನಾವು ಧಾರ್ಮಿಕರೆನಿಸಿ ಬದುಕುವುದಕ್ಕೆ ಯೋಗ್ಯರಾಗುತ್ತೇವೆ ಎಂದರು.
ಬೆಳಗ್ಗೆ ನಾಲ್ಕರಿಂದ ಆರರವರೆಗಿನ ಅವಧಿಯನ್ನು ಬ್ರಾಹ್ಮೀ ಮುಹೂರ್ತ ಎನ್ನುತ್ತೇವೆ. ಈ ಕಾಲದಲ್ಲಿ ನಾವು ಸಂಕಲ್ಪಿಸುವ ವಿಚಾರಗಳು ಸಾಕಾರಗೊಳ್ಳುತ್ತವೆ. ಆದರೆ ನಮ್ಮ ನಡುವಣ ಅನೇಕರು ಬ್ರಾಹ್ಮೀ ಮುಹೂರ್ತಕ್ಕಿಂತಲೂ ಅದೆಷ್ಟೋ ಸಮಯದ ನಂತರ ಏಳುವುದರಿಂದ ಸಾಧನೆಯ ತಳಹದಿಯನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದರಲ್ಲದೆ ಹಿಂದೂ ಧರ್ಮದಿಂದ ಜಗತ್ತಿನ ಅನೇಕರು ತಮಗೆ ಬೇಕಾದ ಸಂಗತಿಗಳನ್ನು ತೆಗೆದುಕೊಂಡು, ತನ್ಮೂಲಕ ಸಾಧನೆಗೈಯುತ್ತಿದ್ದಾರೆ. ಆದರೆ ಅನೇಕ ಹಿಂದೂಗಳೇ ತಮ್ಮ ಧರ್ಮದಲ್ಲಿನ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸದಿರುವುದು ವಿಷಾದಕರ ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾತ ಗೋರೆ, ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು.