ಪುತ್ತೂರು : ಈ ಮಣ್ಣಿನ ಅದ್ಬುತ ಶಕ್ತಿಯಾಗಿರುವಂತಹ ಕಲ್ಕುಡ -ಕಲ್ಲುರ್ಟಿ ದೈವಗಳ ಕೃಪೆ ಹಾಗೂ ಪುತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಈ ಕೆಸರ್ದಾ ಗೊಬ್ಬು ಕಾರ್ಯಕ್ರಮವೂ ಅತ್ಯುತ್ತಮ ರೀತಿಯಲ್ಲಿ ಸಾಗಲಿಯೆಂದು , ಕಬಕ ಬಿಲ್ಲವ ಗ್ರಾಮ ಸಮಿತಿ ಇದರ ಸ್ಥಾಪಕಧ್ಯಕ್ಷ ಜಿನ್ನಪ್ಪ ಪೂಜಾರಿ ಮುರ ಹೇಳಿದರು.
ಆ.27 ರಂದು ಪುತ್ತೂರಿನ ಕಾರ್ಜಾಲು ಕೆಸರು ಗದ್ದೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಬಿಲ್ಲವ ಸಂಘ ರಿ , ಪುತ್ತೂರು ಹಾಗೂ ಕಬಕ ಗ್ರಾಮ ಸಮಿತಿ ಇದರ ವತಿಯಿಂದ ಆಯೋಜಿಸಲಾದ ತಾಲೂಕು ಮಟ್ಟದ “ಬಿರುವೆರ್ನಾ ಕೆಸರ್ದ ಗೊಬ್ಬು ‘ ಗ್ರಾಮೀಣ ಕ್ರೀಡಾಕೂಟದ ಉದ್ಘಾಟನೆಯನ್ನು ಅವರು ದೀಪ ಪ್ರಜ್ವಲನೆ ಮೂಲಕ ನೆರವೇರಿಸಿ , ಶುಭಕೋರಿದರು.
ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಜಾಲು ಭಂಡಾರದ ಮನೆ ಯಜಮಾನ ಅಜಿತ್ ಕುಮಾರ್ ಜೈನ್ ತೆಂಗಿನ ಹಿಂಗಾರ ಅರಳಿಸಿ ಶುಭಕೋರಿದರು. ಅಧ್ಯಕ್ಷತೆ ವಹಿಸಿದ ಕಬಕ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ವಸಂತ ಪೂಜಾರಿ ಸೇವಿರೆ ಮಾತನಾಡಿ,ನಿಜವಾಗಿಯೂ ಇದೊಂದು ಕನಸಿನ ರೀತಿಯಲ್ಲಿ ಜರುಗಿದ ಕಾರ್ಯಕ್ರಮದಂತೆ ಭಾಸವಾಗುತ್ತದೆಯೆಂದು ಆಶ್ಚರ್ಯ ವ್ಯಕ್ತಪಡಿಸಿ , ಕಾರ್ಯಕ್ರಮ ನಡೆಸಲು ಗದ್ದೆ ಹಾಗೂ ನೀರಿನ ಸೌಕರ್ಯ ಒದಗಿಸಿಕೊಟ್ಟಂತಹ ಯಜಮಾನ ಅಜಿತ್ ಕುಮಾರ್ ಜೈನ್ ಇವರಿಗೆ ಕೃತಜ್ಞತೆ ಸಲ್ಲಿಸಿ , ಆರ್ಥಿಕ ಶಕ್ತಿ ತುಂಬಿದ ಗ್ರಾಮದ ಜನತೆಗೂ ವಂದಿಸಿದರು. ನಗರಸಭಾ ಸದಸ್ಯೆ ಯಶೋಧಾ ಪೂಜಾರಿ ಬಿರಾವು ಹಾಗೂ ಕಲಾವಿದ ಕೃಷ್ಣಪ್ಪ ಇವರುಗಳು ಕೂಡಾ ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿದರು.
ಶೇಖರ ಪೂಜಾರಿ ಪಟ್ಲ , ವಸಂತ ಪೂಜಾರಿ ಗಣೇಶ್ಭಾಗ್ ,ಅಣ್ಣಿ ಪೂಜಾರಿ ಚಿಕ್ಕಮುಡ್ನೂರು ,ವಿಶ್ವನಾಥ ಪೂಜಾರಿ ಶೇವಿರೆ ,ವಿಷ್ಣು ಮೆಟಲ್ಸ್ ಮಾಲೀಕ ಕೇಶವ ಪೂಜಾರಿ ಮುರ , ಸಹಿತ ಬಿಲ್ಲವ ಗ್ರಾಮ ಸಮಿತಿ ಪದಾಧಿಕಾರಿಗಳು , ಸದಸ್ಯರು ಮಹಿಳಾ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು , ಮಕ್ಕಳು ಹಾಗೂ ಕ್ರೀಡಾ ಅಭಿಮಾನಿಗಳು ಹಾಜರಿದ್ದರು.
ಮನ್ಮಥ ಶೆಟ್ಟಿ ಪುತ್ತೂರು ನಿರೂಪಿಸಿ , ಕಲಾವಿದ ಕೃಷ್ಣಪ್ಪ ವಂದಿಸಿದರು. ಬಳಿಕ ಉಪಹಾರ ನಡೆದು , ಕೆಸರುಗದ್ದೆ ಆಟೋಟಾ ನಡೆಯಿತು.