ಪುತ್ತೂರು:ಮನೆಯೊಂದರೊಳಗಿದ್ದ 1 ಲಕ್ಷ ರೂ.ಮೌಲ್ಯದ ಅಡಿಕೆ ಮತ್ತು 10 ಸಾವಿರ ರೂ.ನಗದು ಕಳವು ಮಾಡಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ನೆಕ್ಕರೆ ಡಿವೈನ್ ಮರ್ಸಿ ಮನೆ ಸುನಿಲ್ ಮಿರಾಂದಾ ಎಂಬವರ ಪತ್ನಿ ಕಾರ್ಮಿನ್ ಮಿರಾಂದಾ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.ತನ್ನ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ತಾಯಿಯವರು ಅವರ ಮನೆಯಲ್ಲಿ ಅಡಿಕೆ ಒಣಗಿಸಲು ಜಾಗ ಇಲ್ಲದೇ ಇರುವುದರಿಂದ ನಮ್ಮ ಮನೆಯ ಅಂಗಳದಲ್ಲಿಯೇ ಒಣಗಿಸಿ ಬಳಿಕ ಮನೆಯಲ್ಲಿ ಕೆಲಸಗಾರರಿಂದ ಅಡಿಕೆಯನ್ನು ಸುಲಿದು ಶೇಖರಣೆ ಮಾಡಿಟ್ಟಿದ್ದರು.ಸುಮಾರು 276 ಕೆಜಿಯಷ್ಟು ಸುಲಿದ ಅಡಿಕೆಯನ್ನು ಆರು ಗೋಣಿಯಲ್ಲಿ ತುಂಬಿಸಿಡಲಾಗಿತ್ತು.
ಆ.24ರಂದು ಮಗಳಿಗೆ ಅನಾರೋಗ್ಯ ಇದ್ದ ಕಾರಣ ಸಂಜೆ 7 ಗಂಟೆಗೆ ಮನೆಯ ಹಿಂದಿನ ಜಾಗದ ವರ್ಕ್ ಏರಿಯಾದ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ ಮುಂದಿನ ಬಾಗಿಲಿಗೆ ಬೀಗ ಹಾಕಿ ತಾನು ತಾಯಿ ಮನೆಯಾದ ರೋಟರಿಪುರಕ್ಕೆ ಹೋಗಿದ್ದೆ.ಆ.25ರಂದು ಬೆಳಿಗ್ಗೆ ತಮ್ಮ ವಿನಯ್ ಸುನಿಲ್ ಮನೆಗೆ ಬಂದು, ಮನೆಯ ಎದುರು ಬಾಗಿಲನ್ನು ಕೀ ಮೂಲಕ ತೆರೆಯಲಾಗದೆ ಮನೆಯ ಹಿಂಬದಿಯ ವರ್ಕ್ ಏರಿಯಾದ ಇನ್ನೊಂದು ಕಡೆಯಿಂದ ಮನೆಯ ಒಳಗಡೆ ಬರುವ ಬೀಗವನ್ನು ತೆರೆದು ಬಂದಾಗ ಮನೆಯ ಎದುರು ಬಾಗಿಲಿನ ಒಳಗಡೆಯಿಂದ ಬೀಗ ಹಾಕಿದ್ದು ಮನೆಯ ಎದುರು ಹಾಲ್ನಲ್ಲಿ ಸುಲಿದು ತೂಕ ಮಾಡಿ ಗೋಣಿಯಲ್ಲಿ ತುಂಬಿಸಿಟ್ಟಿದ್ದ ಆರು ಗೋಣಿ ಅಡಿಕೆ ಮತ್ತು ಕೆಲಸಗಾರರಿಗೆ ಕೊಡಲೆಂದು ಬೆಡ್ ರೂಮ್ನ ಕಪಾಟಿನಲ್ಲಿ ಇಟ್ಟಿದ್ದ ರೂ.10 ಸಾವಿರ ಹಣ ಇಲ್ಲವಾಗಿತ್ತು.ಬೆಡ್ ರೂಮ್ ಕಪಾಟಿನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಕಳವಾದ ಅಡಿಕೆಯ ಮೌಲ್ಯ 1 ಲಕ್ಷ ರೂ.ಎಂದು ಅಂದಾಜಿಸಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.