ಪುತ್ತೂರು: ಆ.24ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಚೂರು ಇರಿತಕ್ಕೊಳಗಾಗಿ ಮೃತಪಟ್ಟ ಯವತಿ ಕುದ್ದುಪದವಿನ ಗೌರಿಯವರ ಮನೆಗೆ ಆ.26ರಂದು ಯಾದವ ಸಮಾಜದ ಪ್ರಮುಖರು ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾತನಾಡಿದ ಯಾದವ ಸಭಾ ಕೇಂದ್ರ ಸಮಿತಿಯ ಪ್ರಮುಖರು, ಈ ಬಡ ಕುಟುಂಬಕ್ಕೆ ಸರಕಾರದಿಂದ ಸ್ಪಂದನೆ ನೀಡುವ ಕೆಲಸವನ್ನು ಮಾಡುತ್ತೇವೆ ಎಂದು ಶಾಸಕರು ಹೇಳಿದ್ದಾರೆ. ನಮ್ಮ ಸಮಾಜದಿಂದಲೂ ಸಹಾಯ ಮಾಡುವುದಕ್ಕೆ ನಾವು ಬದ್ಧರಿದ್ದೇವೆ. ಯಾವ ಸಮಾಜಕ್ಕೂ ಇಂತಹ ಪರಿಸ್ಥಿತಿ ಬರಬಾರದು. ಎಲ್ಲಾ ಸಮಾಜದವರು ಸೇರಿ ಇದನ್ನು ಖಂಡಿಸಬೇಕು. ಹತ್ಯೆಗೀಡಾದ ಯುವತಿಗೆ ನ್ಯಾಯ ಒದಗಿಸಬೇಕು. ಇವರ ಮನೆಯ ಪರಿಸ್ಥಿತಿ ನೋಡುವಾಗ ಅತ್ಯಂತ ಬೇಸರವಾಗುತ್ತದೆ. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು. ಇದು ಪ್ರಜ್ಞಾವಂತ ನಾಗರಿಕರು ತಲೆತಗ್ಗಿಸುವ ವಿಚಾರ. ಸರಕಾರದ ವತಿಯಿಂದ ಅವರಿಗೆ ಪರಿಹಾರವನ್ನು ಒದಗಿಸಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಯಾದವ ಸಭಾ ಕೇಂದ್ರ ಸಮಿತಿಯ ಅಧ್ಯಕ್ಷ ಎ.ಕೆ ಮಣಿಯಾಣಿ, ಉಪಾಧ್ಯಕ್ಷ, ಗೋಪಾಲ ಅರಿಕೆಪದವು, ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು, ಕಾರ್ಯದರ್ಶಿ ಚಂದ್ರಶೇಖರ ಅಳಿಕೆ ಕೋಶಾಧಿಕಾರಿ ರಾಮಚಂದ್ರ ಯದುಗಿರಿ, ಯಾದವ ಸಭಾ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಅಮೈ, ಯಾದವ ಸಭಾ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಶಿವರಾಮ ಮಣಿಯಾಣಿ ಮೊದಲಾದವರು ಉಪಸ್ಥಿತರಿದ್ದರು.