ಕಾಣಿಯೂರು: ಕಳೆದ 25 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆಯಲ್ಲಿ ಕಡಬ ಸಮೀಪದ ಪಿಜಕಳ ಎಂಬಲ್ಲಿ ಕುಮಾರಧಾರ ನದಿಯಲ್ಲಿ ಆ. 26ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದವರಿಂದ ಹುಡುಕಾಟ ನಡೆಯಿತು.
ಕಡಬ ತಾಲೂಕಿನ ಎಡಮಂಗಲ ಗ್ರಾಮದ ಪಾದೆ ಮನೆ ನಿವಾಸಿ ಕೂಲಿ ಕಾರ್ಮಿಕ ಬಾಲಕೃಷ್ಣ ಗೌಡ (56) ರವರು ಜುಲೈ 31ರಂದು ಮನೆಯಿಂದ ನಾಪತ್ತೆಯಾಗಿದ್ದರು. ಅಂದು ಮಧ್ಯಾಹ್ನ ಕಡಬ ಪಿಜಕಳ ಬಳಿ ಅಂಗಡಿಯೊಂದಕ್ಕೆ ಭೇಟಿ ನೀಡಿ ಹೋಗಿದ್ದರು. ಅವರು ಹೋಗುವಾಗ ಪಾಲೋಲಿ ಕಡೆ ಹೋಗಿದ್ದರು, ಇದನ್ನು ಅಂಗಡಿ ಮಾಲಿಕರು ಗಮನಿಸಿದ್ದರು. ಪಾಲೋಲಿಯಲ್ಲಿ ಕುಮಾರಧಾರ ನದಿಗೆ ಬೃಹತ್ ಸೇತುವೆ ನಿರ್ಮಾಣವಾಗುತ್ತಿದ್ದು, ಇದರ ಕೆಳ ಭಾಗದಲ್ಲಿ ಕೆಲವರು ನದಿ ನೀರು ಕಡಿಮೆ ಇದ್ದಾಗ ದಾಟಿ ಎಡಮಂಗಲ ಭಾಗಕ್ಕೆ ಹೋಗುತ್ತಾರೆ. ಬಾಲಕೃಷ್ಣ ಗೌಡ ಕೂಡಾ ಪಾಲೋಲಿ ಕಡೆ ಹೆಜ್ಜೆ ಹಾಕಿರುವುದರಿಂದ ಅವರು ಕೂಡಾ ನದಿ ದಾಟಿ ಹೋಗಲು ಯತ್ನಿಸಿ ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾಗಿರಬಹುದೆಂದು ಶಂಕಿಸಲಾಗಿದೆ. ಇದಕ್ಕೆ ಪೂರಕವೆಂಬಂತೆ ಅವರ ಬಳಿ ಇದ್ದ ಕೈ ಚೀಲವೊಂದು ನಾಡೋಳಿ ಎಂಬಲ್ಲಿ ನದಿ ತಟದಲ್ಲಿ ಇತ್ತೀಚೆಗೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಬೆಳ್ಳಾರೆ ಪೊಲೀಸರು ನದಿ ಭಾಗದಲ್ಲಿ ಹುಡುಕಾಟ ನಡೆಸಿ ಹೋಗಿದ್ದಾರೆ. ಆ.26ರಂದು ಶೌರ್ಯ ತಂಡದ ಎಂಟು ಜನ ಪರಿಣತಿ ಪಡೆದ ಈಜುಗಾರರು ಕುಮಾರಧಾರ ನದಿಯ ಪಾಲೋಳಿಯಿಂದ ಕೂಡಿಗೆ ತನಕ ಸುಮಾರು ಐದು ಕಿಲೋ ಮೀಟರ್ ನದಿ ತಟದಲ್ಲಿ ಹಾಗೂ ನದಿಯ ಕೆಲವು ಭಾಗಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಬೆಳಿಗ್ಗೆಯಿಂದ ಸಂಜೆಯ ತನಕ ಹುಡುಕಾಟ ನಡೆಸಿ ಬರಿಗೈಯಲ್ಲಿ ವಾಪಾಸಾಗಿದ್ದಾರೆ. ಇತ್ತ ಮನೆಯವರು ಬಾಲಕೃಷ್ಣ ಅವರು ಪತ್ತೆಯಾಗದ ಹಿನ್ನೆಲೆಯಲ್ಲಿ ಕಂಗಾಲಾಗಿದ್ದಾರೆ.