ಕಡಬ: ತಾಲೂಕು ಕೇಂದ್ರವಾಗಿರುವ ಕಡಬದ ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕಾಗಿ 3 ಎಕರೆ ಜಮೀನು ಕಾದಿರಿಸಲಾಗಿದ್ದು, ದ.ಕ. ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಅವರು ಆ. 27ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡಬ ತಾಲೂಕು ಕೇಂದ್ರಕ್ಕೆ ಸಿವಿಲ್ ನ್ಯಾಯಾಲಯ ಸಂಕೀರ್ಣ, ನ್ಯಾಯಾಧೀಶರ ವಸತಿ ಗೃಹ, ವಕೀಲರ ಭವನ ಹಾಗೂ ನ್ಯಾಯಾಲಯ ಸಿಬ್ಬಂದಿಗಳ ವಸತಿ ಗೃಹಗಳ ನಿರ್ಮಾಣಕ್ಕಾಗಿ ಕಾದಿರಿಸಿರುವ ಜಮೀನು ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಕಚೇರಿಗಳಿಗೆ ಹತ್ತಿರದಲ್ಲಿದ್ದು, ಸಾರ್ವಜನಿಕರಿಗೆ ಬಂದು ಹೋಗಲು ಅನುಕೂಲಕರವಾಗಿ ಎಲ್ಲಾ ರೀತಿಯಿಂದಲೂ ಸೂಕ್ತವಾಗಿದೆ. ಈ ಕುರಿತು ಪರಿಶೀಲನಾ ವರದಿಯನ್ನು ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಅಲ್ಲಿಂದ ಬರುವ ಆದೇಶದನ್ವಯ ಆದಷ್ಟು ಶೀಘ್ರದಲ್ಲಿ ಕೆಲಸ ಪ್ರಾರಂಭಿಸಲಾಗುವುದು ಎಂದರು.
ಕಡಬ ವಕೀಲರ ಬಳಗದ ಮುಂದಾಳು ಶಿವಪ್ರಸಾದ್ ಪುತ್ತಿಲ ಅವರು ಮಾತನಾಡಿ, ಕಡಬ ತಾಲೂಕಿನ ಜನರು ನ್ಯಾಯಾಲಯದ ಕಲಾಪಗಳಿಗಾಗಿ ಸುಳ್ಯ ಹಾಗೂ ಪುತ್ತೂರಿಗೆ ಅಲೆಯುವುದನ್ನು ತಪ್ಪಿಸಲು ಕಡಬದಲ್ಲಿಯೇ ನ್ಯಾಯಾಲಯ ಸಂಕೀರ್ಣ ಶೀಘ್ರ ಪ್ರಾರಂಭವಾಗಬೇಕು. ನೂತನ ಕಟ್ಟಡಗಳು ನಿರ್ಮಾಣವಾಗಲು ಕಾಲಾವಕಾಶ ಬೇಕಿರುವುದರಿಂದ ಜನರ ಅನುಕೂಲಕ್ಕಾಗಿ ಖಾಸಗಿ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯವನ್ನು ಆದಷ್ಟು ಬೇಗ ಆರಂಭಿಸಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.
ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಅವರು ಮಾತನಾಡಿ, ಕಡಬದಲ್ಲಿ ಶೀಘ್ರ ನ್ಯಾಯಾಲಯ ಸಂಕೀರ್ಣ ಪ್ರಾರಂಭಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಅಗತ್ಯ ಒತ್ತಡ ಹೇರುವುದಾಗಿ ತಿಳಿಸಿದರು. ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಶೀನಪ್ಪ ಗೌಡ ಬೈತಡ್ಕ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಪಾಟಾಳಿ, ಕಡಬ ವಕೀಲರ ಬಳಗದ ಪ್ರಮುಖರಾದ ಲೋಕೇಶ್ ಎಂ.ಜೆ. ಕೊಣಾಜೆ, ಕೃಷ್ಣಪ್ಪ ಗೌಡ ಕಕ್ವೆ, ರಶ್ಮಿ ಜಿ., ಅಶ್ವಿತ್ ಖಂಡಿಗ, ನಾರಾಯಣ ಜಿ.ಕೆ., ಅವಿನಾಶ್ ಬೈತಡ್ಕ, ಗುರುಚರಣ್ ಕೊಪ್ಪಡ್ಕ, ಹರೀಶ್ ಕೆ.ಎಸ್., ಪ್ರಶಾಂತ್ ಪಂಜೋಡಿ, ದಾಮೋದರ ಗೌಡ ಕಕ್ವೆ, ಕಾಂಗ್ರೆಸ್ ಮುಂದಾಳು ವಿಜಯಕುಮಾರ್ ರೈ ಕರ್ಮಾಯಿ, ಬಿಜೆಪಿ ಮುಂದಾಳು ಸತೀಶ್ ನಾಯಕ್ ಕಡಬ ಮುಂತಾದವರು ಹಾಜರಿದ್ದರು.
ಆರಂಭದಲ್ಲಿ ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿದ ನ್ಯಾಯಾಧೀಶರು ಜಮೀನಿನ ಕಾಗದಪತ್ರಗಳನ್ನು ಪರಿಶೀಲಿಸಿ ಮಾಹಿತಿ ಪಡೆದರು. ಕಡಬ ಪ್ರಭಾರ ತಹಶೀಲ್ದಾರ್ ಮಂಜುನಾಥ್ ಹಾಗೂ ಉಪ ತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಅವರು ಮಾಹಿತಿ ನೀಡಿದರು. ಕಾದಿರಿಸಿದ ಜಮೀನಿನಲ್ಲಿ ಕಟ್ಟಡ ನಿರ್ಮಾಣವಾಗುವ ಮೊದಲು ಬಾಡಿಗೆ ನೆಲೆಯ ಕಟ್ಟಡದಲ್ಲಿ ನ್ಯಾಯಾಲಯ ಕಲಾಪ ಆರಂಭಿಸುವ ಸಾಧ್ಯತೆಗಳಿರುವುದರಿಂದ ಬಳಸಬಹುದಾದ ಖಾಸಗಿ ಕಟ್ಟಡಗಳನ್ನು ಕೂಡ ನ್ಯಾಯಾಧೀಶರು ವಕೀಲರ ಜತೆ ತೆರಳಿ ಪರಿಶೀಲನೆ ನಡೆಸಿದರು.