ಆ.30 ರಿಂದ ಸೆ.1ರ ತನಕ ವಿವೇಕಾನಂದದಲ್ಲಿ ಸ್ವಾಯತ್ತ ಮಹಾವಿದ್ಯಾಲಯಗಳ ಸಹಯೋಗ- ಪ್ಲಾಸ್ಮ ವಿಜ್ಞಾನ ಕುರಿತ ವಸ್ತು ಪ್ರದರ್ಶನ, ಪ್ರಾಯೋಗಿಕ ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ

0

ಪುತ್ತೂರು: ಅಹಮದಾಬಾದ್ ಇನ್ಸ್ಟಿಟ್ಯೂಟ್ ಫಾರ್ ಪ್ಲಾಸ್ಮಾ ರಿಸರ್ಚ್ ಸಂಸ್ಥೆ ಮತ್ತು ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಸಹಯೋಗದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಪ್ಲಾಸ್ಮ ವಿಜ್ಞಾನ ಕುರಿತ ವಸ್ತು ಪ್ರದರ್ಶನ, ಪ್ರಾಯೋಗಿಕ ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣಗಳನ್ನು ಆ.30 ರಿಂದ ಸೆ.1ರ ತನಕ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಲಿದೆ ಎಂದು ವಿವೇಕಾನಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಆ.30, 31 ಮತ್ತು ಸೆ. 1 ರಂದು ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ಪ್ಲಾಸ್ಮ ವಿಜ್ಞಾನ ಕುರಿತ ವಸ್ತುಪ್ರದರ್ಶನ, ಪ್ರಾಯೋಗಿಕ ಪ್ರಾತ್ಯಕ್ಷಿಕೆ, ವಿಚಾರಸಂಕಿರಣ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು, ಆ.30 ರಂದು ಬೆಳಗ್ಗೆ ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಹಮದಾಬಾದ್‌ನ ಐ.ಪಿ.ಆರ್. ನ ಸಮುದಾಯ ಸಂಪರ್ಕ ವಿಭಾಗ ಮುಖ್ಯಸ್ಥ ಡಾ. ಎ. ವಿ. ರವಿಕುಮಾರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೂನಾ ಟಾಟಾ ಮೂಲಭೂತ ಸಂಶೋಧನಾ ಕೇಂದ್ರದ ಜಿ.ಎಂ.ಆರ್.ಟಿ. ವೀಕ್ಷಣಾಲಯದ ಡೀನ್ ಪ್ರೊ. ಈಶ್ವರ ಚಂದ್ರ ಸಿ.ಎಚ್. ಉದ್ಘಾಟನೆ ಮಾಡಲಿದ್ದಾರೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ. ಕೃಷ್ಣ ಭಟ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ವಸ್ತು ಪ್ರದರ್ಶನವನ್ನು ಭೌತಶಾಸ್ತ್ರ ಉಪನ್ಯಾಸಕ ಡಾ. ಸಂಕೀರ್ತನ್ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ಬಳಿಕ ಪ್ಲಾಸ್ಮ ವಿಷಯಕ್ಕೆ ಸಂಬಂಧಿಸಿ ಮೂರು ಅವಧಿಗಳಲ್ಲಿ ವಿಚಾರ ಸಂಕಿರಣಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.


ಪ್ಲಾಸ್ಮ ವಿಜ್ಞಾನದ ಸಂಶೋಧನೆ ಆತ್ಮನಿರ್ಭರ ಭಾರತದ ಕನಸು :
ಬೇಸಿಕ್ ವಿಚಾರ ತಿಳಿಸುವ ಉದ್ದೇಶದಿಂದ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಪದವಿ ಪೂರ್ವ ಹಾಗೂ ಪದವಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳನ್ನು ಹಾಗು ಶಿಕ್ಷಕರು, ಆಸಕ್ತ ಸಾರ್ವಜನಿಕರಿಗೆ ಪ್ಲಾಸ್ಮ ವಿಜ್ಞಾನದ ಸಂಶೋಧನೆಯನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತದೆ. ಪ್ಲಾಸ್ಮ ವಿಜ್ಞಾನದ ಸಂಶೋಧನೆ ನಿಜವಾಗಿಯೂ ಆತ್ಮನಿರ್ಭರ ಭಾರತದ ಕನಸು, ಇದು ಮುಂದಿನ ಭಾರತದ ಆರ್ಥಿಕ, ಸಾಮಾಜಿಕ ಕ್ಷೇತ್ರದ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ ಮತ್ತು ಭಾರತದ ವಿಶ್ವ ಗುರು ಆಶಯವನ್ನು ಸಾಕಾರಗೊಳಿಸುವಲ್ಲಿ ಸಹಕಾರಿಯಾಗಲಿದೆ. ಆದ್ದರಿಂದ ಭವಿಷ್ಯದಲ್ಲಿ ಈ ಕ್ಷೇತ್ರದ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸುವ ಉದೇಶವನ್ನು ಹೊಂದಿದೆ ಎಂದರು.


2500 ವಿದ್ಯಾರ್ಥಿಗಳು
ಪ್ಲಾಸ್ಮಾ ವಿಜ್ಞಾನದ ಕಾರ್ಯಕ್ರಮದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ, ಆತ್ಮನಿರ್ಭರ ಭಾರತ, ವಿಶ್ವಗುರು ಭಾರತದ ಕನಸಿಗೆ ಶಕ್ತಿ ತುಂಬಿದಂತಾಗುತ್ತದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳನ್ನು ಈಗಾಗಲೇ ಸಂಪರ್ಕಿಸಲಾಗಿದ್ದು, ಸುಮಾರು 2500 ವಿದ್ಯಾರ್ಥಿಗಳ ನೋಂದಾವಣೆಯಾಗಿದೆ ಎಂದು ಡಾ. ಶ್ರೀಪತಿ ಕಲ್ಲೂರಾಯ ಎಂದು ಹೇಳಿದ ಅವರು ಇನ್ಸ್ಟಿಟ್ಯೂಟ್ ಫಾರ್ ಪ್ಲಾಸ್ಮ ರಿಸರ್ಚ್ ಸಂಸ್ಥೆಯನ್ನು 1986ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ, ಸ್ವಾಯತ್ತ ಸಂಸ್ಥೆಯಾಗಿ ಅಹಮಾದಾಬಾದ್‌ನಲ್ಲಿ ಸ್ಥಾಪಿಸಲಾಯಿತು. ಇದು 1995 ರಿಂದ ಪರಮಾಣು ಶಕ್ತಿ ಇಲಾಖೆಯ ಅಡಿಯಲ್ಲಿದೆ. ಪ್ಲಾಸ್ಮ ವಿಜ್ಞಾನದ ಅನ್ವೇಷಣೆ ಸಮುದಾಯಕ್ಕೆ ತಲುಪಿಸುವ ಮತ್ತು ತರಬೇತಿ ನೀಡುವ ಮುಖ್ಯ ಉದ್ದೇಶದಿಂದ ಇನ್ಸ್ಟಿಟ್ಯೂಟ್ ಫಾರ್ ಪ್ಲಾಸ್ಮಾ ರಿಸರ್ಚ್ ಸಂಸ್ಥೆಯು ತನ್ನ ಸಂಶೋಧನೆಯನ್ನು ಜನರ ಮುಂದಿಡಲು ಬಯಸುತ್ತದೆ. ಇದರ ಭಾಗವಾಗಿ ದೇಶದೆಲ್ಲೆಡೆ ಪ್ಲಾಸ್ಮ ಪ್ರದರ್ಶನ ಸಹಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಎರ್ಮುಂಜ ಶಂಕರ ಜೋಯಿಸ, ವಿಶೇಷ ಅಧಿಕಾರಿ ಮತ್ತು ಪ್ರಭಾರ ಪ್ರಾಂಶುಪಾಲ ಡಾ. ಶ್ರೀಧರ ನಾಯಕ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಭವ್ಯಾ ಪಿ.ಆರ್. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here