ಸೆ.2 ರಿಂದ 24: ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ

0

ಲೋಕಕಲ್ಯಾಣಾರ್ಥ, ಸಮಗ್ರತೆ, ಹಿಂದೂಗಳ ಏಕತೆ, ಮನಸ್ಸಿನ ಏಕಾಗ್ರತೆ ಸಿದ್ದಿಗಾಗಿ ಈ ಜಪಯಜ್ಞ -ಕೇಶವಪ್ರಸಾದ್ ಮುಳಿಯ
ಏಕಾಗ್ರತೆ ಜಾಗೃತವಾಗಬೇಕಾದರೆ ನಿರಂತರ ಜಪ ಮಾಡಬೇಕು – ಬ್ರಹ್ಮಶ್ರೀ ವೇ ಮೂ ರವೀಶ್ ತಂತ್ರಿ ಕುಂಟಾರು

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಲೋಕ ಕಲ್ಯಾಣಾರ್ಥ, ಸಮಗ್ರತೆ, ಹಿಂದೂ ಬಾಂಧವರ ಏಕತೆಗಾಗಿ, ಮನಸ್ಸಿನ ಏಕಾಗ್ರತೆ ಸಿದ್ದಿಗಾಗಿ ‘ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ’ ಸೆ.2 ರಿಂದ 24ರ ತನಕ ಭಕ್ತರು ಮನೆ ಮನೆಯಲ್ಲಿ ” ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ’ ಎಂಬ ಸರಳ ಸೂತ್ರದಲ್ಲಿ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ತಿಳಿಸಿದ್ದಾರೆ.


ಅವರು ಶ್ರೀ ದೇವಳದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ದೇವಳದಲ್ಲಿ ಬೇರೆ ಬೇರೆ ರೀತಿಯಲ್ಲಿ ಶತರುದ್ರ, 1008 ಕಾಯಿ ಗಣಪತಿ ಹೋಮ ಸಹಿತ ವಿವಿಧ ಕಾರ್ಯಕ್ರಮಗಳು ದೇವರ ಸಾನಿಧ್ಯಕ್ಕಾಗಿ ಆಗಾಗ ನಡೆಯುತ್ತಿದೆ. ಅದೇ ರೀತಿಯಲ್ಲಿ ದೇವರ ಅನುಗ್ರಹ, ಹಿಂದು ಬಾಂದವರ ಏಕತೆಗಾಗಿ, ಲೋಕಕಲ್ಯಾಣಾರ್ಥವಾಗಿ ಏಕಾದಶಕೋಟಿ ಮಹಾಲಿಂಗೇಶ್ವರ ಜಪಯಜ್ಞ ಮಾಡುವ ಸಂಕಲ್ಪ ಮಾಡಿದಂತೆ ಮಹಾಲಿಂಗೇಶ್ವರ ದೇವರ ಪ್ರತಿಯೊಬ್ಬ ಭಕ್ತರು ಶ್ರೀದೇವರ ನಾಮವನ್ನು ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ ಎಂಬ ಸರಳ ಸೂತ್ರದಲ್ಲಿ 11,880 ಬಾರಿ ಈ ಜಪವನ್ನು ಮಾಡಬೇಕು. ಸೆ.2 ರಿಂದ ದಿನಕ್ಕೆ 1080 ಜಪದಂತೆ 11 ದಿನಗಳ ಜಪ ಮಾಡಬೇಕು. ಇದು ನಿರಂತರ ಮಾಡಬೇಕಾಗಿಲ್ಲ. ಅಸೌಕ್ಯದ ಸಂದರ್ಭದಲ್ಲಿ ಸಮಸ್ಯೆ ಆಗದಂತೆ 23 ದಿನ ಕಾಲವಕಾಶ ನೀಡಲಾಗಿದೆ. ಜಪವನ್ನು ಅವರವರ ಮನೆಯಲ್ಲೇ ಮಾಡಲಾಗುತ್ತದೆ. ಆದರೆ ಸಂಕಲ್ಪ ಮಾತ್ರ ಆಯಾ ಭಾಗದ ಧಾರ್ಮಿಕ ಕೇಂದ್ರ, ಧಾರ್ಮಿಕ ಶಿಕ್ಷಣ ಕೇಂದ್ರದಲ್ಲಿ ಮಾಡಬೇಕು ಎಂದು ತಿಳಿಸಿದರು.


ಏಕಾಗ್ರತೆ ಜಾಗೃತವಾಗಬೇಕಾದರೆ ನಿರಂತರ ಜಪ ಮಾಡಬೇಕು:
ಬ್ರಹ್ಮಶ್ರೀ ವೇ ಮೂ ರವೀಶ್ ತಂತ್ರಿ ಕುಂಟಾರು ಅವರು ಮಾತನಾಡಿ ಮನುಷ್ಯನಲ್ಲಿರುವ ಏಕಾಗ್ರತೆಗಾಗಿ ಕಲಿಯುಗದಲ್ಲಿ ಸಂಘಟಿತರಾಗಿ ದೇವರನ್ನು ಭಜಿಸಬೇಕು. ಆಗಮ ಶಾಸ್ತ್ರದಲ್ಲಿ ದೈವಿಕವಾಗಿ ಕಾರ್ಯಗಳು ನಡೆಯುವ ಸಂದರ್ಭ ದೇವತಾ ಚೈತನ್ಯಕ್ಕೆ ಅರ್ಚಕರು ಸಮರ್ಪಣೆ ಮಾಡಬೇಕು. ಅಷ್ಟು ಮಾತ್ರವಲ್ಲದೆ ಜನತೆಯು ಬಂದು ಅಲ್ಲಿ ಸಮರ್ಪಣಾ ಭಾವದಿಂದ ಬರುವ ಪ್ರಕ್ರಿಯೆ ನಡೆಯಬೇಕು. ಆ ರೀತಿ ಭಕ್ತರು ಸೇರಿದಾಗ ಚೈತನ್ಯ ವೃದ್ಧಿಯಾಗುತ್ತದೆ. ಇವತ್ತು ದೇವಾಲಯದಲ್ಲಿ ನಾವು ಮಾಡಿಕೊಂಡು ಬರುವ ಭಜನೆ, ನಾಮಸಂಕೀರ್ತನೆ, ಪಾರಾಯಣ ಕೂಡಾ ಚೈತನ್ಯ ವೃದ್ಧಿಗೆ ಪೂರಕವಾಗಿ ಇರುವಂತಹದ್ದು, ಒಂದೊಂದು ದೇವರಿಗೂ ಒಂದೊಂದು ಸಂಖ್ಯಾ ಪ್ರಾದಾನ್ಯತೆ ಇದೆ. ಶಿವ ದೇವರಿಗೆ ಪ್ರಾದಾನ್ಯತೆ ಇರುವುದು ಏಕಾದಶ ಸಂಖ್ಯೆ. ಆ ಪ್ರಾದಾನ್ಯತೆಯೊಂದಿಗೆ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ ಮಾಡುವ ತೀರ್ಮಾನ ಮಾಡಿರುವುದು. ಈ ಜಪ ಮಾಡವುದಿರಂದ ಆ ಪರಿಸರದಲ್ಲಿರುವ ಎಲ್ಲಾ ಋಣಾತ್ಮಕ ಚೈತನ್ಯಗಳು ದೂರವಾಗುತ್ತದೆ. ವ್ಯಕ್ತಿಗತವಾಗಿ ನಾವು ಜಪಮಾಡಿಕೊಂಡು ಬರುವಾಗ ನಮ್ಮ ಆತ್ಮದಲ್ಲಿರುವ ಪಾಪತ್ವ ಕೂಡಾ ತೊಲಗುತ್ತದೆ. ಇವತ್ತು ನಮ್ಮಲ್ಲಿರುವ ಆಧ್ಯಾತ್ಮಿಕವಾಗಿರುವ ಚೈತನ್ಯ ವೃದ್ಧಿ ಕಡಿಮೆ ಆಗಿರುವುದರಿಂದ ಚಾಂಚಾಲ್ಯತೆ ಹುಟ್ಟಿದೆ. ಇದರಿಂದ ವಿಶ್ವಾಸ, ಮನಸ್ಸನ್ನು ದೃಢವಾಗಿ ಇಟ್ಟುಕೊಳ್ಳಲಾಗುವುದಿಲ್ಲ. ನಮ್ಮಲ್ಲಿರುವ ಆಧ್ಯಾತ್ಮಿಕವಾದ ಚೈತನ್ಯ ವೃದ್ಧಿಯಾಗಬೇಕಾದರೆ ನಮ್ಮಲ್ಲಿರುವ ಏಕಾಗ್ರತೆ ಜಾಗೃತವಾಗಬೇಕು. ಏಕಾಗ್ರತೆ ಜಾಗೃತವಾಗಬೇಕಾದರೆ ನಾವು ನಿರಂತರವಾಗಿ ಜಪ ಮಾಡಿಕೊಂಡು ಬರಬೇಕು ಎಂದು ಅವರು ಹೇಳಿದ ಅವರು ಈ ಎಲ್ಲಾ ಉದ್ದೇಶವಿರಿಸಿಕೊಂಡು ನಮ್ಮ ಮುಂದೆ ಪವಿತ್ರವಾಗಿರುವ ಕ್ಷೇತ್ರದದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಬೋದಿಸಿರುವ ಬ್ರಹ್ಮಕಲಶ ಎಲ್ಲವು ಸಾಂಗವಾಗಿ ನೆರವೇರಬೇಕಾದರೆ ಈ ಎಲ್ಲಾ ಭಕ್ತಕೋಟಿ ಜನರು ಪರಿಪೂರ್ಣ ಸಮರ್ಪಣಾ ಭಾವದಿಂದ ದೇವಸನ್ನಿಧಿ ಸೇರಿಕೊಂಡಾಗ ಪೂರ್ಣ ಆಗುತ್ತದೆ. ಆ ಸಂಕಲ್ಪದಲ್ಲಿ ಈ ಕಾರ್ಯ ಮಾಡುತ್ತಿದ್ದೇವೆ. ಇದರಲ್ಲಿ ಬೇಕಾಗಿರುವುದು ಮನುಷ್ಯನ ಭಕ್ತಿ ಮತ್ತು ಶ್ರದ್ಧೆ ಮಾತ್ರ. ಭಕ್ತಿ ಸಮರ್ಪಣೆಯಿಂದ ಮಾಡುವ ಯಾವುದೇ ವಿಚಾರಗಳಿಗೂ ಕೂಡಾ ಯಾವುದೇ ಕಟ್ಟು ಪಾಡು ಧರ್ಮಶಾಸ್ತ್ರ ಇರಿಸಿಲ್ಲ. ಎಲ್ಲಿಯೂ ಬೇಕಾದರೂ ದೇವರ ನಾಮ ಸಂಕೀರ್ತನೆ ಮಾಡಬಹುದು. 1080 ನಾಮಜಪ ಮಡುವ ಸಂದರ್ಭದಲ್ಲಿ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಶುಚೀರ್ಭೂತರಾಗಿ ಜಪ ಮಾಡುವ ಮೂಲಕ ಅವರ ಆತ್ಮೋದ್ದಾರ ಆಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಬಿ.ಕೆ.ವೀಣಾ ಉಪಸ್ಥಿತರಿದ್ದರು.

ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭ:
ಜಪ ಮಾಡುವವರು ತಮ್ಮ ಮನೆಗಳಲ್ಲಿ ಪ್ರಾತಃಕಾಲ ಅಥವಾ ಸಾಯಂಕಾಲ ಅಥವಾ ಎರಡು ಹೊತ್ತು ತಮ್ಮ ಅನುಕೂಲದಂತೆ ಶುಚೀರ್ಭೂತರಾಗಿ ದೇವರ ಮುಂದೆ ಮಣೆ, ಚಾಪೆ ಅಥವಾ ಮೇಲೆ ಕುಳಿತು, ದೀಪ ಹಚ್ಚಿ ಹಣೆಗೆ ಗಂಧ / ವಿಭೂತಿ/ಕುಂಕುಮ ಹಚ್ಚಿ ದಿನಕ್ಕೆ 1080 ಬಾರಿ ‘ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ’ ಎಂಬ ಜಪ ಮಾಡುವುದು. 108 ನಾಣ್ಯಗಳ ಮೂಲಕ ಪ್ರತಿದಿನ 1080 ಜಪ, ಹಾಗು 11 ದಿನಗಳಲ್ಲಿ 11,880 ಜಪ ಮಾಡುವುದು. ಮನೆಗೆ ಒಂದರ ಜಪ ಮಾಡಿದ 108 ನಾಣ್ಯಗಳನ್ನು ಸಮರ್ಪಿಸಿ ರೂ. 108 ರ ಸೇವಾಚೀಟಿ ಮಾಡಿಸಿಕೊಳ್ಳುವುದು. 108 ಜಪಕ್ಕೆ ಒಂದು ಸಲದಂತೆ ಒಟ್ಟು 11,880 ಜಪಕ್ಕೆ 110 ಸಲ ‘ ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ’ ಎಂದು ಬರೆಯುವುದು. ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭ ಮಾಡಿ 11 ದಿನ ಪರ್ಯಂತ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಾದಿಗಳ ಮನೆಮನೆಗಳಲ್ಲಿ ಮಾಡುವ ಜಪದಿಂದ ಲೋಕ ಕಲ್ಯಾಣವಾಗಲಿ ಎಂದು ಸರ್ವರೂ ಪ್ರಾರ್ಥಿಸುವುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾಹಿತಿ ನೀಡಿದರು. ದೇವಸ್ಥಾನದಲ್ಲಿ ಮತ್ತು ಕೆಲವು ಕಡೆಗಳಲ್ಲಿ ಸೆ.2ರಂದು ಸಂಕಲ್ಪ ನಡೆಯುತ್ತದೆ. ಉಳಿದ ಕಡೆ ಬೇರೆ ದಿನ ಸಂಕಲ್ಪ ಮಾಡಬಹುದು. ದೇವಸ್ಥಾನ ಸೇರಿ 108 ಕಡೆಗಳಲ್ಲಿ ಈ ಸಂಕಲ್ಪ ಕಾರ್ಯಕ್ರಮ ನಡೆಯುತ್ತದೆ. ದೇವಸ್ಥಾನ. ಧಾರ್ಮಿಕ ಕೇಂದ್ರ, ಭಜನಾ ಮಂದಿರ, ಧಾರ್ಮಿಕ ಶಿಕ್ಷಣ ಕೇಂದ್ರ, ಕೆಲವೊಂದು ಶಾಲೆಗಳಲ್ಲೂ ಜಪ ಯಜ್ಞ ನಡೆಯುತ್ತದೆ ಎಂದರು.

LEAVE A REPLY

Please enter your comment!
Please enter your name here