ಬೆಳ್ಳಾರೆ : ಮೋದಿ ಸ್ಕೀಮ್ನಲ್ಲಿ ನಿಮಗೆ ಹಣ ಬಂದಿದೆ ಎಂದು ಅಮಾಯಕರಿಂದ ಚಿನ್ನ ,ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು,ಇದೀಗ ಈ ಮಾದರಿಯ ವಂಚನೆಗೊಳಗಾದ ಇಬ್ಬರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಡಿಯಾಲ ಗ್ರಾಮ, ಸುಳ್ಯ ನಿವಾಸಿಯಾದ ರಾಧಾಕೃಷ್ಣ ಗೌಡ (67) ಎಂಬವರು ಬೆಳ್ಳಾರೆ ಪೊಲೀಸರಿಗೆ ನೀಡಿದ ದೂರಿನಲ್ಲಿ 20-05-2023 ಬೆಳ್ಳಾರೆ ಕೆಳಗಿನ ಪೇಟೆಯಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಬಂದು ತನ್ನನ್ನು ಬ್ಯಾಂಕ್ ಉದ್ಯೋಗಿ ಎಂಬುದಾಗಿ ಹೇಳಿ ಪರಿಚಯಿಸಿಕೊಂಡು, ಕೋವಿಡ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಯಿಂದ ಕೆಲವು ಆಯ್ದ ವ್ಯಕ್ತಿಗಳಿಗೆ ರೂ 1 ಲಕ್ಷದ 7 ಸಾವಿರ ರೂಪಾಯಿ ಬಂದಿದ್ದು, ಈ ಹಣವನ್ನು ಪಡೆಯಲು 7 ಸಾವಿರ ನಗದು ಹಣ ಕೊಡಿ ಎಂಬುದಾಗಿ ಕೇಳಿದ್ದು, ಈ ಸಂದರ್ಭದಲ್ಲಿ ದೂರುದಾರ ರಾಧಾಕೃಷ್ಣ ಅವರಲ್ಲಿ ಹಣವಿರದಿದ್ದ ಕಾರಣದಿಂದ ಅವರಲ್ಲಿದ್ದ ಅಂದಾಜು ಸುಮಾರು ಐದೂವರೆ ಗ್ರಾಂ ತೂಕದ ಚಿನ್ನದ ಉಂಗುರವನ್ನು ನೀಡಿದ್ದು, ಈ ಉಂಗುರವನ್ನು ಪಡೆದುಕೊಂಡು ವ್ಯಕ್ತಿಯೊಬ್ಬ ವಂಚಿಸಿ ಪರಾರಿಯಾಗಿದ್ದಾನೆ ಎಂದು ದೂರು ನೀಡಿದ್ದಾರೆ.ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ-57/2023 ಕಲಂ 420 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇನ್ನೊಂದು ದೂರಿನಲ್ಲಿ ದೂರುದಾರರಾದ ಕಡಬ ತಾಲೂಕು ಕುದ್ಮಾರು ಗ್ರಾಮದ ಕೆಡೆಂಜಿ ನಿವಾಸಿ ಲೀಲಾವತಿ (55) ನೀಡಿದ ದೂರಿನಂತೆ 17.08.2023ರಂದು ಬೆಳಿಗ್ಗೆ ತಮ್ಮ ಮನೆಯಲ್ಲಿದ್ದಾಗ ಅಂದಾಜು 45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ಬಂದು ತಾನು ಬ್ಯಾಂಕ್ ಉದ್ಯೋಗಿಯೆಂದು ತನ್ನನ್ನು ಪರಿಚಯಿಸಿಕೊಂಡು, ದೂರದಾರೆ ಲೀಲಾವತಿ ಅವರ ಬ್ಯಾಂಕ್ ಖಾತೆಗೆ ಪ್ರಧಾನಮಂತ್ರಿಗಳ ಯೋಜನೆಯಿಂದ ರೂಪಾಯಿ 1,00,000/- ಹಣ ಬಂದಿರುತ್ತದೆ ಹಾಗೂ ಈ ಹಣವನ್ನು ಪಡೆಯಲು ರೂಪಾಯಿ 31,000/ವನ್ನು ಡೆಪಾಸಿಟ್ ಮಾಡಬೇಕು ಎಂದು ತಿಳಿಸಿ ರೂಪಾಯಿ 31,000/ವನ್ನು ಮೋಸದಿಂದ ಪಡೆದು ವಂಚಿಸಿದ್ದಾನೆ ಎಂದು ದೂರು ನೀಡಲಾಗಿದೆ.ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ ಕ್ರ-58/2023 ಕಲಂ 420 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.