ಪ್ರಶಸ್ತಿ ಬದುಕಿನ ಪರಿಪಕ್ವತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ: ಡಾ. ತಾಳ್ತಜೆ
ಉಪ್ಪಿನಂಗಡಿ: ಬದುಕಿನಲ್ಲಿಯ ಮನೋಧರ್ಮ ವಯೋಮಾನಕ್ಕೆ ಸಹಜವಾಗಿ ಪರಿಪಕ್ವತೆಯನ್ನು ತರುತ್ತದೆ. ಈ ಪರಿಪಕ್ವತೆಯನ್ನು ಪ್ರಕೃತಿ ನಮಗೆ ನೀಡುತ್ತದೆ. ನಾವು ಅದನ್ನು ಸ್ವೀಕರಿಸಬೇಕು ಎಂದು ಎಂದು ಸಂಶೋಧಕ, ವಿಮರ್ಶಕ, ಸಾಹಿತಿ ಡಾ. ತಾಳ್ತಜೆ ವಸಂತ ಕುಮಾರ್ ಅಭಿಪ್ರಾಯಪಟ್ಟರು.
ಉಪ್ಪಿನಂಗಡಿಯ ಪಂಜಾಳದ ತಾಳ್ತಜೆಯವರ ಮನೆಯ ಮಣಿಮಂಟಪದಲ್ಲಿ ಆ.30ರಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಂಬೈಯ ಕರ್ನಾಟಕ ಸಂಘ ನೀಡಿದ ಡಾ. ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಮುಂಬೈ ಎಂಬುವುದು ಅದ್ಭುತವಾದ ನಗರಿ. ಅವಕಾಶಗಳ ನಗರಿ. ಇಂತಹ ನಗರದಲ್ಲಿ 23 ವರ್ಷಗಳ ಭಾಂದವ್ಯ ನನ್ನದು. ಸಾಧನೆಯ ಮಜಲಿಗೆ ನೆಲೆಯಾದ ಮುಂಬೈಯ ಕರ್ನಾಟಕ ಸಂಘದ ಪ್ರಶಸ್ತಿ ನನಗೆ ಅತ್ಯಂತ ತೃಪ್ತಿ ತಂದಿದೆ. ಅದರಲ್ಲೂ ಸಾಹಿತಿ ಡಾ. ಸುನೀತಾ ಶೆಟ್ಟಿ ಅವರ ಹೆಸರಿನ ಈ ಪ್ರಶಸ್ತಿ ಜೀವನ ಪ್ರೀತಿ’ಗೆ ಮತ್ತಷ್ಟು ಪಕ್ವತೆ ಉಂಟುಮಾಡಿದೆ. ಮುಂಬೈ ಬದುಕು ಧನಾತ್ಮಕ ಚಿಂತನೆಗಳನ್ನು ಹೆಚ್ಚು ಮಾಡುವ ಜೀವನ ಪದ್ಧತಿಯತ್ತ ನಮ್ಮನ್ನು ಸೆಳೆದುಕೊಳ್ಳುತ್ತದೆ. ನಮ್ಮ ಬದುಕಿನಲ್ಲಿ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಗಳು ನೆಲೆಗೊಳ್ಳಲು ನಮ್ಮ ವ್ಯಕ್ತಿತ್ವವನ್ನು ತಿದ್ದುಪಡಿ ಮಾಡಿಕೊಳ್ಳಬೇಕು. ವಯೋಮಾನಕ್ಕೆ ಸಹಜವಾದ ಪ್ರಕ್ರಿಯೆಗಳು ನಮ್ಮಲ್ಲಿ ಮೂಡಿಬರಬೇಕು. ಇದು ವ್ಯಕ್ತಿತ್ವದ ಪ್ರಭಾವಲಯದಲ್ಲಿ ನಮ್ಮನ್ನು ಮತ್ತಷ್ಟು ಮೇಲ್ಮಟ್ಟಕ್ಕೆ ಒಯ್ಯುತ್ತದೆ ಎಂದು ಅವರು ಹೇಳಿದರು. ಅಭಿನಂದನಾ ಮಾತುಗಳನ್ನಾಡಿದ ಕರ್ನಾಟಕ ಸಂಘದ ಉಪಾಧ್ಯಕ್ಷ ಡಾ.ಈಶ್ವರ ಅಲೆವೂರು, ಡಾ. ತಾಳ್ತಜೆ ಅವರು ಮುಂಬಯಿ ಕನ್ನಡಿಗರ ಪ್ರೀತಿ ಸಂಪಾದಿಸಿದವರು. 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಶೈಕ್ಷಣಿಕ ಸಾಧಕ. ಅವರಬೌದ್ಧಯಾನ’ ಕೃತಿಗೆ ರಾಜ್ಯ ಪ್ರಶಸ್ತಿ ದೊರಕಿದೆ. ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಕಟ್ಟಿದವರಲ್ಲಿ ಓರ್ವರಾದ ತಾಳ್ತಜೆ ವಸಂತಕುಮಾರ್ ಸಾಹಿತ್ಯ ಕ್ಷೇತ್ರದ ಸಾಧಕರಾಗಿ ಸಾಧನೆಯ ಹಾದಿಯಲ್ಲಿ ಜನಪ್ರೀತಿ ಗಳಿಸಿದ ವ್ಯಕ್ತಿಯಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾಲ್, ಮುಂಬೈಯಲ್ಲಿ ಸಾಂಸ್ಕೃತಿಕ ರಂಗ ಹಾಗೂ ಸಾಹಿತ್ಯ ಕೃಷಿಗೆ ಕರ್ನಾಟಕ ಸಂಘ ಅದ್ಭುತವಾದ ಕೊಡುಗೆ ನೀಡಿದೆ. ಡಾ.ಸುನೀತಾ ಶೆಟ್ಟಿ ಅವರು ನೀಡಿದ ದತ್ತಿ ಹಣದಿಂದ ಸುಮಾರು 12 ಮಂದಿ ಸಾಧಕರಿಗೆ ಈಗಾಗಲೇ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದೀಗ ಡಾ.ತಾಳ್ತಜೆ ಅವರ ಮನೆಯಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಡಾ.ತಾಳ್ತಜೆ ಅವರ ಮುಂಬೈ ಬದುಕು ಸಾಹಿತ್ಯ ಕೃಷಿ, ಅವರಿಗೆ ದೊರೆತ ಜನತೆಯ ಪ್ರೀತಿಯಿಂದಾಗಿ ಈ ಪ್ರಶಸ್ತಿಯು ಅರ್ಹವಾಗಿಯೇ ಅವರಿಗೆ ಸಲ್ಲುವಂತಾಗಿದೆ ಎಂದರು.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಡಾ. ತಾಳ್ತಜೆ ಅವರ ಬದುಕು ಸಾಹಿತ್ಯಾಸಕ್ತರಿಗೆ ಹೆಚ್ಚು ಆಕರ್ಷಣೀಯ. ಮುಂಬೈ ಬದುಕಿನಲ್ಲಿ ಅವರ ಸಾಹಿತ್ಯ ಕೃಷಿಯೊಂದಿಗೆ ಅವರೊಂದಿಗಿನ ಒಡನಾಟ ನಮ್ಮನ್ನು ಮತ್ತಷ್ಟು ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಿಂತನೆಗಳತ್ತ ಒಯ್ಯುತ್ತದೆ ಎಂದು ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಭರತ್ ಕುಮಾರ್ ಪೊಲಿಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಉಪ್ಪಿನಂಗಡಿ ವಸುದಾ ಪ್ರತಿಷ್ಟಾನದ ಅಧ್ಯಕ್ಷ, ನಿವೃತ್ತ ಪ್ರೊ. ರಾ. ವೇದವ್ಯಾಸ, ಉದ್ಯಮಿ ಹಾಗೂ ಸಮಾಜ ಸೇವಕ ಬಾಲಕೃಷ್ಣ ಭಂಡಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಮುಖರಾದ ಚಂದ್ರಶೇಖರ್ ತಾಳ್ತಜೆ, ಸವಿತಾ ಪಿ.ಜಿ. ಭಟ್, ಮಹಾಲಿಂಗೇಶ್ವರ ಭಟ್, ಡಾ. ಗೋವಿಂದಪ್ರಸಾದ್ ಕಜೆ, ಶ್ರೀಮತಿ ದುರ್ಗಾಮಣಿ, ರಮೇಶ್ ಕಜೆ, ಶ್ರೀಮತಿ ವೀಣಾ ಕಜೆ, ಗೀತಾಲಕ್ಷ್ಮೀ ತಾಳ್ತಜೆ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ ಸಂಘದ ಗೌರವ ಕೋಶಾಧಿಕಾರಿ ದಿನೇಶ್ ಕಾಮತ್ ವಂದಿಸಿದರು. ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾಲ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸಂಘ ಮುಂಬೈ ಹಾಗೂ ಉಪ್ಪಿನಂಗಡಿಯ ವಸುಧಾ ಪ್ರತಿಷ್ಠಾನ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು.