ರಾಮಕುಂಜ: ರಾಮಕುಂಜದಲ್ಲಿ ಸರಕಾರಿ ಪ್ರೌಢಶಾಲೆ ಆಗಬೇಕೆಂದು ರಾಮಕುಂಜ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದು ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಗಿದೆ.
ಸಭೆ ಆ.28ರಂದು ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಜಯಪ್ರಕಾಶ್ ನೋಡೆಲ್ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರಾದ ಜಕಾರಿಯಾ, ಕರೀಂ, ಸಿ.ಕೆ.ಅಶ್ರಫ್, ಎಸ್.ಕೆ.ಸಿದ್ದೀಕ್ ನೀರಾಜೆ ಮತ್ತಿತರರು, ರಾಮಕುಂಜದಲ್ಲಿ ಸರಕಾರಿ ಪ್ರೌಢಶಾಲೆ ಇಲ್ಲದೇ ಇರುವುದರಿಂದ ಇಲ್ಲಿಂದ ಸಾಕಷ್ಟು ವಿದ್ಯಾರ್ಥಿಗಳು ಉಪ್ಪಿನಂಗಡಿ, ಕಡಬಕ್ಕೆ ಹೋಗುತ್ತಿದ್ದಾರೆ. ಹಿರೇಬಂಡಾಡಿಯಲ್ಲಿ ಸರಕಾರಿ ಪ್ರೌಢಶಾಲೆಯಿದ್ದರೂ ಅಲ್ಲಿಗೆ ಸರಿಯಾದ ವಾಹನ ವ್ಯವಸ್ಥೆ ಇಲ್ಲ. ಆದ್ದರಿಂದ ರಾಮಕುಂಜದಲ್ಲಿ ಸರಕಾರಿ ಪ್ರೌಢಶಾಲೆ ಆಗಬೇಕೆಂದು ಆಗ್ರಹಿಸಿದರು. ತಾ.ಪಂ.ಮಾಜಿ ಸದಸ್ಯರಾದ ಧರ್ಮಪಾಲ ರಾವ್ ಹಾಗೂ ಇತರರೂ ಇದಕ್ಕೆ ಧ್ವನಿಗೂಡಿಸಿ, ಇಲ್ಲಿ ಸರಕಾರಿ ಪ್ರೌಢಶಾಲೆ ಆರಂಭಕ್ಕೆ ಈ ಹಿಂದಿನ ಗ್ರಾಮಸಭೆಗಳಲ್ಲೂ ನಿರ್ಣಯ ಕೈಗೊಳ್ಳಲಾಗಿದೆ. ಈ ಸಭೆಯಲ್ಲೂ ನಿರ್ಣಯ ಕೈಗೊಂಡು ಸರಕಾರಕ್ಕೆ ಬರೆಯುವಂತೆ ಆಗ್ರಹಿಸಿದರು. ಬಳಿಕ ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಸೋರುತ್ತಿರುವ ಶಾಲಾ ಕಟ್ಟಡ:
ರಾಮಕುಂಜ ಸರಕಾರಿ ಶಾಲಾ ಕಟ್ಟಡ ಸೋರುತ್ತಿದೆ. ಶಾಲೆಗೆ ಸಮರ್ಪಕ ರಸ್ತೆ ವ್ಯವಸ್ಥೆಯೂ ಇಲ್ಲ. ಪಂಚಾಯತ್‌ನಿಂದ ಕ್ರಮ ಕೈಗೊಳ್ಳಬೇಕೆಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಜಕಾರಿಯಾ ಅವರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಲಲಿತಾ ಜಿ.ಡಿ. ಅವರು, ರಾಮಕುಂಜ ಶಾಲೆಯ ಆವರಣಗೋಡೆ ಪಂಚಾಯತ್‌ನಿಂದ ನಿರ್ಮಾಣ ಮಾಡಲಾಗುತ್ತಿದೆ. ಶಾಲಾ ಕೊಠಡಿ ದುರಸ್ತಿಗೆ ಹೆಚ್ಚಿನ ಅನುದಾನ ಬೇಕಾಗುತ್ತದೆ. ಆದ್ದರಿಂದ ತಾ.ಪಂ.,ಜಿ.ಪಂ.ಗೆ ಅನುದಾನಕ್ಕೆ ಬರೆಯುವುದಾಗಿ ತಿಳಿಸಿದರು. ರಾಮಕುಂಜ ಶಾಲೆಯ ಜಾಗ ಅತಿಕ್ರಮಣ ಆಗಿರುವುದಾಗಿಯೂ ಎಸ್‌ಡಿಎಂಸಿ ಅಧ್ಯಕ್ಷರು ಆರೋಪಿಸಿ, ಅಳತೆ ಮಾಡಿಸಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ರಾಮಕುಂಜ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವಂತೆಯೂ ಗ್ರಾಮಸ್ಥರು ಮನವಿ ಮಾಡಿದರು.
ಗಾಂಜಾ ಸೇವನೆ ತಡೆಗಟ್ಟಿ:
ರಾಮಕುಂಜ, ಕೊಯಿಲ, ಕೆಮ್ಮಾರ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣಗಳು ನಡೆಯುತ್ತಿದ್ದು ಪೊಲೀಸರು ರಾತ್ರಿ ಗಸ್ತು ಮಾಡಿ ಎಚ್ಚರಿಕೆ ಕೊಡುವ ಕೆಲಸ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಗಾಂಜಾ ಸೇವನೆ ಹಾಗೂ ಪೂರೈಕೆ ಮಾಡುವವರ ಮೇಲೆ ನಿಗಾ ಇಡಲಾಗಿದ್ದು ಕ್ರಮ ಕೈಗೊಳ್ಳುತ್ತೇವೆ. ಇಂತಹ ಪ್ರಕರಣಗಳ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಬೇಕೆಂದು ಪಿಎಸ್‌ಐ ಅಕ್ಷಯ್ ತಿಳಿಸಿದರು. ರಾಮಕುಂಜ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳೂ ಪತ್ತೆಯಾಗಿಲ್ಲ ಎಂದು ಧರ್ಮಪಾಲ ರಾವ್ ದೂರಿದರು. ಪೊಲೀಸ್ ಜನಸಂಪರ್ಕ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಪವರ್‌ಮ್ಯಾನ್ ನೇಮಿಸಿ:
ರಾಮಕುಂಜದಲ್ಲಿ ಸೇವೆ ಸಲ್ಲಿಸುತ್ತಿದ್ದ ಪವರ್‌ಮ್ಯಾನ್‌ಗೆ ಬಾಗಲಕೋಟೆಗೆ ವರ್ಗಾವಣೆಯಾಗಿದೆ. ಈಗ ಒಬ್ಬರೇ ಲೈನ್‌ಮ್ಯಾನ್ ಇದ್ದು ಅವರೊಬ್ಬರೇ ಕೆಲಸ ಮಾಡಬೇಕಾಗಿದೆ. ಆದ್ದರಿಂದ ರಾಮಕುಂಜ ಗ್ರಾಮಕ್ಕೆ ಇನ್ನೊಬ್ಬರು ಪವರ್‌ಮ್ಯಾನ್ ನೇಮಕ ಮಾಡಬೇಕೆಂದು ಗ್ರಾ.ಪಂ.ಸದಸ್ಯ ಪ್ರಶಾಂತ್, ಗ್ರಾಮಸ್ಥ ಧರ್ಮಪಾಲ ರಾವ್ ಹಾಗೂ ಇತರರು ಆಗ್ರಹಿಸಿದರು. ಹೆಚ್ಚುವರಿ ಪವರ್‌ಮ್ಯಾನ್ ನೇಮಕ ಸಂಬಂಧ ಇಲಾಖೆಗೆ ಪತ್ರ ಬರೆಯಲಾಗಿದೆ. ಗ್ರಾ.ಪಂ.ನಿಂದಲೂ ಪತ್ರ ಬರೆಯುವಂತೆ ಎಇ ನಿತಿನ್‌ಕುಮಾರ್ ಹೇಳಿದರು. ಕೊಯಿಲ-ಕಂಪ ರಸ್ತೆಯ ಮೂರು ಕಡೆ ವಿದ್ಯುತ್ ಕಂಬಗಳೂ ರಸ್ತೆ ಮಧ್ಯವೇ ಇದ್ದು ಅದರ ಶಿಫ್ಟ್ಗೆ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಧರ್ಮಪಾಲ ರಾವ್ ಆಗ್ರಹಿಸಿದರು. ಗೆಲ್ಲು ತುಂಡರಿಸದೇ ವಿದ್ಯುತ್ ತಂತಿ ಎಳೆಯಲಾಗಿದೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥ ಪುತ್ತುಕುಂಞಿ ಮತ್ತಿತರರು ಗಮನ ಸೆಳೆದರು.
ಗ್ರಾ.ಪಂ.ಅನುದಾನ ಕುಡಿಯುವ ನೀರಿಗೆ ಬಳಕೆ ಬೇಡ:
ಕುಡಿಯುವ ನೀರಿನ ಯೋಜನೆಗೆ ಗ್ರಾ.ಪಂ.ಅನುದಾನ ಬಳಕೆ ಮಾಡದೇ ಬಳಕೆದಾರರಿಂದಲೇ ಬರಿಸಬೇಕು. ವರ್ಷದಲ್ಲಿ ಲಕ್ಷಾಂತರ ರೂ.ಕುಡಿಯುವ ನೀರಿಗೆ ಅನುದಾನ ಬಳಕೆಯಾದಲ್ಲಿ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗುವುದಿಲ್ಲವೇ ಎಂದು ಗ್ರಾಮಸ್ಥ ಧರ್ಮಪಾಲ ರಾವ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಲಲಿತಾ ಜಿ.ಡಿ.ಅವರು, ಈ ಕುರಿತಂತೆ ಸಾಮಾನ್ಯ ಸಭೆಯಲ್ಲಿ ಹಾಗೂ ನೀರು ನಿರ್ವಾಹಕರ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾಮಗಾರಿಗಳ ಮಾಹಿತಿ ಬೇಕು:
ತಾ.ಪಂ., ಜಿ.ಪಂ.,ಶಾಸಕರ, ಸಂಸದರ ಸೇರಿದಂತೆ ಸರಕಾರದ ಅನುದಾನದಲ್ಲಿ ಗ್ರಾಮದಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಗ್ರಾಮಸಭೆಯಲ್ಲಿ ಮಾಹಿತಿ ನೀಡಬೇಕೆಂದು ಗ್ರಾಮಸ್ಥರಾದ ಎಸ್.ಕೆ.ಸಿದ್ದೀಕ್ ನೀರಾಜೆ, ಧರ್ಮಪಾಲ ರಾವ್, ಅಶೋಕ್ ಕೊಯಿಲರವರು ಆಗ್ರಹಿಸಿದರು.
ಮನೆ ನಿವೇಶನಕ್ಕೆ ಜಾಗದ ಕೊರತೆ:
ಮನೆ ನಿವೇಶನಕ್ಕೆ ಸರಕಾರಿ ಜಾಗದ ಕೊರತೆ ಇರುವುದರಿಂದ ಕೊಯಿಲ ಪಶುಸಂಗೋಪನಾ ಇಲಾಖೆಯಿಂದ ಗ್ರಾ.ಪಂ.ಗೆ ಜಾಗ ಮಂಜೂರಾತಿಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕ ಮಾಡುವಂತೆಯೂ ಗ್ರಾಮಸ್ಥರು ಒತ್ತಾಯಿಸಿದರು. ಇಜ್ಜಾವು-ನೇರೋಳ್ತಿಕೆಯನ್ನು ಎಸ್‌ಸಿ ಕಾಲೋನಿ ಎಂದು ಘೋಷಿಸಿ ಅನುದಾನ ಮಂಜೂರುಗೊಳಿಸುವಂತೆ ದೇವಕಿ ಹಿರಿಂಜ ಮನವಿ ಮಾಡಿದರು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ಮೇನೇಜರ್ ಆನಂದ ಗೌಡ, ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್, ಆಲಂಕಾರು ಶಾಖಾ ಜೆಇ ಪ್ರೇಮ್‌ಸಿಂಗ್, ಕಡಬ ಠಾಣಾ ಪಿಎಸ್‌ಐ ಅಕ್ಷಯ್, ಗ್ರಾಮ ಆಡಳಿತಾಧಿಕಾರಿ ಸತೀಶ್, ರಾಮಕುಂಜ ಕ್ಲಸ್ಟರ್ ಸಿಆರ್‌ಪಿ ಮಹೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಉಮಾವತಿ, ಪಶು ವೈದ್ಯಕೀಯ ಇಲಾಖೆಯ ಸೂಸಮ್ಮ ಮತ್ತಾಯಿ, ಆರೋಗ್ಯ ಸಹಾಯಕಿ ಲಲಿತ, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್‌ರವರು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಸದಸ್ಯರಾದ ಮಾಲತಿ ಎನ್.ಕೆ., ಪ್ರಶಾಂತ್ ಆರ್.ಕೆ., ಯತೀಶ್‌ಕುಮಾರ್ ಬಾನಡ್ಕ, ಕುಶಾಲಪ್ಪ ಗೌಡ, ಹೆಚ್.ಅಬ್ದುಲ್ ರಹಿಮಾನ್, ವಸಂತ ಪಿ., ಸೂರಪ್ಪ ಕುಲಾಲ್, ಸುಜಾತ, ರೋಹಿಣಿ, ಜಯಶ್ರೀ, ಪ್ರದೀಪ, ಭವಾನಿ, ಭಾರತಿ, ಆಯಿಷಾಶರೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಲಲಿತಾ ಜಿ.ಡಿ.,ಸ್ವಾಗತಿಸಿ ವರದಿ ಮಂಡಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಸಬ್‌ಸ್ಟೇಷನ್‌ಗೆ ಜಾಗ ಮಂಜೂರು:
ಪುತ್ತೂರಿನಿಂದ ಕೊಯಿಲ, ರಾಮಕುಂಜ ಭಾಗಕ್ಕೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಇದರಿಂದ ಪದೇ ಪದೇ ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಾಯ ಆಗುತಿತ್ತು. ಇದಕ್ಕೆ ಪರಿಹಾರದ ನಿಟ್ಟಿನಲ್ಲಿ ಕೊಯಿಲದಲ್ಲಿ ಸಬ್‌ಸ್ಟೇಷನ್ ನಿರ್ಮಾಣಕ್ಕೆ ಪ್ರಯತ್ನಿಸಲಾಗಿತ್ತು. ಇದೀಗ ಸಬ್‌ಸ್ಟೇಷನ್‌ಗೆ ಜಾಗ ಮಂಜೂರುಗೊಂಡಿದ್ದು ಟೆಂಡರ್ ಪ್ರಕ್ರಿಯೆ ಬಳಿಕ ಮುಂದಿನ ಹಂತದ ಕಾಮಗಾರಿಗಳು ನಡೆಯಲಿವೆ ಎಂದು ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್ ಹೇಳಿದರು.
ಜಾನುವಾರು ಕಳವು-ಚರ್ಚೆ:
ರಾಮಕುಂಜ ದೇವಸ್ಥಾನದ ವಠಾರದಿಂದ ಇತ್ತೀಚೆಗೆ ತಡರಾತ್ರಿ ವೇಳೆ ಶಿಫ್ಟ್ ಕಾರೊಂದರಲ್ಲಿ ಜಾನುವಾರು ಕಳ್ಳತನ ಆಗಿದೆ. ಈ ಸಂದರ್ಭದಲ್ಲಿ ಬೀಟ್ ಪೊಲೀಸರು ದೇವಸ್ಥಾನದಲ್ಲಿ ಇದ್ದರೂ ಅವರ ಅರಿವಿಗೆ ಬಂದಿಲ್ಲ. ಈ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಗ್ರಾಮಸ್ಥ ಅಶೋಕ್ ಕೊಯಿಲ, ಧರ್ಮಪಾಲ ರಾವ್‌ರವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಡಬ ಠಾಣಾ ಪಿಎಸ್‌ಐ ಅಕ್ಷಯ್ ಅವರು, ಶಿಫ್ಟ್ ಕಾರು ಆಗಿರುವುದರಿಂದ ಯಾರೋ ಮನೆಯವರು ಬಂದಿರಬಹುದು ಎಂದು ಬೀಟ್ ಪೊಲೀಸರು ಬಾವಿಸಿದ್ದಾರೆ. ಅರಿವಿಗೆ ಬರುತ್ತಿದ್ದಂತೆ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.