ಪುತ್ತೂರು: “ರಕ್ಷಾಬಂಧನ ಸಹೋದರ -ಸಹೋದರಿಯರ ಸಂಬಂಧಕ್ಕೆ ಮಾತ್ರ ಸೀಮಿತವಾಗದೆ ವಿಶ್ವಬಂಧುತ್ವಕ್ಕೆ ಸಾಕ್ಷಿಯಾಗಿದೆ. ಭಾರತೀಯ ಸಂಪ್ರದಾಯಗಳು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಪ್ರತೀ ಹಬ್ಬದಲ್ಲೂ ಬದುಕಿಗೆ ಬೇಕಾದ ಸಂದೇಶಗಳು ಇರುತ್ತದೆ. ಅವುಗಳನ್ನು ನಾವು ಅರಿತುಕೊಳ್ಳಬೇಕು. ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಈ ರಕ್ಷಾಬಂಧನ” ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ಪುತ್ತೂರು ಮತ್ತು ಮಂಗಳೂರು ಜಿಲ್ಲೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀರಾಮ್ ಅಂಗಿರಸರವರು ಹೇಳಿದರು.
ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ರಕ್ಷಾಬಂಧನ ಆಚರಣೆಯ ಮಹತ್ವವನ್ನು ತಿಳಿಸಿದರು. ರಕ್ಷಾಬಂಧನ ಎಂಬುದರ ತಾತ್ಪರ್ಯವೇನೆಂದರೆ ಪ್ರೀತಿಯ ಭಾವದಿಂದ ತನ್ನ ರಕ್ಷಣೆಯ ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಳ್ಳುವುದು ಎಂದು ಹೇಳಬಹುದು. ದೇಶಕಾಯುವ ಯೋಧರು, ಮಾಹಿತಿ ನೀಡಿ ರಕ್ಷಿಸುವ ಮಾಧ್ಯಮದವರು, ಸಾಗಿಸುವ ಸಾರಿಗೆಯವರು, ಅನ್ನ ನೀಡುವ ರೈತರು, ಅಕ್ಷರ ಕಲಿಸುವ ಗುರುಗಳು, ಆರಕ್ಷಕರು ಇವರೆಲ್ಲಾ ನಮ್ಮ ರಕ್ಷಕರೇ ಹೌದು. ಹೀಗೇ ಹಲವಾರು ಪ್ರಾಮಾಣಿಕ ಶಕ್ತಿಗಳು ನಮ್ಮ ರಕ್ಷಕರೇ ಆಗಿರುವರು. ಹೀಗೆ ಎಲ್ಲಾ ಸಮುದಾಯಗಳ ನಡುವೆ ಸೌಹಾರ್ದ ಮತ್ತು ಏಕತೆಯನ್ನು ಉತ್ತೇಜಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಮಾತನಾಡುತ್ತಾ, ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ರಕ್ಷಾ ಬಂಧನ ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದೆ. ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ ಮತ್ತು ಇದು ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ ಎಂದು ಹೇಳಿದರು.
ಬಳಿಕ ಉಪನ್ಯಾಸಕರು, ಸಿಬ್ಬಂದಿವರ್ಗದವರು ಮತ್ತು ವಿದ್ಯಾರ್ಥಿಗಳು ಶ್ಲೋಕ ಪಠಿಸಿ ಪರಸ್ಪರ ರಕ್ಷಾಧಾರಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಚರಣ್ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೇಯಾ ವಂದಿಸಿದರು.