ಉಪ್ಪಿನಂಗಡಿ: ಇಲ್ಲಿನ ವಲಯ ಅರಣ್ಯ ಇಲಾಖಾ ವ್ಯಾಪ್ತಿಗೆ ಒಳಪಟ್ಟ ಶಿಬಾಜೆ ರಕ್ಷಿತಾರಣದಲ್ಲಿ ಮರ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಪತ್ರಿಕಾ ವರದಿಗೆ ಪೂರಕ ಮಾಹಿತಿ ನೀಡಿದ ಶಿಬಾಜೆ ಗ್ರಾಮ ನಿವಾಸಿ ಕುರಿಯಕೋಸ್ ಓ. ಟಿ. ಎಂಬವರ ಮನೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಬೆದರಿಕೆಯೊಡ್ಡಿದ್ದಾರೆಂದು ರಾಜ್ಯ ಅರಣ್ಯ ಸಚಿವರಿಗೆ ದೂರು ನೀಡಿದ ಘಟನೆ ವರದಿಯಾಗಿದೆ.
ಶಿಬಾಜೆಯ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗುತ್ತಿರುವ ಬಗ್ಗೆ ಹಾಗು ಇದಕ್ಕೆ ಸ್ಥಳೀಯ ಅರಣ್ಯ ಇಲಾಖಾ ಸಿಬ್ಬಂದಿಯ ಸಹಕಾರವೂ ಲಭಿಸುತ್ತಿರುವ ಬಗ್ಗೆ ಸಚಿತ್ರ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಈ ವರದಿಗೆ ಕುರಿಯಕೋಸ್‌ರವರು ಪ್ರತಿಕ್ರಿಯೆ ನೀಡಿದ್ದರು.
ಈ ಬಗ್ಗೆ ಗುರುವಾರದಂದು ಮಧ್ಯಾಹ್ನ ಸಮಯಕ್ಕೆ ಬೊಲೇರೋ ವಾಹನದಲ್ಲಿ ಬಂದ ಅರಣ್ಯ ಇಲಾಖಾಧಿಕಾರಿಗಳು ನನ್ನನ್ನು ಮನೆಯಿಂದ ಹೊರಗೆ ಕರೆದು ಮರಗಳ್ಳತನದ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ಕಾರಣಕ್ಕೆ ಬೆದರಿಸುವ ರೀತಿಯಲ್ಲಿ ಆಕ್ಷೇಪಾರ್ಹ ಮಾತುಗಳನ್ನಾಡಿ, ತನ್ನ ಪೋಟೋವನ್ನು ಮೊಬೈಲ್ ನಲ್ಲಿ ಕ್ಲಿಕ್ಕಿಸಿಕೊಂಡು ಹೋಗಿರುತ್ತಾರೆ. ಮರಗಳ್ಳತನದಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳ ಶಾಮೀಲಾತಿಯ ಬಗ್ಗೆ ತಾನು ಮಾತನಾಡಿದ್ದರಿಂದ ನನ್ನನ್ನು ಯಾವುದೇ ಸಮಯದಲ್ಲಿ ಸಮಸ್ಯೆಗೆ ಸಿಲುಕಿಸುವ ಸಾಧ್ಯತೆ ಇದ್ದು, ಇದರಿಂದಾಗಿ ತಾನು ಭಯಭೀತಿಯಲ್ಲೇ ದಿನ ಕಳೆಯುವಂತಾಗಿದೆ ಎಂದು ದೂರಿರುವ ಅವರು, ಇಲ್ಲಿ ಅವ್ಯಾಹತವಾಗಿ ಮರಗಳ್ಳತನವಾಗುತ್ತಿರುವ ಬಗ್ಗೆ, ಮರಗಳ್ಳರ ಬಗ್ಗೆ ನಾವೆಲ್ಲಾ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಇದಕ್ಕಿಂತ ಮೊದಲು ಮಾಹಿತಿ ನೀಡಿದ್ದರೂ, ಅವರು ಅದಕ್ಕೆ ಸ್ಪಂದಿಸುತ್ತಿರಲಿಲ್ಲ. ಬದಲಾಗಿ ಈ ವಿಷಯ ಮರಗಳ್ಳರಿಗೆ ಗೊತ್ತಾಗಿ ಅವರಿಂದ ನಮಗೆ ಬೆದರಿಕೆಗಳು ಬರುತ್ತಿತ್ತು ಎಂದು ತಿಳಿಸಿದ್ದಾರೆ.
ಭೇಟಿ ಸ್ನೇಹಾಚಾರದ ನೆಲೆಗಟ್ಟಿನಲ್ಲಿತ್ತು: ಅರಣ್ಯಾಧಿಕಾರಿ
ಈ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ರವರನ್ನು ಪತ್ರಿಕೆ ಸಂಪರ್ಕಿಸಿದಾಗ , ಪತ್ರಿಕಾ ವರದಿಯಲ್ಲಿ ಬಂದಂತಹ ಮರಗಳ್ಳತನದ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಪುತ್ತೂರು ಸಹಾಯಕ ಉಪವಿಭಾಗದ ಅರಣ್ಯಾಧಿಕಾರಿ ಯವರು ಖುದ್ದು ಸ್ಥಳ ಪರಿಶೀಲನೆ ನಡೆಸುವ ಸಲುವಾಗಿ ನಮ್ಮೊಂದಿಗೆ ಶಿಬಾಜೆ ರಕ್ಷಿತಾರಣ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜಿಲ್ಲಾ ಅರಣ್ಯಾಧಿಕಾರಿಗಳಿಗೆ ದೂರು ನೀಡಿರುವ ಹಾಗೂ ಪತ್ರಿಕೆಯ ವರದಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕುರಿಯಕೋಸ್ ರವರನ್ನು ಭೇಟಿ ಮಾಡಿ, ಮರಗಳ್ಳತನವಾದ ಸ್ಥಳವನ್ನು ತೋರಿಸಲು ವಿನಂತಿಸಿದ್ದೆವು. ಮರಗಳ್ಳತನವಾದ ಸ್ಥಳವನ್ನು ತೋರಿಸಲು ಅವರು ನಿರಾಕರಿಸಿದರು. ಬಳಿಕ ನಾವು ಇನ್ನು ಮುಂದೆ ಮರಗಳ್ಳತನದ ಕೃತ್ಯವೇನಾದರೂ ನಡೆದರೆ ನಮಗೆ ತಿಳಿಸಿ ಎಂದು ನಮ್ಮ ದೂರವಾಣಿ ಸಂಖ್ಯೆಯನ್ನು ನೀಡಿ ಬಂದಿದ್ದೆವು. ಪತ್ರಿಕಾ ವರದಿ ಪ್ರಕಟವಾದರೂ ಅರಣ್ಯ ಇಲಾಖಾಧಿಕಾರಿಗಳು ಸ್ಥಳ ತನಿಖೆಗೆ ಬಂದಿಲ್ಲ ಎಂಬ ಆರೋಪ ಬರಬಾರದೆಂದು , ನಾವು ಕುರಿಯಕೋಸ್ ರವರೊಂದಿಗೆ ಮಾತುಕತೆಯಾಡುತ್ತಿದ್ದ ದೃಶ್ಯವನ್ನು ದಾಖಲೆಗಾಗಿ ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿತ್ತೇ ವಿನಹ ಯಾವುದೇ ಬೆದರಿಕೆಗಾಗಿ ಪೋಟೋ ತೆಗೆದಿರುವುದಿಲ್ಲ. ಮಾತುಕತೆಯೂ ಕೂಡಾ ಸ್ನೇಯಾಚಾರದ ನೆಲೆಗಟ್ಟಿನಲ್ಲೇ ನಡೆದಿದ್ದರೂ, ಮಾತುಕತೆಯುದ್ದಕ್ಕೂ ನಗುನಗುತ್ತಲೇ ನಮ್ಮೊಂದಿಗೆ ಮಾತನಾಡುತ್ತಿದ್ದ ಅವರು, ಯಾಕಾಗಿ ಅರಣ್ಯ ಇಲಾಖಾಧಿಕಾರಿಗಳ ವಿರುದ್ದ ಸುಳ್ಳು ದೂರು ನೀಡಿದ್ದಾರೆನ್ನುವುದೇ ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.