ಸವಣೂರು : ಹಿಂದೂ ಧರ್ಮದಲ್ಲಿರುವ ಧಾರ್ಮಿಕ ಮೌಲ್ಯ, ಆಚಾರ ವಿಚಾರಗಳನ್ನು ,ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು.ಹಿಂದೂ ಧರ್ಮದಲ್ಲಿರುವ ವೈಚಾರಿಕತೆ ಬೇರೆಲ್ಲೂ ಕಾಣಸಿಗದು.ಸಾಮೂಹಿಕ ಪ್ರಾರ್ಥನೆಯಿಂದ ದೇವರನ್ನು ಬೇಗ ಒಲಿಸಿಕೊಳ್ಳಬಹುದು ಎಂದು ದೇವರ ಗುಡ್ಡೆ ಶ್ರೀ ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್ನ ಸದಸ್ಯ ವೆಂಕಟೇಶ್ ಕೊಯಕ್ಕುಡೆ ಹೇಳಿದರು.
ಅವರು ಆ.31ರಂದು ರಾತ್ರಿ ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ಸವಣೂರು ಇದರ ವತಿಯಿಂದ ನಡೆದ ೨೫ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರ ಘಟಕದ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ದೀಪ ಪ್ರಜ್ವಲನೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಗೇರು ದೇವಸ್ಥಾನದ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ ಅವರು ,ಎಲ್ಲರೂ ಒಟ್ಟಾಗಿ ಸಂಘಟಿತರಾಗಿ ಧರ್ಮಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕಾರವನ್ನು ತಿಳಿಸುವ ಕಾರ್ಯ ಸಂಘಟನೆಗಳಿಂದ ಆಗುತ್ತಿದೆ.ಆರಾಧನೆಯ ಮಹತ್ವ ನಮ್ಮ ಮನಸಿನಲ್ಲಿ ಅಂತರ್ಗತವಾಗಿರಬೇಕು.ಭಕ್ತಿಯಿಂದ ಸಲ್ಲಿಸುವ ಸೇವೆಗೆ ಸತ್ಯನಾರಾಯಣ ದೇವರ ಅನುಗ್ರಹ ಶೀಘ್ರ ಪ್ರಾಪ್ತಿಯಾಗುತ್ತದೆ ಎಂದರು.
ವೇದಿಕೆಯಲ್ಲಿ ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಿವರಾಮ ಗೌಡ ಮೆದು ,ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು,ಸವಣೂರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಹಿಂ.ಜಾ.ವೇ.ಸವಣೂರು ಘಟಕದ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ, ಹಿಂ.ಜಾ.ವೇ.ಯ ಪುತ್ತೂರು ತಾಲೂಕು ಸಮಿತಿ ಸದಸ್ಯ ಸ್ವಸ್ತಿಕ್ ಮೇಗಿನಗುತ್ತು,ಹಿಂ.ಜಾ.ವೇ.ಪುತ್ತೂರು ಘಟಕದ ಕಾರ್ಯದರ್ಶಿ ಪುಷ್ಪರಾಜ ಆರೇಲ್ತಡಿ ಉಪಸ್ಥಿತರಿದ್ದರು.
ಸವಣೂರು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಶ್ರೀಧರ ಇಡ್ಯಾಡಿ ಸ್ವಾಗತಿಸಿ ,ದಯಾನಂದ ಮೆದು ವಂದಿಸಿದರು.ಮಹೇಶ್ ಕೆ.ಸವಣೂರು ,ರಾಜೇಶ್ ಇಡ್ಯಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ
ಆ.31ರಂದು ಸಂಜೆ 5 ರಿಂದ ಸತ್ಯನಾರಾಯಣ ಪೂಜೆ ಆರಂಭವಾಯಿತು.ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಮಂಗಳಾರತಿ ಮತ್ತು ಪ್ರಸಾದ ವಿತರಣೆ, ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು.ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು.