ಏಕ ಕಾಲದಲ್ಲಿ 108 ಕೇಂದ್ರಗಳಲ್ಲಿ ಆರಂಭಗೊಂಡ ಜಪ ಯಜ್ಞ
ಪುತ್ತೂರು: ಲೋಕ ಕಲ್ಯಾಣಾರ್ಥ, ಸಮಗ್ರತೆ, ಹಿಂದೂ ಬಾಂಧವರ ಏಕತೆಗಾಗಿ, ಮನಸ್ಸಿನ ಏಕಾಗ್ರತೆ ಸಿದ್ದಿಗಾಗಿ ಸೆ.24ರ ತನಕ ಭಕ್ತರು ಮನೆ ಮನೆಯಲ್ಲೇ ಮಾಡುವ ’ಏಕಾದಶ ಕೋಟಿ ಮಹಾಲಿಂಗೇಶ್ವರ ಜಪ ಯಜ್ಞ’ ಕ್ಕೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೆ.2ರಂದು ಉದಯ ಕಾಲ 6-30ಕ್ಕೆ ಸಂಕಲ್ಪದೊಂದಿಗೆ ಪ್ರಾರಂಭಗೊಳಿಸಲಾಯಿತು.
ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ಜಪ ಯಜ್ಞವನ್ನು ಉದ್ಘಾಟಿಸಿದಂತೆ 108 ಕೇಂದ್ರಗಳಲ್ಲೂ ಜಪ ಯಜ್ಞ ಆರಂಭಗೊಂಡಿತ್ತು. ದೇವಳದ ಇನ್ನೋರ್ವ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಜಪ ಯಜ್ಞದ ಸಂಕಲ್ಪ ನೆರವೇರಿಸಿದರು. ಬಳಿಕ ” ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ’ ಎಂಬ ಸರಳ ಸೂತ್ರದಲ್ಲಿ ಜಪ ಯಜ್ಞ ಆರಂಭಗೊಂಡಿತ್ತು. ಜಪಯಜ್ಞದ ಕೊನೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ನ ನಿಕಟಪೂರ್ವ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಜಪಯಜ್ಞದ ಮಹತ್ವ ವಿವರಿಸಿದರು. ಈ ಸಂದರ್ಭ ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ರಾಮದಾಸ್ ಗೌಡ ಸಹಿತ ಭಕ್ತರು ಜಪಯಜ್ಞದಲ್ಲಿ ಭಾಗವಹಿಸಿದ್ದರು.
ದಿನಕ್ಕೆ 1080 ಜಪದಂತೆ 11 ದಿನಗಳ ಜಪ:
ಸೆ.2ರಿಂದ ದಿನಕ್ಕೆ 1080 ಜಪದಂತೆ 11 ದಿನಗಳ ಜಪ ಮಾಡಬೇಕು. ಇದು ನಿರಂತರ ಮಾಡಬೇಕಾಗಿಲ್ಲ. ಅಸೌಚ್ಯದ ಸಂದರ್ಭದಲ್ಲಿ ಸಮಸ್ಯೆ ಆಗದಂತೆ 23 ದಿನ ಕಾಲವಕಾಶ ನೀಡಲಾಗಿದೆ. ಜಪವನ್ನು ಅವರವರ ಮನೆಯಲ್ಲೇ ಮಾಡಲಾಗುತ್ತದೆ. ಜಪ ಮಾಡುವವರು ತಮ್ಮ ಮನೆಗಳಲ್ಲಿ ಪ್ರಾತಃಕಾಲ ಅಥವಾ ಸಾಯಂಕಾಲ ಅಥವಾ ಎರಡು ಹೊತ್ತು ತಮ್ಮ ಅನುಕೂಲದಂತೆ ಶುಚೀರ್ಭೂತರಾಗಿ ದೇವರ ಮುಂದೆ ಮಣೆ, ಚಾಪೆ ಅಥವಾ ಮೇಲೆ ಕುಳಿತು, ದೀಪ ಹಚ್ಚಿ ಹಣೆಗೆ ಗಂಧ / ವಿಭೂತಿ/ಕುಂಕುಮ ಹಚ್ಚಿ ದಿನಕೆಕ 1080 ಬಾರಿ ’ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ’ ಎಂಬ ಜಪ ಮಾಡುವುದು. 108 ನಾಣ್ಯಗಳ ಮೂಲಕ ಪ್ರತಿದಿನ 1080 ಜಪ, ಹಾಗು 11 ದಿನಗಳಲ್ಲಿ 11,880 ಜಪ ಮಾಡುವುದು. ಮನೆಗೆ ಒಂದರ ಜಪ ಮಾಡಿದ 108 ನಾಣ್ಯಗಳನ್ನು ಸಮರ್ಪಿಸಿ ರೂ. 108 ರ ಸೇವಾಚೀಟಿ ಮಾಡಿಸಿಕೊಳ್ಳುವುದು. 108 ಜಪಕ್ಕೆ ಒಂದು ಸಲದಂತೆ ಒಟ್ಟು 11,880 ಜಪಕ್ಕೆ 110 ಸಲ ’ ಓಂ ಶ್ರೀ ಮಹಾಲಿಂಗೇಶ್ವರಾಯ ನಮಃ’ ಎಂದು ಬರೆಯುವುದು. ಸಂಕಷ್ಟಹರ ಚತುರ್ಥಿಯಿಂದ ಪ್ರಾರಂಭ ಮಡಿ 11 ದಿನ ಪರ್ಯಂತ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಾದಿಗಳ ಮನೆಮನೆಗಳಲ್ಲಿ ಮಾಡುವ ಜಪದಿಂದ ಲೋಕ ಕಲ್ಯಾಣವಾಗಲಿ ಎಂದು ಸರ್ವರೂ ಪ್ರಾರ್ಥಿಸುವಂತೆ ಮನವಿ.
ಕೇಶವಪ್ರಸಾದ್ ಮುಳಿಯ,
ಅಧ್ಯಕ್ಷರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು