ನಮ್ಮ ಸಂಸ್ಥೆಯಿಂದ ಸ್ಪರ್ಧೆಗೆ ಸದಾ ಸಹಕಾರ – ಜಯಲಕ್ಷ್ಮೀ
ಮಕ್ಕಳಿಗೆ ಸಂಸ್ಕೃತಿ, ದೇಶ ಪ್ರೇಮ ಬೆಳೆಸುವ ಉದ್ದೇಶ – ಸುಜೀಂದ್ರ ಪ್ರಭು
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪ್ರತಿ ವರ್ಷದಂತೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಒಂದು ವಾರಗಳ ಕಾಲ ನಡೆಯುವ ವಿವಿಧ ಸ್ಪರ್ಧೆಗಳಿಗೆ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸೆ.3ರಂದು ಚಾಲನೆ ನೀಡಲಾಯಿತು.
ಪ್ರಥಮ ಸ್ಪರ್ಧೆಯಾಗಿ ಅಂದವಾದ ಬರಹ ಮತ್ತು ಚದುರಂಗ ಸ್ಪರ್ಧೆ ನಡೆಯಿತು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಜಯಲಕ್ಷ್ಮಿ ಅವರು ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿ ವರ್ಷ ಗಣೇಶೋತ್ಸವದ ಸ್ಪರ್ಧೆ ನಮಗೆ ಸಂಭ್ರಮದ ದಿನ. ಯಾಕೆಂದರೆ ನಮ್ಮ ಸಂಸ್ಥೆಯಲ್ಲಿ ಸಣ್ಣ ಮಕ್ಕಳು ಕಡಿಮೆ. ಹಾಗಾಗಿ ಸ್ಪರ್ಧೆ ಕಾರ್ಯಕ್ರಮದ ದಿನ ಇಡಿ ಊರಿನ ಸಣ್ಣ ಸಣ್ಣ ಮಕ್ಕಳು ನಮ್ಮ ಶಾಲೆಗೆ ಬಂದಾಗ ದೇವರೆ ಬಂದಂತಾಗಿದೆ. ನಮ್ಮ ಸಂಸ್ಥೆ ಯಾವತ್ತೂ ಕೂಡ ಸ್ಪರ್ಧೆಗೆ ನಮ್ಮಿಂದ ಸಾಧ್ಯವಾದ ಎಲ್ಲಾ ಅನುಕೂಲ ಮಾಡುತ್ತೇವೆ ಎಂದರು.
ಮಕ್ಕಳಿಗೆ ಸಂಸ್ಕೃತಿ, ದೇಶ ಪ್ರೇಮ ಬೆಳೆಸುವ ಉದ್ದೇಶ:
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು ಅವರು ಮಾತನಾಡಿ ಸಮಿತಿಯಿಂದ ವರ್ಷಂಪ್ರತಿ ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು ಮಕ್ಕಳಿಗೆ ನಮ್ಮ ಸಂಪ್ರದಾಯ, ಹಿಂದು ಸಂಸ್ಕೃತಿ, ದೇಶ ಭಕ್ತಿಯನ್ನು ತಿಳಿಸುವ ಕೆಲಸ ಆಗುತ್ತಿದೆ. ಸುಮಾರು 600ಕ್ಕೂ ಅಧಿಕ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಅದೇ ರೀತಿ ಮಕ್ಕಳು ಮೂರು ದಿನ ನಡೆಯುವ ಗಣೆಶೋತ್ಸವದ ಕಾರ್ಯಕ್ರಮದಲ್ಲೂ ಭಾಗವಹಿಸಬೇಕು. ಪ್ರತಿ ದಿನ ಉತ್ತಮ ವಾಗ್ಮಿಗಳ ಮೂಲಕ ದೇಶ ಪ್ರೇಮದ ಸಂದೇಶ ಸಿಗುತ್ತದೆ. ಅದು ಮಕ್ಕಳು ತಿಳಿಯಬೇಕು. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಗಣೇಶೋತ್ಸವದ ಸಭಾ ಕಾರ್ಯಕ್ರಮಕ್ಕೂ ಕರೆದು ಕೊಂಡು ಬರುವಂತೆ ವಿನಂತಿಸಿದರು. ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಭ್ಳೆ, ಕೋಶಾಧಿಕಾರಿ ಶ್ರೀನಿವಾಸ ಮೂಲ್ಯ, ಜೊತೆ ಕಾರ್ಯದರ್ಶಿ ನೀಲಂತ್ ಕುಮಾರ್, ಉಪಾಧ್ಯಕ್ಷ ವಿಶ್ವನಾಥ ಗೌಡ, ಬನ್ನೂರು, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ಜಯಶ್ರೀ ಎಸ್ ಶೆಟ್ಟಿ, ಉದಯ ಹೆಚ್ ಸಹಿತ ಹಲವಾರು ಮಂದಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸ್ಪರ್ಧಾ ಕಾರ್ಯದರ್ಶಿ ಶ್ರೀಕಾಂತ್ ಕಂಬಳಕೋಡಿ ಕಾರ್ಯಕ್ರಮ ನಿರೂಪಿಸಿದರು.