ಇರ್ದೆ ಬಾಲ್ಯೊಟ್ಟು ಗುತ್ತು ಕಾರ್ತಿಕ್ ರೈ ಅವರಿಗೆ ಎನ್.ಎಲ್.ಎಸ್.ಐ.ಯು ನ ಕಾನೂನು ಪದವಿಯಲ್ಲಿ 3ನೇ ರ‍್ಯಾಂಕ್

0

ಪುತ್ತೂರು: ಬೆಂಗಳೂರಿನ ಪ್ರತಿಷ್ಟಿತ ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಅಂತಿಮ ಕಾನೂನು ಡಿಗ್ರಿ ಪರೀಕ್ಷೆಯಲ್ಲಿ ಪುತ್ತೂರು ಇರ್ದೆ ಗ್ರಾಮದ ಬಾಲ್ಯೊಟ್ಟು ಗುತ್ತು ಕಾರ್ತಿಕ್ ರೈಯವರಿಗೆ ಮೂರನೇ ರ‍್ಯಾಂಕ್ ಬಂದಿದೆ. ಇದಲ್ಲದೆ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.


ಎನ್. ಆರ್ ನಾಯ್ಡು ಚಿನ್ನದ ಪದಕ, ಇಂಟಲೆಕ್ಚುಯಲ್ ಪ್ರಾಪರ್ಟಿ ಲಾ ದಲ್ಲಿ ಪ್ರೊ. ಶಿವಶಂಕರ್ ಮೆಮೋರಿಯಲ್ ಚಿನ್ನದ ಪದಕ ಮತ್ತು ಆಡ್ಮಿನಿಸ್ಟ್ರೇಟಿವ್ ಲಾ ದಲ್ಲಿ ಆರ್. ಕೇಶವನ್ ಅಯ್ಯಂಗಾರ್ ಮೆಮೋರಿಯಲ್ ಚಿನ್ನದ ಪದಕ ಸಹಿತ ಒಟ್ಟು ಮೂರು ಚಿನ್ನದ ಪದಕಗಳನ್ನೂ ಪಡೆದಿದ್ದು, ಆ.26ರಂದು ಬೆಂಗಳೂರಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ವೈ. ವಿ. ಚಂದ್ರಚೂಡ್ ಅವರು ಪದವಿ ಪತ್ರವನ್ನು ಕಾರ್ತಿಕ್ ರೈಯವರಿಗೆ ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭೂತಾನಿನ ಯುವರಾಣಿ ಹಾಗೂ ಭೂತಾನ್ ಜೆ ಯಸ್ ಡಬ್ಲ್ಯೂ ಲಾ ಕಾಲೇಜಿನ ಸ್ಥಾಪಕ ಅಧ್ಯಕ್ಷೆ ಮಿಸ್. ಸೊನಮ್ ದೇಚನ್ ವಾಂಗ್ಚುಕ್ ಅವರು ಚಿನ್ನದ ಪದಕಗಳನ್ನು ತೊಡಿಸಿ, ಕಾರ್ತಿಕ್ ಅವರನ್ನು ಗೌರವಿಸಿದರು. ಸಮಾರಂಭದಲ್ಲಿ ರಾಜ್ಯ ಸರಕಾರದ ಕಾನೂನು ಮಂತ್ರಿ ಹೆಚ್. ಕೆ. ಪಾಟೀಲ್, ಉನ್ನತ ಶಿಕ್ಷಣ ಮಂತ್ರಿ ಎಮ್. ಸಿ. ಸುಧಾಕರ್, ಸುಪ್ರಿಂ ಕೋರ್ಟ್ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಎಮ್. ಕೆ ಮಿಶ್ರಾ ಹಾಗೂ ಕರ್ನಾಟಕ ಹೈಕೋರ್ಟುಗಳ ನ್ಯಾಯಾಧೀಶರುಗಳು ಹಾಗೂ ಇತರ ಗಣ್ಯರು ಕೂಡ ಭಾಗವಹಿಸಿದ್ದರು.

ಕಾರ್ತಿಕ್ ರೈ ಅವರು ಬೆಂಗಳೂರಿನ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ನಿವೃತ್ತ ಸಹಾಯಕ, ಮಹಾ ಪ್ರಬಂಧಕ, ಪುತ್ತೂರಿನ ಬಾಲ್ಯೊಟ್ಟು ಗುತ್ತು ಧನಂಜಯ ರೈ ಹಾಗೂ ಅರ್ವಗುತ್ತು ಸುಜಾತ ರೈ ಅವರ ಪುತ್ರ. ಕಾನೂನು ವ್ಯಾಸಂಗದ ಅವಧಿಯಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ಚಂದ್ರಚೂಡ ಅವರೊಂದಿಗೆ ಇಂಟರ್ನ್ ಆಗಿ ಕೂಡ ಕಾರ್ತಿಕ್ ಅವರು ಕೆಲಸ ಮಾಡಿದ್ದರು. ಪ್ರಸ್ತುತ ಕಾರ್ತಿಕ್ ರೈ ಅವರು ಭಾರತದ ಹೆಸರಾಂತ ಲಾ ಸಂಸ್ಥೆ ಟ್ರೈಲೀಗಲ್‌ನ ಬೆಂಗಳೂರು ಕಚೇರಿಯಲ್ಲಿ ಅಸೋಸಿಯೇಟ್ ಲಾಯರ್ ಆಗಿ ಸೇವೆ ಮಾಡುತ್ತಿದ್ದು ಬೆಂಗಳೂರಿನ ಸಹಕಾರ ನಗರದಲ್ಲಿ ತಮ್ಮ ಪೋಷಕರ ಜೊತೆ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here