ತಾ.ಮಟ್ಟದ ಶಿಕ್ಷಕರ ದಿನಾಚರಣೆ, ಗುರುವಂದನೆ – ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ, ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಅಭಿನಂದನೆ

0

ಶಿಕ್ಷಕರು ಒಂದೇ ಭಾವನೆಯಿಂದ, ಒಗ್ಗಟ್ಟಿನಲ್ಲಿ ಕರ್ತವ್ಯ ನಿಭಾಯಿಸಬೇಕು – ವಿಠಲ ನಾಯಕ್
ಇಂಗ್ಲಿಷ್ ಶಿಕ್ಷಣ ಎಲ್ಲಾ ಮಕ್ಕಳು ಕಡ್ಡಾಯವಾಗಿ ಕಲಿಯಬೇಕು- ಅಶೋಕ್ ಕುಮಾರ್ ರೈ

ಪುತ್ತೂರು: ಶಿಕ್ಷಕ ವೃತ್ತಿ ಅತ್ಯಂತ ಪುಣ್ಯದ ವೃತ್ತಿ. ಶಿಕ್ಷಕರ ಮನಸ್ಸು ವಿಶಾಲವಾಗಿ ಇರಬೇಕು. ಶಾಲಾ ಕರ್ತವ್ಯದಲ್ಲಿ ಎಲ್ಲಾ ಶಿಕ್ಷಕರು ಒಂದು ಎಂಬ ಭಾವನೆಯಿಂದ ಕರ್ತವ್ಯ ನಿಭಾಯಿಸಬೇಕು ಎಂದು ಬೊಳಂತಿಮೊಗರು ಹಿ.ಪ್ರಾ.ಶಾಲೆಯ ಸಹಶಿಕ್ಷಕ, ಗೀತಾ ಸಾಹಿತ್ಯ ಕಾರ್ಯಕ್ರಮದ ರೂವಾರಿ ವಿಠಲ ನಾಯಕ್ ಹೇಳಿದರು. ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಮತ್ತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಂಯುಕ್ತ ಆಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನೋತ್ಸವದ ನೆನಪಿನಲ್ಲಿ ಕೊಂಬೆಟ್ಟು ಬಂಟರ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು. ವ್ಯಕ್ತಿತ್ವ ವಿಕಸನ, ಮಾನವೀಯತೆ ದೂರವಾಗುವ ಕಾಲದಲ್ಲಿ ಪಠ್ಯಕ್ರಮಕ್ಕೆ ಮಾತ್ರ ನಾವು ಸೀಮಿತವಾಗುತ್ತಿದ್ದೇವೆ. ಹೇಳಿದ್ದೆಲ್ಲವನ್ನು ವಿದ್ಯಾರ್ಥಿಗಳು ಕಲಿಯಬೇಕೆನ್ನುವ ಭ್ರಮೆ ಶಿಕ್ಷಕರಿಗೆ ಬೇಡ. ಶಿಕ್ಷಕರು ಆತ್ಮ ತೃಪ್ತಿಗೋಸ್ಕರ ಕೆಲಸ ಮಾಡಬೇಕು. ದೇವರು ಮೆಚ್ಚುವಂತಹ ಕೆಲಸ ಮಾಡಿದರೆ ನಮ್ಮನ್ನು ದೇವರು ಮೆಚ್ಚುತ್ತಾನೆ. ಉತ್ತಮ ವ್ಯಕ್ತಿಗಳನ್ನು ನಿರ್ಮಾಣ ಮಾಡುವವರು ಶಿಕ್ಷಕರು. ಶಿಕ್ಷಕ ವೃತ್ತಿಯ ಜೊತೆಗೆ ಕುಟುಂಬ, ಸ್ನೇಹಿತರು ಹಾಗೂ ವಿಶ್ವಾಸಕ್ಕೆ ಸಮಯ ಮೀಸಲಿಡಬೇಕು ಎಂದರು. ಇಂದು ಮಕ್ಕಳಲ್ಲಿ ನೈತಿಕ ಅಧಃಪತನ ಕಾಣುತ್ತಾ ಇದ್ದೇವೆ. ಜೀವನದ ದಾರಿ, ತಂದೆತಾಯಿಯವರ ಗೌರವ ಇಟ್ಟುಕೊಂಡು ಜೀವನದ ಗುರಿಯನ್ನು ವಿದ್ಯಾರ್ಥಿಗಳು ತಲುಪಬೇಕು. ಮಕ್ಕಳ ಪ್ರಾಮಾಣಿಕತೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಶಿಕ್ಷಕರ ಜೊತೆಗೆ ಶಾಲಾಭಿವೃದ್ಧಿ ಸಮಿತಿಯು ಮುಖ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ಪಾಲಕರು, ಬಾಲಕರು, ಮಾಲಕರು, ಚಾಲಕರು ಸರಿಯಾಗಿರಬೇಕು ಎಂದರು. ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುವುದಲ್ಲದೆ ಇಲಾಖೆಗೆ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕಾಗುತ್ತದೆ. ಇದರಿಂದ ತರಗತಿ ನಿರ್ವಹಣೆಯೂ ಕಷ್ಟವಾಗುತ್ತದೆ ಇದರ ಬಗ್ಗೆ ಇಲಾಖಾ ಮುಖ್ಯಸ್ಥರು ಗಮನಹರಿಸಬೇಕು ಎಂದು ಮನವಿ ಮಾಡಿಕೊಂಡರು.

ಪೋಷಕರು ಮತ್ತು ಮಕ್ಕಳ ಕೊಂಡಿ ಶಿಕ್ಷಕರು-ಶಾಸಕ ಅಶೋಕ್ ಕುಮಾರ್ ರೈ:
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈರವರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಕರು ಪೋಷಕರು ಮತ್ತು ಮಕ್ಕಳ ಮಧ್ಯೆ ಕೊಂಡಿಯಂತೆ ಕಾರ್ಯನಿರ್ವಹಿಸುವವರು. ಎಷ್ಟೋ ಶಿಕ್ಷಕರು ಶಾಲೆಯನ್ನು ಮನೆಯಂತೆ ನೋಡಿಕೊಳ್ಳುತ್ತಿದ್ದಾರೆ. ಅನೇಕ ಒತ್ತಡಗಳ ನಡುವೆಯೂ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯೊಂದಿಗೆ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಸಗಿ ಶಾಲೆಯಲ್ಲಿ ಕಲಿತರೆ ಮಾತ್ರ ಒಳ್ಳೆಯದು ಎಂಬ ಭಾವನೆ ಹೋಗಬೇಕು. ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಉನ್ನತ ಹುದ್ದೆಯನ್ನು ಅಲಂಕರಿಸಿದ ಉದಾಹರಣೆಗಳಿವೆ. ಇವತ್ತು ಸರಕಾರಿ ಶಾಲೆಯಲ್ಲಿಯೂ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ. ಇಂಗ್ಲಿಷ್ ಶಿಕ್ಷಣವನ್ನು ಎಲ್ಲಾ ಮಕ್ಕಳು ಕಡ್ಡಾಯವಾಗಿ ಕಲಿಯಬೇಕು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದರು.

ಶಿಕ್ಷಕ ವೃತ್ತಿಯೆಂಬುದು ವೃತ್ತಿ ಅಲ್ಲ ಅದು ಸೇವೆ-ಗಿರೀಶ್ ನಂದನ್:
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ. ಮಾತನಾಡಿ ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಶಿಕ್ಷಕರ ನೆನಪು ಸದಾ ಹಸಿರಾಗಿದೆ. ಶಿಕ್ಷಕ ವೃತ್ತಿ ಎಂಬುದು ವೃತ್ತಿಯಲ್ಲ ಅದು ಒಂದು ಸೇವೆಯಾಗಿದೆ. ಜವಾಬ್ದಾರಿಯುತ ಕರ್ತವ್ಯವೂ ಆಗಿದೆ. ಮಕ್ಕಳಿಗೆ ಜೀವನದಲ್ಲಿ ಶಿಕ್ಷಕರೇ ಆದರ್ಶರಾಗಿರುತ್ತಾರೆ ಎಂದರು.

ಸಮಾಜದ ಅಡಿಪಾಯ ಶಿಕ್ಷಕರು-ಕಾವು ಹೇಮನಾಥ ಶೆಟ್ಟಿ:
ಪುತ್ತೂರು ಶ್ರೀರಾಮಕರಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಶಿಕ್ಷಕಕರು ಸಮಾಜದ ಅಡಿಪಾಯವಿದ್ದಂತೆ. ಉತ್ತಮ ಸಮಾಜದ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಅತ್ಯಂತ ಒಳ್ಳೆಯ ರೀತಿಯಲ್ಲಿ ಕಾರ್ಯಕ್ರಮ ಮೂಡಿಬಂದಿದೆ. ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ನಡೆಸಲು ಅವಕಾಶ ನೀಡಿದರ ಬಗ್ಗೆ ಅಭಿನಂದನೆ ಸಲ್ಲಿಸಿದರು.

ಗೌರವಯುತವಾದ ಕೆಲಸ ಶಿಕ್ಷಕರ ಕೆಲಸ-ಪಿ.ಜಿ. ಜಗನ್ನೀವಾಸ ರಾವ್:
ಪುತ್ತೂರು ನಗರಸಭಾ ಸದಸ್ಯ ಪಿ.ಜಿ.ಜಗನ್ನೀವಾಸ ರಾವ್ ಮಾತನಾಡಿ ನನ್ನ ವಾರ್ಡ್‌ನಲ್ಲಿ ನಾಲ್ಕು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತದೆ. ಶಿಕ್ಷಕರ ವೃತ್ತಿ ತುಂಬಾ ಗೌರವಯುತವಾದ ವೃತ್ತಿಯಾಗಿದೆ. ನಿವೃತ್ತಿಯ ನಂತರವೂ ಗೌರವಕ್ಕೆ ಪಾತ್ರವಾಗುವ ವೃತ್ತಿಯೆಂದರೆ ಅದು ಶಿಕ್ಷಕ ವೃತ್ತಿಯಾಗಿದೆ ಎಂದರು.

ಸಮಾಜದ ಬದಲಾವಣೆ ಶಿಕ್ಷಕರಿಂದ ಸಾಧ್ಯ-ನವೀನ್ ಭಂಡಾರಿ:
ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ ನಾನು ಕೂಡ ಶಿಕ್ಷಕರ ಮಗ. ಶಿಕ್ಷಕರ ಮಗನಾಗಿ ನಾನು ಹೆಮ್ಮೆ ಪಡುತ್ತೇನೆ. ನಮ್ಮನ್ನು ತಿದ್ದಿ ಈ ಮಟ್ಟಕ್ಕೆ ಬೆಳೆಸಿರುವುದು ಶಿಕ್ಷಕರು. ಶಿಕ್ಷಕರಿಂದಲೇ ಮಕ್ಕಳನ್ನು ತಿದ್ದಲು ಸಾಧ್ಯ. ಸಮಾಜದ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಹೇಳಿ ಶಿಕ್ಷಕರ ದಿನಾಚರಣೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

ಶಿಕ್ಷಕರಿಗೆ ಗೌರವ ನೀಡುವ ದಿನ-ಲೋಕೇಶ್ ಎಸ್.ಆರ್:
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಪ್ರಾಸ್ತಾವಿಕ ಮಾತನಾಡಿ ದೇಶದ ನಿರ್ಮಾಣ ಮಾಡುವವರು ಶಿಕ್ಷಕರು. ಇಂತಹ ಶಿಕ್ಷಕರಿಗೆ ಗೌರವ ನೀಡುವ ದಿನ. ಗುರುಗಳಿಗೆ ನಮನ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿ ಸ್ವಾಗತಿಸಿದರು.

ಗೌರವಾರ್ಪಣೆ: ಪ್ರಧಾನ ಉಪನ್ಯಾಸ ನೀಡಿದ ವಿಠಲ ನಾಯಕ್‌ರವರನ್ನು ಶಾಸಕ ಅಶೋಕ್ ಕುಮಾರ್ ರೈರವರು ಶಲ್ಯ, ಹಾರ, ಪೇಟ, ಸ್ಮರಣಿಕೆ ನೀಡಿ ಗೌರವಿಸಿದರು. ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ನಗರಸಭಾ ಸದಸ್ಯ ಪಿ.ಜಿ.ಜಗನ್ನೀವಾಸ ರಾವ್, ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮತ್ತು ಅನಿತಾ ಹೇಮನಾಥ ಶೆಟ್ಟಿ ದಂಪತಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಶಲ್ಯ, ಹಾರ, ಸ್ಮರಣಿಕೆ, ಪೇಟ ತೊಡಿಸಿ ಗೌರವಿಸಲಾಯಿತು. ಶ್ರೀರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಕಾರ್ಯಕ್ರಮಕ್ಕೆ ಸಹಕರಿಸಿದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳನ್ನು, ಜಿಡೆಕಲ್ಲು ಶಾಲೆಯ ಎನ್‌ಎಸ್‌ಎಸ್ ವಿದ್ಯಾರ್ಥಿಗಳನ್ನು, ಡಯಟ್‌ನ ಹಿರಿಯ ಉಪನ್ಯಾಸಕಿಯರಾದ ಚಂದ್ರಕಲಾ, ವಿದ್ಯಾ, ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನವೀನ್ ವೇಗಸ್‌ರವರನ್ನು ಗೌರವಿಸಲಾಯಿತು. ನಿವೃತ್ತ ಶಾಲಾ ತಪಾಸಣಾಧಿಕಾರಿ ದಿ.ಡಿಂಬ್ರಿಗುತ್ತು ಸಾಂತಪ್ಪ ರೈರವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ದತ್ತಿನಿಧಿ ಸ್ಥಾಪಿಸಿದ ಮೇಗಿನಮನೆ ಸರಳಾ ಎಸ್.ರೈರವರನ್ನು ಗೌರವಿಸಲಾಯಿತು.

ಸಹಪಠ್ಯ ಸಾಧಕ ಶಿಕ್ಷಕರಿಗೆ ಅಭಿನಂದನೆ:
ಶಿಕ್ಷಕರ ದಿನಾಚರಣೆ ಪ್ರಯುಕ್ತ ನಡೆಸಿದ ವಿವಿಧ ಸಹಪಠ್ಯ ಚಟುವಟಿಕೆಗಳಲ್ಲಿ ವಿಜೇತರಾದ ಶಿಕ್ಷಕರನ್ನು ಅಭಿನಂದಿಸಲಾಯಿತು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿಜೇತ ಶಿಕ್ಷಕರನ್ನು ಅಭಿನಂದಿಸಲಾಯಿತು.

ಮನವಿ: ಪುತ್ತೂರು ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ಅಶೋಕ್ ಕುಮಾರ್ ರೈರವರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈರವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಿದರು. ಪುತ್ತೂರು ತಹಶೀಲ್ದಾರ್ ಶಿವಶಂಕರ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನವೀನ್ ವೇಗಸ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ (ಗ್ರೇಡ್ 1) ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ (ಗ್ರೇಡ್ 2)ಅಧ್ಯಕ್ಷ ಸುಧಾಕರ ರೈ, ಪುತ್ತೂರು ತಾಲೂಕು ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ನವೀನ್ ರೈ, ಕಡಬ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ, ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ, ಡಯಟ್‌ನ ಹಿರಿಯ ಉಪನ್ಯಾಸಕಿಯರಾದ ಚಂದ್ರಕಲಾ, ವಿದ್ಯಾ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಧ್ಯಕ್ಷ ಮಾಮಚ್ಚನ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲಾ, ಪುತ್ತೂರು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ, ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರದ ಆರಂಭದಲ್ಲಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ ಮಾಜಿ ಶಾಸಕ ಸಂಜೀವ ಮಠಂದೂರುರವರನ್ನು ಹೂಗುಚ್ಚ, ಪುಸ್ತಕ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ಹೂಗುಚ್ಚ ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು. ಕರ್ತವ್ಯದಲ್ಲಿರುವಾಗಲೇ ಅಕಾಲಿಕವಾಗಿ ನಿಧನ ಹೊಂದಿದ ಇರ್ದೆಉಪ್ಪಳಿಗೆ ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ದಿ.ಸುಂದರಿರವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮಕ್ಕೆ ಶುಭಾಶಯ ಕೋರಿ ಗಣ್ಯರು ಕಳುಹಿಸಿದ ಸಂದೇಶವನ್ನು ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಧ್ಯಕ್ಷ ಮಾಮಚ್ಚನ್ ವಾಚಿಸಿದರು. ಸಂಗೀತ ಶಿಕ್ಷಕಿಯರು ಪ್ರಾರ್ಥಿಸಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನವೀನ್ ವೇಗಸ್ ವಂದಿಸಿ ಶಿಕ್ಷಕರಾದ ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಸಂಘಟನಾ ಕಾರ್ಯದರ್ಶಿ ಹೇಮಾ ಕಾರ್ಯಕ್ರಮ ನಿರೂಪಿಸಿದರು.

ಅಕ್ಷರ ದಾಸೋಹ ಸಿಬಂದಿ ವೇತನ ಹೆಚ್ಚಿಸಲು ಮನವಿ
ಕಾರ್ಯಕ್ರಮದಲ್ಲಿ ಪ್ರದಾನ ಉಪನ್ಯಾಸ ನೀಡಿದ ವಿಠಲ ನಾಯಕ್‌ರವರು ಮಾತನಾಡಿ ಅಕ್ಷರದಾಸೋಹ ಸಿಬ್ಬಂದಿಗಳ ವೇತನ ಹೆಚ್ಚಿಸುವಂತೆ ಶಾಸಕ ಅಶೋಕ್ ಕುಮಾರ್ ರೈರವರಿಗೆ ಮನವಿ ಮಾಡಿದರು. ಅಕ್ಷರ ದಾಸೋಹ ಸಿಬ್ಬಂದಿಗಳು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಕೆಲಸ ಮಾಡುತ್ತಾರೆ. ಅವರಿಗೆ ಸರಕಾರ ರೂ.3೦೦೦ ವೇತನ ನಿಗದಿ ಮಾಡಿದೆ. ಇವರಿಗೆ ಕನಿಷ್ಟ ರೂ.1೦೦೦೦ ವೇತನ ನೀಡಬೇಕು ಈ ಬಗ್ಗೆ ಶಾಸಕರು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ನಿವೃತ್ತ ಶಿಕ್ಷಕರುಗಳಿಗೆ ಸನ್ಮಾನ
2022-23ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಪುತ್ತೂರು ಮತ್ತು ಕಡಬ ತಾಲೂಕುಗಳ ನಿವೃತ್ತ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಮುಖ್ಯಗುರುಗಳನ್ನು ಸನ್ಮಾನಿಸಲಾಯಿತು.
ನಿವೃತ್ತಿ ಹೊಂದಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 25 ಮಂದಿ ಶಿಕ್ಷಕರನ್ನು ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 4 ಮಂದಿ ಶಿಕ್ಷಕರನ್ನು ಶಲ್ಯ, ಹಾರ, ಪೇಟ, ಸ್ಮರಣಿಕೆ ನೀಡಿ ಗಣ್ಯರು ಸನ್ಮಾನಿಸಿದರು. ಸರಕಾರಿ ಪ್ರೌಢಶಾಲೆಯ 7 ಮಂದಿ ಶಿಕ್ಷಕರನ್ನು ಹಾಗೂ ಅನುದಾನಿತ ಸರಕಾರಿ ಪ್ರೌಢಶಾಲೆಯ 6 ಮಂದಿ ಶಿಕ್ಷಕರನ್ನು ಶಲ್ಯ, ಹಾರ, ಪೇಟ, ಸ್ಮರಣಿಕೆ ನೀಡಿ ಗಣ್ಯರು ಸನ್ಮಾನಿಸಿದರು.

ಎಸ್‌ಎಸ್‌ಎಲ್‌ಸಿ ಸಾಧಕ ಮಕ್ಕಳಿಗೆ ಅಭಿನಂದನೆ
2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಶೇಷ ಚೇತನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ತಾಲೂಕಿಗೆ ಪ್ರಥಮ ಸ್ಥಾನ, ಜಿಲ್ಲೆಗೆ 3ನೇ ಸ್ಥಾನ ಪಡೆದ ಸಂತೃಪ್ತಿ ಶೆಣೈ ಮತ್ತು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ಅಬ್ದುಲ್ ಜವಾದ್‌ರವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here