ಉಪ್ಪಿನಂಗಡಿ : ವಿದ್ಯಾರ್ಥಿಯೋರ್ವ ನಾಪತ್ತೆಯಾಗಿ ಹೆತ್ತವರನ್ನು ಕಂಗೆಡಿಸಿದ ಸಂದರ್ಭದಲ್ಲಿ ಉಪ್ಪಿನಂಗಡಿ ಪೊಲೀಸರು ತೋರಿದ ತ್ವರಿತ ಸ್ಪಂದನೆ ವಿದ್ಯಾರ್ಥಿಯನ್ನು ಮರಳಿ ಹೆತ್ತವರ ಮಡಿಲು ಸೇರುವಂತೆ ಮಾಡುವ ಮೂಲಕ ಸಾರ್ವಜನಿಕ ಶ್ಲಾಘನೆಗೆ ಒಳಗಾಗಿದೆ.
ಇಲ್ಲಿನ ಖಾಸಗಿ ಶಾಲಾ 9 ನೇ ತರಗತಿಯ ವಿದ್ಯಾರ್ಥಿ ಮಂಗಳವಾರ ಸಾಯಂಕಾಲ ಶಾಲೆ ಬಿಟ್ಟ ಬಳಿಕ ತನ್ನ ತಂದೆಯ ಅಂಗಡಿಗೆ ಬಂದು , ತಂದೆಯಿಂದ ಹಣ ಪಡೆದು ತಿಂಡಿ ಖರೀದಿಸಿ ಅಟೋ ರಿಕ್ಷಾದಲ್ಲಿ ಮನೆಗೆ ತೆರಳುವೆನೆಂದು ಹೇಳಿ ಹೋದಾತ ಮನೆಗೆ ತಲುಪಿರಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದರೂ ಮಗ ಪತ್ತೆಯಾಗದೇ ಹೋದಾಗ ಆತಂಕಿತರಾದ ಹೆತ್ತವರು ಪೊಲೀಸರಿಗೆ ದೂರು ನೀಡಲೆಂದು ಠಾಣೆಗೆ ಬಂದರು.
ಈ ವೇಳೆ ಯಾವುದೋ ಹೊಡೆದಾಟದ ಘಟನಾ ಸ್ಥಳಕ್ಕೆ ತುರ್ತಾಗಿ ಧಾವಿಸುತ್ತಿದ್ದ ಠಾಣಾ ಎಸೈ ರಾಜೇಶ್ ಕೆ ವಿ ರವರು ಹೆತ್ತವರ ಮನದ ದುಗುಡವನ್ನು ಅರ್ಥೈಸಿ, ಜೀಪಿನಿಂದ ಇಳಿದು ಪೇಟೆಯ ಸಿ ಸಿ ಕ್ಯಾಮರಾದ ದೃಶ್ಯಾವಳಿಯನ್ನು ಪರಿಶೀಲಿಸಲು ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು. ಸಿಬ್ಬಂದಿಗಳು ತಕ್ಷಣವೇ ಸಿಸಿ ಕ್ಯಾಮರಾವನ್ನು ಪರಿಶೀಲಿಸಿ ನಾಪತ್ತೆಯಾದ ವಿದ್ಯಾರ್ಥಿ ಅಟೋ ರಿಕ್ಷಾ ನಿಲ್ದಾಣಕ್ಕೆ ಹೋಗದೆ ನೇರವಾಗಿ ಬಸ್ ನಿಲ್ದಾಣಕ್ಕೆ ಹೋಗಿರುವುದನ್ನು ಪತ್ತೆ ಹಚ್ಚುತ್ತಾರೆ. ಬಳಿಕ ಆತ ಮಂಗಳೂರಿನ ಬಸ್ಸನ್ನೇರಿರುವುದನ್ನು ದೃಢಪಡಿಸಿಕೊಂಡ ಪೊಲೀಸರು ಮಂಗಳೂರಿನಲ್ಲಿ ಆತನನ್ನು ಪತ್ತೆ ಹಚ್ಚಲು ಅಲ್ಲಿನ ಪೊಲೀಸರ ನೆರವು ಪಡೆಯುತ್ತಾರೆ.
ಈ ವೇಳೆ ತನಗೆ ಅರಿವಿಲ್ಲದೆ ಮಂಗಳೂರು ಬಸ್ಸನ್ನೇರಿದ ವಿದ್ಯಾರ್ಥಿ ಮಂಗಳೂರು ತಲುಪಿದಂತೆಯೇ ವಾಸ್ತವತೆಯನ್ನು ಅರಿತುಕೊಂಡು , ಬಲ್ಮಠದ ಅಂಗಡಿಯೊಂದರ ಮಾಲಕರಲ್ಲಿ ತನ್ನ ಹೆತ್ತವರಿಗೆ ಫೋನಾಯಿಸಲು ವಿನಂತಿಸಿ ತಾನು ಮಂಗಳೂರಿಗೆ ಬಂದಿರುವುದನ್ನು ತಿಳಿಸುತ್ತಾನೆ. ಅಲ್ಲಿಗೆ ನಾಪತ್ತೆ ಪ್ರಕರಣವು ಸುಖಾಂತ್ಯ ಕಂಡಿತು. ಹೆತ್ತವರು ಒಡನೆಯೇ ಕಾರಿನಲ್ಲಿ ಮಂಗಳೂರಿಗೆ ತೆರಳಿ ಮಗನನ್ನು ಉಪ್ಪಿನಂಗಡಿಗೆ ಕರೆ ತಂದರು.
ಮಗನ ನಾಪತ್ತೆಯಿಂದ ದಿಕ್ಕೆಟ್ಟಿದ್ದ ಹೆತ್ತವರ ಭಾವನೆಗೆ ಸ್ಪಂದಿಸಿ ಇಲಾಖಾತ್ಮಕ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸಿದ ಉಪ್ಪಿನಂಗಡಿ ಪೊಲೀಸರ ಸ್ಪಂದನೆಗೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.
ಇತ್ತ ಗ್ರಾಮದ ಸಜ್ಜನ ವ್ಯಕ್ತಿಯ ಮಗನೋರ್ವ ನಾಪತ್ತೆಯಾದ ವಿಚಾರ ತಿಳಿದು , ಆತ ಶೀಘ್ರವೇ ಪತ್ತೆಯಾಗಲೆಂದು ತನ್ನ ಇಷ್ಠ ದೈವಕ್ಕೆ ಹರಕೆ ಹೇಳಿದ ಉಪ್ಪಿನಂಗಡಿಯ ಕಟೀಲೇಶ್ವರಿ ಪ್ಲವರ್ ಸ್ಟಾಲ್ ಮಾಲಕ ರಮೇಶ್ ರವರು, ಬಾಲಕ ಪತ್ತೆಯಾದ ಬೆನ್ನಿಗೆ ದೈವದ ಕೃಪೆ ಫಲಿಸಿತೆಂದು ಸಂಭ್ರಮಿಸಿದರು.