ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಣ್ಣುಕಾಯಿ ಅಂಗಡಿ ತೆರವು, ಮರು ಏಲಂ ನಡೆಸಲು ಹೈಕೋರ್ಟ್ ಆದೇಶ

0

ಪುತ್ತೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿರುವ ದೇವಸ್ಥಾನದ ಹಣ್ಣುಕಾಯಿ, ಚಿನ್ನ ಬೆಳ್ಳಿ ಹರಕೆ ವಸ್ತುಗಳ ಮಾರಾಟದ ಅಂಗಡಿ, ಆದಿಸುಬ್ರಹ್ಮಣ್ಯದ ಹಣ್ಣುಕಾಯಿ ಅಂಗಡಿಗಳನ್ನು ಹೈ ಕೋರ್ಟ್ ಆದೇಶದಂತೆ ಮುಚ್ಚಿದ ಹಾಗೂ ಮರು ಹರಾಜಿಗೆ ಸೂಚಿಸಿದ ಘಟನೆ ವರದಿಯಾಗಿದೆ.


ಒಂದು ವರ್ಷದ ಅವಧಿಗೆ ಹರಾಜಿನಲ್ಲಿ ಕೊಡಲಾಗಿದ್ದ ಅಂಗಡಿಗಳ, ಕರಾರುಪತ್ರದ ಅವಧಿ ಕಳೆದ 2023 ರ ಏಪ್ರಿಲ್ ತಿಂಗಳಿನಲ್ಲಿ ಕೊನೆಗೊಂಡಿದ್ದರೂ ಚುನಾವಣೆಯ ನೀತಿಸಂಹಿತೆ ಕಾರಣದಿಂದ ಮರು ಹರಾಜು ನಡೆಸಲು ಸಾಧ್ಯವಾಗಿರಲಿಲ್ಲ. ಸದ್ರಿ ಬಾಡಿಗೆದಾರರು ಅಂಗಡಿಗಳನ್ನು ತೆರವುಗೊಳಿಸದೇ ವ್ಯಾಪಾರ ನಡೆಸುತ್ತಿದ್ದರು. ಈ ಮಧ್ಯೆ ಅಂಗಡಿಗಳನ್ನು ಮುಂದಿನ 4 ವರ್ಷದ ಅವಧಿಗೆ ಮುಂದುವರಿಸಿ ನೀಡಬೇಕೆಂದು ಬಾಡಿಗೆದಾರರು ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮಾಸ್ಟರ್ ಪ್ಲಾನ್ ಕಾಮಗಾರಿಗಳು ನಡೆಯಲಿರುವ ಕಾರಣ ಗುತ್ತಿಗೆ ಅವಧಿ ಮುಂದುವರೆಸಲು ಸಾಧ್ಯವಿಲ್ಲವೆಂಬ ಹಿಂಬರಹವನ್ನು ಸರ್ಕಾರದ ಕಾರ್ಯದರ್ಶಿಯವರು ಬಾಡಿಗೆದಾರರ ಅರ್ಜಿಗೆ ಉತ್ತರಿಸಿ ಆದೇಶ ನೀಡಿದ್ದರು.

ಸದ್ರಿ ಆದೇಶವನ್ನು ಪ್ರಶ್ನಿಸಿ ಬಾಡಿಗೆದಾರರು ದೇವಸ್ಥಾನದ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿ ತಡೆಯಾಜ್ಞೆ ಕೋರಿದ್ದರು. ಈ ಮಧ್ಯೆ ಸುಬ್ರಹ್ಮಣ್ಯದ ಗ್ರಾಮ ಪಂಚಾಯಿತಿಯ ಸದಸ್ಯ ಹರೀಶ ಇಂಜಾಡಿಯವರು ಸದ್ರಿ ಅಂಗಡಿಗಳನ್ನು ನಿಯಮ ಪ್ರಕಾರ ಏಲಂ ನಡೆಸಬೇಕೆಂದು ಕೋರಿ ಸರಕಾರಕ್ಕೆ ನಿರ್ದೇಶನ ನೀಡುವಂತೆ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು. ಸದ್ರಿ ಪ್ರಕರಣವನ್ನು ಇತ್ಯರ್ಥಪಡಿಸಿದ ಮಾನ್ಯ ನ್ಯಾಯಾಲಯ ಬಾಡಿಗೆದಾರರ ಅರ್ಜಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿ ತಕ್ಷಣ ಅಂಗಡಿಗಳನ್ನು ತೆರವುಗೊಳಿಸಿ ಹರಾಜು ನಡೆಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ. ಅವಧಿ ಮುಗಿದರೂ ವ್ಯಾಪಾರ ನಡೆಸಿದ ಬಾಡಿಗೆದಾರರು ಮೂರೂವರೆ ತಿಂಗಳ ಬಾಡಿಗೆಗೆ ಶೇ. 10. ದಂಡನೆ ವಿಧಿಸಿ ಕಟ್ಟುವಂತೆ ಆದೇಶ ನೀಡಿದೆ. ದೇವಸ್ಥಾನದ ಪರವಾಗಿ ವೈಶಾಲಿ ಹೆಗ್ಡೆ ಹಾಗೂ ಹರೀಶ ಇಂಜಾಡಿಯವರ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಪರವಾಗಿ ಹೈಕೋರ್ಟಿನ ನ್ಯಾಯವಾದಿ ಪುತ್ತೂರಿನ ಸೂರ್ಯಂಬೈಲು ರಾಜಾರಾಮ್ ರವರು ವಾದಿಸಿದ್ದರು. ಹೈಕೋರ್ಟಿನ ಆದೇಶದಂತೆ ಇದೀಗ ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here