ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ- ರೂ. 43.18 ಲಕ್ಷ ಲಾಭ, ಶೇ.16 ಡಿವಿಡೆಂಡ್ ಘೋಷಣೆ – ಕಾಣಿಯೂರಿನಲ್ಲಿ ಶಾಖೆ ಅತಿ ಶೀಘ್ರ – ಗೌರಿ ಯಚ್

0

ಪುತ್ತೂರು: ಪುತ್ತೂರು ಶ್ರೀ ರಾಧಾಕೃಷ್ಣ ಮಂದಿರದ ರಸ್ತೆ ಬಳಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿದ್ದು, ದರ್ಬೆ ಮತ್ತು ಉಪ್ಪಿನಂಗಡಿಯಲ್ಲಿ ಶಾಖೆಗಳನ್ನು ಜೊತೆಗೆ ನೆಹರುನಗರದಲ್ಲಿ ಪಡಿತರ ವಿತರಣಾ ಕೇಂದ್ರ ಹೊಂದಿಕೊಂಡು ಸುಮಾರು 2,434 ಸದಸ್ಯರನ್ನು ಒಳಗೊಂಡಿರುವ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು 2022-23ನೇ ವರದಿ ಸಾಲಿನಲ್ಲಿ ಉತ್ತಮ ವ್ಯವಹಾರ ಮಾಡಿಕೊಂಡು ರೂ. 43,18,253 ಲಾಭ ಪಡೆದಿದೆ. ಬಂದಿರುವ ಲಾಭವನ್ನು ವಿವಿಧ ನಿಧಿಗಳಿಗೆ ಹಂಚಿ ಸದಸ್ಯರಿಗೆ ಶೇ. 16 ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷೆ ಗೌರಿ ಯಚ್ ಅವರು ಘೋಷಣೆ ಮಾಡಿದ್ದಾರೆ.


ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸೆ.10 ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ಈಗಾಗಲೇ ಸದಸ್ಯರ ಪೂರ್ಣ ಸಹಕಾರದಿಂದ ಲಾಭ ಪಡೆದಿದೆ. ಮುಂದೆ ಸಂಘದ ಸದಸ್ಯತನ ಹೆಚ್ಚಿಸುವ ಮತ್ತು ಪಾಲುಬಂಡವಾಳವನ್ನು ವೃದ್ಧಿಸುವ ಯೋಜನೆಯ ಜೊತೆಗೆ ಅತಿ ಶೀಘ್ರದಲ್ಲಿ ಕಾಣಿಯೂರಿನಲ್ಲೂ ಶಾಖೆ ತೆರೆಯಲು ಚಿಂತನೆ ಮಾಡಲಾಗಿದ್ದು. ಈ ಕುರಿತು ಇಲಾಖೆಗೆ ಪತ್ರ ವ್ಯವಹಾರ ನಡೆದಿದೆ ಎಂದರು. ಠೇವಣಿಯನ್ನು ರೂ.14 ಕೋಟಿಗೆ ಹೆಚ್ಚಿಸುವುದು, ಸಾಲ ನೀಡಿಕೆಯನ್ನು ರೂ. 12.50ಕ್ಕೆ ಏರಿಸುವುದು, ಮಹಿಳಾ ಸ್ವಸಹಾಯ ಗುಂಪುಗಳ ಒಕ್ಕೂಟ ರಚಿಸಿ, ನಿರ್ವಹಣೆ ಮತ್ತು ತರಬೇತಿ ಕಾರ್ಯಕ್ರಮ ನಡೆಸುವುದು, ಹೊಸ ಸ್ವಸಹಾಯ ಗುಂಪುಗಳ ರಚನೆಗೆ ಪ್ರೋತ್ಸಾಹ, ವ್ಯಾಪಾರ ವಿಭಾಗಕ್ಕೆ ಹೊಸ ಪೀಠೋಪರಕರಣಗಳನ್ನು ಅಳವಡಿಸಿ, ನವೀಕರಿಸುವುದು, ಸದಸ್ಯರಿಗೆ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವ ಬಗ್ಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದು ಮುಂದಿನ ಯೋಜನೆಯಲ್ಲಿದೆ ಎಂದ ಅವರು ಸಂಘದ ವ್ಯವಹಾರ ಹಾಗು ಲೆಕ್ಕಪತ್ರಗಳ ಯೋಗ್ಯತೆ ಮೇರೆಗೆ ಸಂಘವು ಸತತವಾಗಿ ಏ ಶ್ರೇಣಿಯಲ್ಲಿದೆ. ಇದೇ ಹಿನ್ನೆಲೆಯಲ್ಲಿ ಸತತ ನಾಲ್ಕನೆ ಭಾರಿಯು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸಾಧನಾ ಪ್ರಶಸ್ತಿಯನ್ನು ಪಡೆದು ಕೊಂಡಿದೆ ಎಂದರು.

ಮಹಾಸಭೆಯ ಕಾರ್ಯಕ್ರಮವನ್ನು ನಗರಸಭೆ ಮಾಜಿ ಅಧ್ಯಕ್ಷೆ ಕಮಲ ಮತ್ತು ಸಂಘದ ಹಿರಿಯ ನಿರ್ದೇಶಕಿ ಶಶಿಕಲಾರವರು ಉದ್ಘಾಟಿಸಿದರು. ಸಂಘದ ಕಿರಿಯ ಗುಮಸ್ತೆ ಸಾವಿತ್ರಿ ಮಹಾಸಭೆ ತಿಳುವಳಿಕೆ ಪತ್ರ ಮಂಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಟಿ ಅವರು 2021-22ಸಾಲಿನ ಮಹಾಸಭೆ ನಡವಳಿಕೆಗಳನ್ನು ಮಂಡಿಸಿದರು. 2022-23ನೇ ವಾರ್ಷಿಕ ವರದಿಯನ್ನು ದರ್ಬೆ ಶಾಖಾ ವ್ಯವಸ್ಥಾಪಕಿ ವಿದ್ಯಾ ಎಸ್ ಮಂಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಟಿ ಅವರು ಬಜೆಟ್ ಗಿಂತ ಮೀರಿದ ಖರ್ಚನ್ನು ಮಂಡಿಸಿ ವಿವಿಧ ಮಾಹಿತಿ ನೀಡಿದರು.

ಮಹಿಳಾ ಸಾಧಕರಿಗೆ ಸನ್ಮಾನ:
ಹಿರಿಯರಾದ ಸಮಾಜ ಸೇವಕಿ ಡಾ.ಗೌರಿ ಪೈ, ನಾಟಿ ವೈದ್ಯೆ ಗಿರಿಜಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕಿಯರಾದ ವತ್ಸಲರಾಜ್ಞಿ ಮತ್ತು ಮೋಹಿನಿಇ ದಿವಾಕರ್ ಸನ್ಮಾನಿತರನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯೆ ಸುನಂದ, ಸಂಘದ ಸಹಕಾರ ಜ್ಯೋತಿ ಮಹಿಳಾ ಸ್ವ ಸಹಾಯ ಸಂಘದ 8 ಸಂಘಗಳ ಅಧ್ಯಕ್ಷರುಗಳನ್ನು ಗೌರವಿಸಲಾಯಿತು. ಸಂಘಕ್ಕೆ ಹಲವು ಸಹಕಾರ ನೀಡಿದ ಎವಿಜಿ ಅಸೋಸಿಯೇಟ್ಸ್‌ನ ಎ.ವಿ.ನಾರಾಯಣ್, ಪವರ್ ಸಾಫ್ಟ್‌ವೇರ್ ಟೆಕ್ನಾಲೋಜಿಯ ಪ್ರಕಾಶ್ ಆಚಾರ್ಯ, ಸಂಘದ ಹಿರಿಯ ನಿರ್ದೇಶಕರಾದ ಪುಷ್ಪಾ ಕೆ.ಪಿ, ಉಷಾ ನಾಯಕ್, ಜಯಂತಿ ನಾಯಕ್ ಅವರನ್ನು ಗೌರವಿಸಲಾಯಿತು.

ಸಂಘದ ಸಕ್ರೀಯ ಸದಸ್ಯರಿಗೆ ಗೌರವ:
ಸಂಘದ ಸಕ್ರೀಯ ಸದಸ್ಯರಾದ ಸಾಲಗಾರ ಕ್ಷೇತ್ರದಲ್ಲಿ ಚಿತ್ರಾ ಹೆಚ್, ನಮೃತಾ, ನಸೀಮಾ ಎಚ್ ಹಾಗು ಮಾರಾಟ ವಿಭಾಗದ ಗ್ರಾಹಕರಾದ ಕುಸುಮ, ಶೋಭಾ, ಮೀನಾಕ್ಷಿ ಅವರನ್ನು ಸಂಘದ ವತಿಯಿಂದ ಗುರುತಿಸಲಾಯಿತು.

ಬಡ ವಿದ್ಯಾರ್ಥಿಗಳಿಗೆ ಸಹಾಯ, ಉಪಕಾರ ನಿಧಿ ವಿತರಣೆ:
ಅರ್ಹ 18 ಮಂದಿ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಉಪಕಾರ ನಿಧಿಯಿಂದ ಆಯ್ದ ಕಡೆ ಸಹಕಾರ ನೀಡಲಾಯಿತು. ಅದೃಷ್ಟ ಮಹಿಳೆಯಾಗಿ ಕಮಲ ಅವರು ಆಯ್ಕೆ ಆದರು. ಸಂಘದ ಸದಸ್ಯರಾಗಿದ್ದು ನಿಧನರಾದವರಿಗೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆಯನ್ನು ಮಹಾಸಭೆಯ ಆರಂಭದಲ್ಲಿ ಮಾಡಲಾಯಿತು. ನಿರ್ದೇಶಕರಾದ ಮೋಹಿನಿ ದಿವಾಕರ್, ಶಶಿಕಲಾ, ವತ್ಸಲಾ ರಾಜ್ಞಿ, ಉಷಾ ಮುಳಿಯ, ಯಶೋಧ, ಜಯಶ್ರೀ ಎಸ್ ಶೆಟ್ಟಿ, ವಿಜಯಲಕ್ಷ್ಮೀ, ಇಂದಿರಾ ಪಿ ಆಚಾರ್ಯ, ಮೋಹಿನಿ ಪಿ ನಾಯ್ಕ್, ಅರ್ಪಣಾ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಷಾ ಮುಳಿಯ ಪ್ರಾರ್ಥಿಸಿದರು. ಸಂಧದ ನಿರ್ದೇಶಕಿ ಜಯಶ್ರೀ ಎಸ್ ಶೆಟ್ಟಿ ಸ್ವಾಗತಿಸಿ, ಪ್ರೇಮಲತಾ ರಾವ್ ವಂದಿಸಿದರು. ಸಂಘದ ಉಪಾಧ್ಯಕ್ಷೆ ಉಮಾ ಡಿ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಮಹಾಸಭೆಯ ಮುಂದೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here