ಸುಳ್ಯ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಸರಕಾರವಿದ್ದರೂ ಅಕ್ರಮ ಸಕ್ರಮ ಸಮಿತಿಗೆ ಬಿಜೆಪಿಗರ ನೇಮಕ

0

ರಾಕೇಶ್ ರೈ ಕೆಡೆಂಜಿ, ಭಾರತಿ ಪುರುಷೋತ್ತಮ, ಜಗದೀಶ್ ಡಿ.ಪಿ. ಸದಸ್ಯರಾಗಿ ನೇಮಕ

ಸವಣೂರು : ಸುಳ್ಯ ವಿಧಾನಸಭಾ ಕ್ಷೇತ್ರದ ಬದರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಸರಕಾರ ಆದೇಶ ಹೊರಡಿದ್ದು, ವಿಶೇಷವೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಇದರ ಸದಸ್ಯರು ಬಿಜೆಪಿಗರಾಗಿದ್ದಾರೆ.ಇಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅಧ್ಯಕ್ಷರಾಗಿ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಅರಂತೋಡಿನ ಬಿಜೆಪಿ ನಾಯಕಿ ಶ್ರೀಮತಿ ಭಾರತಿ ಪುರುಷೋತ್ತಮ, ನ್ಯಾಯವಾದಿ ಜಗದೀಶ್ ಡಿ.ಪಿ.ಯವರನ್ನು ನೇಮಿಸಲಾಗಿದೆ.

ಈ ಆದೇಶ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಇಲ್ಲಿನ ಕಾಂಗ್ರೆಸ್ ವಲಯ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದು, ಈ ಆದೇಶಕ್ಕೆ ತಡೆ ನೀಡಿ ಹೊಸ ಕಾಂಗ್ರೆಸ್ ಬೆಂಬಲಿತ ಹೊಸ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸುವಂತೆ ಸಚಿವರು ಸೂಚಿಸಿದ್ದಾರೆಂದು ತಿಳಿದುಬಂದಿದೆ. ನಾಳೆಯೊಳಗೆ ಹೊಸ ಆದೇಶ ಬರುವ ನಿರೀಕ್ಷೆ ಇದೆ.ಯಾವ ಪಕ್ಷದ ಸರಕಾರ ಆಡಳಿತದಲ್ಲಿರುತ್ತದೋ ಆ ಪಕ್ಷದ ಬೆಂಬಲಿತರು ಅಕ್ರಮ ಸಕ್ರಮ ಸಮಿತಿಗೆ ಸದಸ್ಯರಾಗುತ್ತಾರೆ. ಕ್ಷೇತ್ರದಲ್ಲಿ ಯಾವ ಪಕ್ಷದ ಶಾಸಕರಿದ್ದರೂ ಅವರು ಅಧ್ಯಕ್ಷರಾಗಿರುತ್ತಾರೆ. ಒಂದು ವೇಳೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಅಕ್ರಮ ಸಕ್ರಮ ಸಮಿತಿ ರಚನೆಯಾದರೆ ಇನ್ನೊಂದಕ್ಕೆ ಸಹಾಯಕ ಕಮಿಷನರ್ ಅಧ್ಯಕ್ಷರಾಗಿರುತ್ತಾರೆ.

ಅಕ್ರಮ ಸಕ್ರಮ ಸಮಿತಿಗೆ ಸದಸ್ಯರ ಹೆಸರುಗಳನ್ನು ಕಳುಹಿಸಿಕೊಡುವಂತೆ ಸರಕಾರದಿಂದ ಎಲ್ಲಾ ತಹಶೀಲ್ದಾರರಿಗೆ ಸುತ್ತೋಲೆ ಬರುತ್ತದೆ. ಅದರಂತೆ ಸುಳ್ಯ, ಕಡಬ, ಪುತ್ತೂರು ಮತ್ತಿತರ ತಾಲೂಕುಗಳ ತಹಶೀಲ್ದಾರರಿಗೂ ಈ ಸುತ್ತೋಲೆ ಬಂದಿತ್ತೆನ್ನಲಾಗಿದೆ. ಕಡಬ ತಹಶೀಲ್ದಾರರು ಶಾಸಕಿ ಭಾಗೀರಥಿ ಮುರುಳ್ಯರವರೊಡನೆ ಸಮಾಲೋಚಿಸಿ, ಅವರು ಕೊಟ್ಟ ಹೆಸರುಗಳನ್ನು ರಾಜ್ಯ ಸರಕಾರಕ್ಕೆ ಕಳುಹಿಸಿದ್ದರೆಂದೂ, ಕಾಂಗ್ರೆಸ್ಸಿಗರು ಪಟ್ಟಿ ಕಳುಹಿಸುವಾಗ ತಡವಾಗಿತ್ತೆಂದು ಹೇಳಲಾಗಿದ್ದು, ಅಧಿಕಾರಿಗಳ ಮಟ್ಟದಲ್ಲಿ ಕಡಬ ತಹಶೀಲ್ದಾರ್ ಕಳುಹಿಸಿದ ಪಟ್ಟಿ ಮಂಜೂರಾತಿಗೊಂಡು ಆದೇಶವಾಯಿತೆಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here