ಬೆಟ್ಟಂಪಾಡಿ ಕಾಲೇಜಿನಲ್ಲಿ ಎನ್ಎಸ್ಎಸ್ ವಾರ್ಷಿಕ ಕಾರ್ಯ ಚಟುವಟಿಕೆಗಳಿಗೆ ಚಾಲನೆ

0

ಅನುಭವದ ನೆಲೆಯಲ್ಲಿ ಮೂಡಿಬರುವ ಶಿಕ್ಷಣವೇ ನಿಜವಾದ ಶಿಕ್ಷಣ: ಡಾ. ಹರಿಪ್ರಸಾದ್ ಎಸ್.

ಬೆಟ್ಟಂಪಾಡಿ: ಅನುಭವದ ನೆಲೆಯಲ್ಲಿ ಮೂಡಿಬರುವ ಶಿಕ್ಷಣವೇ ನಿಜವಾದ ಶಿಕ್ಷಣ, ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣದೊಂದಿಗೆ ಎನ್ಎಸ್ಎಸ್ ನಂತಹ ಯೋಜನೆಗಳು ಜೊತೆಗೂಡಬೇಕು ಎಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಹರಿಪ್ರಸಾದ್ ಎಸ್. ಹೇಳಿದರು. ಓರ್ವ ಸಮರ್ಪಕ ಉದ್ಯೋಗಿ ಆಗಬೇಕಾದರೆ ಇರಬೇಕಾದ ಲಕ್ಷಣಗಳಾದ ಸಮಯ ಪಾಲನೆ, ಗೌರವದ ಗುಣನಡತೆ, ಕಾರ್ಯನಿಷ್ಠೆ, ಮಾತುಗಾರಿಕೆಗಳಲ್ಲಿ ಪ್ರಾವೀಣ್ಯತೆ ಪಡೆದು ಆ ವಾತಾವರಣಕ್ಕೆ ಹೊಂದಿಕೊಳ್ಳುವ ಪೂರ್ವ ತಯಾರಿ ಕಲಿಕೆಯ ಸಮಯದಲ್ಲಿ ನಡೆಯಬೇಕು. ಯುವ ಜನತೆಯು ಸಂತೋಷವನ್ನು ಕಂಡುಕೊಳ್ಳುವ ಮತ್ತು ಪಸರಿಸುವವರಾಗಿರಬೇಕು. ನೂತನ ಆವಿಷ್ಕಾರಗಳು ನಡೆಯುತ್ತಿರುವ ಜಗತ್ತಿನಲ್ಲಿ ಕಲಿಕೆಗೆ ಅಂತ್ಯವಿಲ್ಲ. ಅನುಭವ ಮತ್ತು ಆಸಕ್ತಿಗಳಿರುವ ಎರಡು ಪಂಗಡಗಳು ಒಂದಾದರೆ ಅದ್ಭುತಗಳ ಸೃಷ್ಟಿಯಾಗುತ್ತವೆ ಮತ್ತು ಕಾರ್ಯ ಸಫಲಗೊಳ್ಳುತ್ತವೆ ಎಂದರು.

ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ 2023-24ನೇ ಶೈಕ್ಷಣಿಕ ವರ್ಷದ ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತಾವಿಕ ಮಾತುಗಳನ್ನಾಡಿದ ಎನ್ಎಸ್ಎಸ್ ಅಧಿಕಾರಿ ಡಾ. ಯೋಗೀಶ್ .ಎಲ್.ಎನ್ ಇವರು, ನಮ್ಮ ಕಾಲೇಜಿನ ಎನ್ಎಸ್ಎಸ್ ಘಟಕಗಳು ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಎನ್ಎಸ್ಎಸ್ ಧ್ಯೇಯವಾಕ್ಯವಾದ ‘ನನಗಲ್ಲ ನಿನಗೆ’ ಎಂಬುದನ್ನು ಅನುಸರಿಸುತ್ತಿದ್ದಾರೆ ಎಂದರು.


ಮುಖ್ಯ ಅತಿಥಿಗಳಾದ ಶ್ರೀಮತಿ ವಿದ್ಯಾ ಸುರೇಶ್ ಸರಳಿಕಾನ, ಅಧ್ಯಕ್ಷರು, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಇವರು ಸ್ವಯಂಸೇವಕರು ಮಾಡುವ ಕಾರ್ಯ ಪ್ರಶಂಸನೀಯಯವಾಗಿದ್ದು ಇನ್ನಷ್ಟು ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಆಂತರಿಕ ಗುಣಮಟ್ಟ ಭರವಸಾಕೋಶದ ಸಂಚಾಲಕರಾದ ಡಾ. ಕಾಂತೇಶ ಎಸ್ ಮಾತನಾಡಿ ಸಮಾಜಕ್ಕೆ, ವ್ಯಕ್ತಿತ್ವ ವಿಕಸನಕ್ಕೆ ಮತ್ತು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಎನ್ಎಸ್ಎಸ್ ನ ಪಾತ್ರವೇನೆಂಬುದನ್ನು ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಮಾತನಾಡಿ ಉದ್ಯೋಗ ಆಕಾಂಕ್ಷಿಗಳ ಕೌಶಲ್ಯ ಅಭಿವೃದ್ಧಿಗೆ ಎನ್ ಎಸ್ ಎಸ್ ಪೂರಕವಾಗಿದೆ. ಮಾನವೀಯ ಮೌಲ್ಯಗಳ ಜೊತೆಗೆ ಆಂತರಿಕ ಬದಲಾವಣೆಗಳನ್ನು ಇದು ದೊರಕಿಸಿ ಕೊಡುತ್ತವೆ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಎನ್ಎಸ್ಎಸ್ ಯೋಜನಾಧಿಕಾರಿಗಳಾಗಿದ್ದ ಡಾ. ಹರಿಪ್ರಸಾದ್ .ಎಸ್ ಇವರನ್ನು ಗೌರವಿಸಲಾಯಿತು. ನೂತನ ಘಟಕ ನಾಯಕರುಗಳಿಗೆ ಸಸಿ ನೀಡುವ ಮೂಲಕ ಅಭಿನಂದಿಸಲಾಯಿತು. ಇತರ ಸಮಿತಿಗಳ ನವ ನಿಯೋಜಿತ ನಾಯಕರುಗಳಿಗೆ ನಿಕಟ ಪೂರ್ವ ನಾಯಕರುಗಳು ಜವಾಬ್ದಾರಿ ಹಸ್ತಾಂತರಿಸಿದರು. ಅತಿಥಿಗಳು ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವಂತೆ ಪ್ರೇರಣೆಯಿತ್ತರು.


ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂತನ ಯೋಜನಾಧಿಕಾರಿಗಳಾದ ಡಾ. ಲಾಯ್ಡ್ ವಿಕ್ಕಿ ಡಿಸೋಜ ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಘಟಕ ನಾಯಕರಾದ ಕೃತಿಕಾ ಪಿ. ಸ್ವಾಗತಿಸಿದರು, ಪ್ರಜ್ವಲ್ ಆರ್.ಸಿ ವಂದಿಸಿದರು. ಘಟಕ ನಾಯಕಿ ಅಂಕಿತಾ ಎ. ಎಚ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here