ಪುತ್ತೂರು: ಕೆನರಾ ಬ್ಯಾಂಕ್ ಪುತ್ತೂರು ಪ್ರಾದೇಶಿಕ ಕಛೇರಿಯ ವತಿಯಿಂದ ಪುತ್ತೂರು ತಾಲೂಕಿನ ಸಂಜೀವಿನಿ ಒಕ್ಕೂಟ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮ ಪುತ್ತೂರು ಪುರಭವನ ಹಾಲ್‌ನಲ್ಲಿ ನಡೆಯಿತು. ನಗರಸಭೆಯ ಪೌರಾಯುಕ್ತ ಮಧು ಎಸ್. ಮನೋಹರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬ್ಯಾಂಕ್ ನಮ್ಮ ಮನೆ ಬಾಗಿಲಿಗೆ ಸಾಲ ನೀಡಲು ಬಂದಿದೆ. ಸಾಲ ಪಡೆದು ನೀವು ಆರ್ಥಿಕ ಸಬಲರಾಗಲು ಸಾಧ್ಯ. ಸಾಲ ಪಡೆದು ನಿಮಗೆ ಉಪಯೋಗವಾಗುವ ಯೋಜನೆಗಳನ್ನು ಅನುಷ್ಠಾನ ಮಾಡಿಕೊಳ್ಳಿ. ಇದರ ಪ್ರಯೋಜನವನ್ನು ಸಂಘದ ಎಲ್ಲಾ ಸದಸ್ಯರು ಪಡೆಯಿರಿ ಎಂದು ಹೇಳಿದರು.
ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾದಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ ಸಾಲವನ್ನು ಯಾವ ಉದ್ಧೇಶಕ್ಕೆ ಪಡೆಯಲಾಗಿದೆ ಎನ್ನುವುದು ಮುಖ್ಯ. ಪುತ್ತೂರು ತಾಲೂಕಿನಲ್ಲಿ ಸುಮಾರು 10,000 ಕ್ಕೂ ಮಿಕ್ಕಿ ಸ್ವಸಹಾಯ ಸಂಘದ ಸದಸ್ಯರಿದ್ದೀರಿ. ಮಹಿಳೆಯರು ಹಣವನ್ನು ಪೂರ್ಣವಾಗಿ ಸದುದ್ಧೇಶಕ್ಕೆ ಬಳಸುತ್ತಾರೆ. ಮಹಿಳೆ ಬೆಳೆದರೆ ಮನೆ, ಕುಟುಂಬ, ಸಮಾಜ ಬೆಳೆಯುತ್ತದೆ ಎಂದು ಹೇಳಿದರು.
ಎನ್‌ಆರ್‌ಎಲ್‌ಎಮ್ ಜಿಲ್ಲಾ ಮ್ಯಾನೇಜರ್ ಶಕುಂತಳಾ ಮಾತನಾಡಿ ಸ್ವಸಹಾಯ ಸಂಘದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಎನ್‌ಆರ್‌ಎಲ್‌ಎಮ್ ಜಾರಿಗೆ ಬಂದಿದೆ. ಇದರಿಂದ ಮಹಿಳೆಯರ ಜೀವನಮಟ್ಟವೂ ಸುಧಾರಿಸುತ್ತದೆ. ಇದರ ಮೂಲಕ ಮಹಿಳೆಯರು, ಅಂಗವಿಕಲರು ಹಾಗೂ ಹಿರಿಯರಿಗೆ ಗುಂಪುಗಳನ್ನು ರಚನೆ ಮಾಡಲಾಗುತ್ತದೆ. ಸಂಘಗಳ ಮೂಲಕ ಸಾಲ ಪಡೆದು ಕಟ್ಟುವುದು ಮಾತ್ರವಲ್ಲದೆ ನಿರಂತರ ಉದ್ಯಮ ಉತ್ಪಾದನಾ ಚಟುವಟಿಕೆಗಳನ್ನು ನಡೆಸಬೇಕು. ಕೆನರಾ ಬ್ಯಾಂಕ್‌ನ ಸಹಕಾರದಿಂದ ಸದಸ್ಯರು ಅಭಿವೃದ್ಧಿ ಹೊಂದಲಿ ಎಂದರು.
ಎನ್‌ಯುಎಲ್‌ಎಮ್ ಮಿಷನ್ ಮ್ಯಾನೇಜರ್ ಐರಿನ್ ರೆಬೆಲ್ಲೋ ಮಾತನಾಡಿ ಎನ್‌ಯುಎಲ್‌ಎಮ್ ಮಹಿಳೆಯರ ಸ್ವಸಹಾಯ ಸಂಘಗಳಿಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಸಂಘಗಳಿಂದ ಅವರ ಕುಟುಂಬದ ಅಭಿವೃದ್ಧಿ ಜೊತೆಗೆ ಸಾಮಾಜಿಕ ಅಭಿವೃದ್ಧಿ ಆಗುತ್ತದೆ. ಸ್ವಸಹಾಯ ಸಂಘಗಳಿಂದ ಆರ್ಥಿಕ ವ್ಯವಹಾರದ ಜ್ಞಾನ ವೃದ್ಧಿಯಾಗುತ್ತದೆ. ಈ ಮೂಲಕ ಮಹಿಳೆ ಸಶಕ್ತತೆ ಹೊಂದುತ್ತಾರೆ. ಬಳಿಕ ಕುಟುಂಬ ಸಶಕ್ತತೆ ಆಗುತ್ತದೆ. ಸಾಲ ಪಡೆದು ಸಣ್ಣ ಸಣ್ಣ ಉದ್ಯಮಗಳನ್ನು ಆರಂಭಿಸಿ ನಿಮ್ಮ ಉತ್ಪನ್ನಗಳು ಆನ್‌ಲೈನ್ ಮೂಲಕ ಸಿಗುವಂತಾಗಲಿ ಎಂದರು. ಪುತ್ತೂರು ತಾಲೂಕು ಪಂಚಾಯತ್‌ನ ಆರ್ಥಿಕ ಸಾಕ್ಷರತಾ ಸಮಾಲೋಚಕಿ ಗೀತಾ ವಿಜಯ್ ಮಾತನಾಡಿ ಮಹಿಳೆಯರು ಆರ್ಥಿಕ ಸಾಕ್ಷರರಾಗಬೇಕು. ಹಣದ ಬಳಕೆ, ಹೂಡಿಕೆ ಬಗ್ಗೆ ಅರಿವು ಹೊಂದಿರಬೇಕು ಎಂದರು. ಹಣದ ದುರ್ಬಳಕೆ ಮಾಡದೆ ಸದ್ಬಳಕೆ ಮಾಡಿಕೊಳ್ಳಿ ಎಂದರು. ಕೆನರಾ ಬ್ಯಾಂಕ್ ಬೆಂಗಳೂರು ಪ್ರಧಾನ ಕಛೇರಿಯ ಎಜಿಎಮ್ ಮೀನಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಡಿವಿಜನಲ್ ಮೆನೇಜರ್ ಸರ್ವೇಶ್ ಪ್ರಾಸ್ತಾವಿಕ ಮಾತನಾಡಿದರು. ಮಂಗಳೂರು ವೃತ್ತ ಕಛೇರಿಯ ಡಿಜಿಎಮ್ ಶ್ರೀಕಾಂತ್ ವಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಕೆನರಾ ಬ್ಯಾಂಕ್ ವತಿಯಿಂದ ನಗರಸಭೆಯ ಪೌರಾಯುಕ್ತ ಮಧು ಎಸ್. ಮನೋಹರ್, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾದಿಕಾರಿ ನವೀನ್ ಕುಮಾರ್ ಭಂಡಾರಿ, ಎನ್‌ಆರ್‌ಎಲ್‌ಎಮ್ ಜಿಲ್ಲಾ ಮ್ಯಾನೇಜರ್ ಶಕುಂತಳಾ ಹಾಗೂ ಎನ್‌ಯುಎಲ್‌ಎಮ್ ಮಿಷನ್ ಮ್ಯಾನೇಜರ್ ಐರಿನ್ ರೆಬೆಲ್ಲೋರವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸ್ವಸಹಾಯ ಸಂಘದ ಸದಸ್ಯೆಯರಾದ ಶಶಿಕಲಾ, ನಯನಾ ಪ್ರಾರ್ಥಿಸಿ ಎನ್‌ಆರ್‌ಎಲ್‌ಎಮ್ ಬ್ಯಾಕ್ ಮ್ಯಾನೇಜರ್ ನಳಿನಾಕ್ಷಿ ಸ್ವಾಗತಿಸಿದರು. ಪುತ್ತೂರು ಪ್ರಾದೇಶಿಕ ಕಛೇರಿಯ ಡಿವಿಜನಲ್ ಮೆನೇಜರ್ ಅಜಿತ್ ಕುಮಾರ್ ವಂದಿಸಿದರು. ಕೆನರಾ ಬ್ಯಾಂಕ್ ಪುತ್ತೂರು ಪ್ರಾದೇಶಿಕ ಕಚೇರಿಯ ಕೃಷಿ ವಿಭಾಗದ ಮ್ಯಾನೇಜರ್ ಅರುಣ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಸಾಲಪತ್ರ ವಿತರಣೆ
ಕೆನರಾ ಬ್ಯಾಂಕ್ ವತಿಯಿಂದ ಸ್ವಸಹಾಯ ಸಂಘ ಹಾಗೂ ಸಂಜೀವಿನಿ ಒಕ್ಕೂಟಕ್ಕೆ ಸಾಲ ವಿತರಣೆ ಮಾಡಲಾಗಿದ್ದು ಸುಮಾರು ೩೦ ಸ್ವಸಹಾಯ ಸಂಘಗಳಿಗೆ ರೂ.೧.೬ ಕೋಟಿ ಮೊತ್ತದ ಸಾಲವನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಸಂಘಗಳ ಸದಸ್ಯೆಯರಿಗೆ ಕೆನರಾ ಬ್ಯಾಂಕ್ ಅಧಿಕಾರಿಗಳು ಸಾಲಪತ್ರ ವಿತರಿಸಿದರು.