ಕಾಣಿಯೂರು: ಬೆಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಂಸ್ಥೆ `ನ್ಯಾಕ್’ ಮಾನ್ಯತೆ ನೀಡಿದ ನ್ಯಾಕ್ ಮಾನ್ಯತೆಯ ಪ್ರಮಾಣಪತ್ರವನ್ನು ಬೆಳಂದೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಶಂಕರ್ ಭಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಂದ ಬೆಂಗಳೂರು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು.
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಂಸ್ಥೆ (ನ್ಯಾಕ್)ಯು ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೌಲ್ಯಮಾಪನಕ್ಕಾಗಿ ತಜ್ಞರ ಸಮಿತಿಯನ್ನು ಕಳುಹಿಸಿತ್ತು. ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಂಸ್ಥೆಯ ಪರಿಶೀಲನಾ ತಂಡದ ಮುಖ್ಯಸ್ಥರಾದ ವಾರಣಾಸಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊ. ಹೆಚ್. ಕೆ. ಸಿಂಗ್, ಸಂಯೋಜಕರಾದ ಕೇರಳ ಪೆರಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರೊ. ಸುರೇಶ್ ರಂಗರಾಜನ್ ಮತ್ತು ಸದಸ್ಯರಾದ ಮಧ್ಯಪ್ರದೇಶದ ಸಿಕಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ತರಂಜಿತ್ ಸೂದ್ ಅವರು ಬೆಳಂದೂರು ಕಾಲೇಜಿಗೆ ಕಳೆದ ಎಪ್ರಿಲ್ 4 ಮತ್ತು 5 ರಂದು ಭೇಟಿ ನೀಡಿದ್ದರು. ಮೌಲ್ಯಮಾಪನಕ್ಕಾಗಿ ಬೆಳಂದೂರು ಕಾಲೇಜಿನಿಂದ ನ್ಯಾಕ್‌ಗೆ ಸಲ್ಲಿಸಿದ ವಿವಿಧ ದಾಖಲೆಗಳನ್ನು, ಭೌತಿಕ ಸ್ಥಿತಿಗಳನ್ನು ಪರಿಶೀಲಿಸಿದ್ದರು.
ಕಾಲೇಜಿನ ಪ್ರಾಂಶುಪಾಲರು, ಐ.ಕ್ಯು.ಎ.ಸಿ. ಸಂಯೋಜಕರು, ವಿಭಾಗ ಮುಖ್ಯಸ್ಥರು ದಾಖಲೆಗಳನ್ನು ನೀಡಿದ್ದರು. ಕಾಲೇಜು ಅಭಿವೃದ್ದಿ ಸಮಿತಿ, ರಕ್ಷಕ-ಶಿಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳೊಂದಿಗೆ ತಂಡ ಪ್ರತ್ಯೇಕ ಸಂವಾದ ನಡೆಸಿದ್ದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಕಾಲೇಜಿನ ಅಡಿಕೆ ತೋಟದಲ್ಲಿ ವಿದ್ಯಾರ್ಥಿಗಳ ಕೆಲಸ ಇತ್ಯಾದಿಗಳನ್ನು ನೋಡಿ ತಜ್ಜರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಎಪ್ರಿಲ್ 5ರಂದು ನಡೆದ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಶಂಕರ ಭಟ್ ಪಿ ಮತ್ತು ಐ.ಕ್ಯು.ಎ.ಸಿ. ಸಂಯೋಜಕರಾದ ಪ್ರೊ| ಪದ್ಮನಾಭರಿಗೆ ನ್ಯಾಕ್ ತಂಡದವರು ವರದಿಯನ್ನು ಹಸ್ತಾಂತರಿಸಿದ್ದರು. ಪರಿಶೀಲನಾ ತಂಡವು ನ್ಯಾಕ್‌ಗೆ ಸಲ್ಲಿಸಿದ ವರದಿಯ ಪ್ರಕಾರ ನ್ಯಾಕ್ ಸಂಸ್ಥೆ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 2.58 ಸಿ.ಜಿ.ಪಿ.ಎ. ಅಂಕಗಳೊಂದಿಗೆ 5 ವರ್ಷಗಳ ಅವಧಿಗೆ ಆ+ ಗ್ರೇಡ್ ನೀಡಿದೆ.
ಕಳೆದ ಏಪ್ರಿಲ್ ನಲ್ಲಿ ನ್ಯಾಕ್ ಮೌಲ್ಯಮಾಪನ ತಂಡವು ಕಾಲೇಜಿಗೆ ಆಗಮಿಸಿ ಎರಡು ದಿನಗಳ ಕಾಲ ಕಾಲೇಜಿನ ಶೈಕ್ಷಣಿಕ ಮತ್ತು ಭೌತಿಕ ತಪಾಸಣೆ ನಡೆಸಿ ತೆರಳಿತ್ತು. ತದನಂತರ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತ ಸಂಸ್ಥೆಯು ಕಾಲೇಜಿಗೆ ಸಿಜಿಪಿಎ 2.58 ಅಂಕಗಳೊಂದಿಗೆ ಆ+ ಮಾನ್ಯತೆಯನ್ನು ನೀಡಿತ್ತು.ಇದು ಕಾಲೇಜು ಸ್ಥಾಪನೆಯ ನಂತರ ನಡೆದ ಮೊದಲ ಮೌಲ್ಯಮಾಪನವಾಗಿತ್ತು. ಈ ಹಿನ್ನಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಮುಖ್ಯಮಂತ್ರಿಗಳಿಂದ ಪ್ರಮಾಣಪತ್ರ ಹಸ್ತಾಂತರಿಸಿ ಸನ್ಮಾನಿಸಿದೆ.
ಡಾ.ಶಂಕರ್ ಭಟ್
ಪ್ರಾಂಶುಪಾಲರು, ಸ. ಪ್ರ. ದ. ಕಾಲೇಜು ಬೆಳಂದೂರು