ಕಡಬ: ಮಿನಿ ಬಸ್ ಹಾಗೂ ಸ್ವಿಫ್ಟ್ ಕಾರಿನ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ಧರ್ಮಸ್ಥಳ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೇಪು ದೇವಸ್ಥಾನದ ಸಮೀಪ ನಡೆದಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಮಿನಿ ಬಸ್ ನಡುವೆ ಮೀನಾಡಿ ಸಮೀಪದ ಕೇಪು ದೇವಸ್ಥಾನದ ಬಳಿಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ.
ಮಿನಿ ಬಸ್ಸು ಚಾಲಕ ಉಡುಪಿ ಜಿಲ್ಲೆಯ ಉದ್ಯಾವರ ಮನೋಹರ ಪೂಜಾರಿ ಎಂಬವರು ಘಟನೆ ಬಗ್ಗೆ ದೂರು ನೀಡಿ, ಸೆ.13ರಂದು ಸಂಜೆ (ಕೆ.ಎ. 20.ಎ.ಎ. 0606) ಮಿನಿ ಬಸ್ಸು ವಾಹನದಲ್ಲಿ ಬಾಡಿಗೆಗಾಗಿ ಪ್ರಯಾಣಿಕರನ್ನು ಕರೆದುಕೊಂಡು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ವಿರುದ್ದ ದಿಕ್ಕಿನಿಂದ ಕಾರು ಚಾಲಕನಾದ ಧೃವಕುಮಾರ್ (ಕೆ.ಎ.07 ಎನ್.2874) ಕಾರನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಾನು ಚಲಾಯಿಸಿಕೊಂಡು ಬರುತ್ತಿದ್ದ ಬಸ್ಸಿಗೆ ಅಪಘಾತವನ್ನುಂಟು ಮಾಡಿದ ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರಾದ ಶಿವಾನಂದ, ಸಂಜೀವ ಮತ್ತು ಶರಣು ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಕಾರಿನಲ್ಲಿದ್ದ ನಂದಕುಮಾರ್ ಮತ್ತು ಪಾರ್ಥಸಾರಥಿ ಎಂಬವರಿಗೆ ತಲೆಗೆ, ವೈಶಾಲಿ ಎಂಬವರಿಗೆ ತಲೆ ಹಣೆಗೆ, ಹಾಗೂ ಮಗು ವೈಭವ್ ರಾವ್ಗೆ ಸಣ್ಣಪುಟ್ಟ ಗಾಯವಾಗಿರುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಕಲಂ:279.337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.