ಪುತ್ತೂರು: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಸೆಪ್ಟೆಂಬರ್೧೫ ಕೊನೆಯ ದಿನವಾಗಿರುತ್ತದೆ. ಸಮೀಕ್ಷೆಗೆ ಗ್ರಾಮಕರಣಿಕರ ಮೂಲಕ ಗ್ರಾಮಕ್ಕೆ ಒಬ್ಬರೇ ಸಮೀಕ್ಷಕರ ನೇಮಕ ಮಾಡಿರುತ್ತಾರೆ. ಸಮೀಕ್ಷಕರು (ಪಿ ಆರ್) ಗಳ ಕೊರತೆ ಮತ್ತು ರೈತರ ಆಪ್ಗಳಲ್ಲಿ ಸರ್ವರ್ ಸಮಸ್ಯೆ ಉಂಟಾಗಿರುವುದರಿಂದ ಸಮೀಕ್ಷೆಗಳ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರೈಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆಪ್ನಲ್ಲಿ ನಿಯಮ ಕಠಿಣಗೊಳಿಸಿರುತ್ತಾರೆ ಮತ್ತು ರೈತರ ಜಮೀನಿನಲ್ಲಿ ಅಂತರ್ಜಾಲ ಹಾಗೂ ಜಿಪಿಎಸ್ ಸಿಗದೆ ಇರುವುದು ಸಮೀಕ್ಷೆ ವಿಳಂಬವಾಗಲು ಮುಖ್ಯ ಕಾರಣವಾಗಿದೆ.
ತಾಂತ್ರಿಕ ತೊಂದರೆಯಿಂದಾದ ಅನಾನುಕೂಲತೆಯನ್ನು ಸರಿಪಡಿಸಲು ಸಮೀಕ್ಷೆಯ ಅವಧಿಯನ್ನು ಒಂದು ತಿಂಗಳವರೆಗೆ ವಿಸ್ತರಿಸಿದಲ್ಲಿ ಎಲ್ಲಾ ಅರ್ಹ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.ಆದುದರಿಂದ ಅವಧಿ ವಿಸ್ತರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅದೇಶಿಸುವಂತೆ ಕ್ಯಾಂಪ್ಕೋ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ. ಕ್ಯಾಂಪ್ಕೋ ಈ ಹಿಂದೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆಗಳ ಸೂಚಿತ ಪಟ್ಟಿಗೆ ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಕೂಡ ಸೇರಿಸುವಂತೆ ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ತೋಟಗಾರಿಕೆ ಇಲಾಖೆಯ ನಿರ್ದೇಶಕರು ಮತ್ತು ಕೃಷಿ ಇಲಾಖೆಯ ಆಯುಕ್ತರಿಗೆ ಜೂ. 30ರಂದು ಪತ್ರದ ಮೂಲಕ ಮನವಿ ಮಾಡಿರುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕುಡ್ಗಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.