ಬಿಟ್ ಕ್ವಾಂಟ್ ಮನಿ ಆಪ್ ಹೂಡಿಕೆದಾರರಿಗೆ ಮೋಸ -ಸಾವಿರಾರು ಜನರ ಲಕ್ಷಾಂತರ ರೂಪಾಯಿ ಗುಳುಂ-ಮನಿ  ಆ್ಯಪ್ ನಲ್ಲಿ ಹಣ ಹೂಡುವ ಮುನ್ನ ಎಚ್ಚರ…!

0

ಪುತ್ತೂರು: ಮೋಸ ಹೋಗುವ ಜನರಿರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಮೋಸ ಹೋಗಬೇಡಿ ಎಂದು ಎಷ್ಟೇ ಬಡಕೊಂಡರು ಪ್ರತಿದಿನ ಒಂದಲ್ಲ ಒಂದು ವಿಷಯದಲ್ಲಿ ನಾವು ಮೋಸ ಹೋಗುತ್ತಲೇ ಇರುತ್ತೇವೆ. ಅದರಲ್ಲೂ ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಗಾದೆಯಂತೆ ಬಹುತೇಕ ಜನರು ಹಣದ ವಿಚಾರದಲ್ಲೇ ಮೋಸ ಹೋಗುತ್ತಿದ್ದಾರೆ. ಈ ಹಿಂದೆ ಬಿಟ್ ಕಾಯಿನ್ ಎಂಬ ಮನಿ ಆ್ಯಪ್  ಮೂಲಕ ಹಣ ಹೂಡಿಕೆ ಮಾಡಿದವರಿಗೆ ಕೊನೇ ಕ್ಷಣದಲ್ಲಿ ಮೋಸ ಆದ ಘಟನೆ ಅಳಿಸುವ ಮುನ್ನವೇ ಇದೀಗ ಬಿಟ್ ಕ್ವಾಂಟ್ ಎಂಬ ಮನಿ  ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿದ ಜನರು ಮೋಸ ಹೋಗಿದ್ದಾರೆ. ತಾಲೂಕಿನ ಹಲವು ಮಂದಿ ಈ  ಆ್ಯಪ್ ನಲ್ಲಿ ಹಣ ಹೂಡಿ ಮೋಸ ಹೋಗಿದ್ದಾರೆ ಎನ್ನಲಾಗಿದೆ.


ಏನಿದು ಬಿಟ್ ಕ್ವಾಂಟ್…?
ಇದೊಂದು ವಿದೇಶಿ ಹಣ ಹೂಡಿಕೆಯ ಆಪ್ ಆಗಿದೆ. 2018 ರಲ್ಲಿ ಆರಂಭಗೊಂಡ ಲಂಡನ್ ಯುನೈಟೆಡ್ ಕಿಂಗ್‌ಡಂ ಕಂಪೆನಿ ಅಂತ ಹೇಳಲಾಗಿದೆ. ಇದೊಂದು ಕ್ರಿಪ್ಟೋಕರೆನ್ಸಿಗಳಿಗೆ ವಿನಿಮಯ ವೇದಿಕೆಯಾಗಿದೆ. ಮೊದಲಿಗೆ ಬಿಟ್ ಕ್ವಾಂಟ್ ಎಂಬ  ಆ್ಯಪ್  ಅನ್ನು ನಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಆ್ಯಪ್  ಡೌನ್‌ಲೋಡ್ ಮಾಡಿ ಅದರಲ್ಲಿರುವ ಅಪ್ಲಿಕೇಶನ್ ಭರ್ತಿ ಮಾಡಿದ ಬಳಿಕ ನಾವು ಹಣ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ 6 ಸಾವಿರದಿಂದ 5 ಲಕ್ಷದ ತನಕ ಹಣ ಹೂಡಿಕೆ ಮಾಡಬಹುದಾಗಿದೆ. ಹೀಗೆ ಹಣ ಹೂಡಿಕೆ ಮಾಡಿದ ಗ್ರಾಹಕರಿಗೆ ಆಪ್‌ನಲ್ಲಿ 10 ಕಂಪೆನಿಗಳನ್ನು ತೋರಿಸಲಾಗುತ್ತದೆ. ಪ್ರತಿ ದಿನ ಸಂಜೆ ಈ ಕಂಪೆನಿಗಳಲ್ಲಿ ಟ್ರೆಡಿಂಗ್ ಮಾಡುವ ವ್ಯವಸ್ಥೆ ಇರುತ್ತದೆ. ಕೆಲವು ದಿನ ಎರಡು ಟ್ರೇಡಿಂಗ್ ಇದ್ದರೆ ಇನ್ನುಳಿದ ದಿನ ಒಂದೇ ಟ್ರೇಡಿಂಗ್ ಇರುತ್ತದೆ. ಟ್ರೇಡಿಂಗ್ ಬಗ್ಗೆ ವಾಟ್ಸಫ್ ಗ್ರೂಪ್‌ಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಇದಲ್ಲದೆ ನಾವು ಯಾವ ಕಂಪೆನಿಗೆ ಟ್ರೇಡಿಂಗ್ ಮಾಡಬೇಕು ಎನ್ನುವ ಬಗ್ಗೆಯೂ ನಮಗೆ ವಾಟ್ಸಫ್ ಗ್ರೂಪ್‌ನಲ್ಲಿ ಮಾಹಿತಿ ಬರುತ್ತದೆ.


ಹಣ ಹೇಗೆ ಸಂಪಾದಿಸುವುದು…?
ನಾವು 6 ಸಾವಿರ ಹಣ ಹೂಡಿಕೆ ಮಾಡಿದ ದಿನದಿಂದಲೇ ಟ್ರೇಡಿಂಗ್ ಆರಂಭವಾಗುತ್ತದೆ. ಹೊಸದಾಗಿ ಸೇರಿದ ಗ್ರಾಹಕರ ಟ್ರೇಡಿಂಗ್ ಸಿಗ್ನಲ್ ದರ ಶೇ.6, ಅತ್ಯಧಿಕ ವಹಿವಾಟು ಸಿಗ್ನಲ್ ದರ ಶೇ.10 ಆಗಿರುತ್ತದೆ. ನಾವು ಒಬ್ಬ ವ್ಯಕ್ತಿಯನ್ನು 6 ಸಾವಿರ ಹಣ ಹೂಡಿಕೆ ಮಾಡಿ ಆಹ್ವಾನಿಸಿದಾಗ ನಮ್ಮ ಟ್ರೇಡಿಂಗ್ ಸಿಗ್ನಲ್ ದರ ಶೇ.7 ಆಗುತ್ತದೆ. 2ಜನರನ್ನು ಸೇರಿಸಿದರೆ ಶೇ.8 ಹಾಗೇ ಹೆಚ್ಚುತ್ತಾ ಹೋಗುತ್ತದೆ. ನಾವು 8 ಜನರನ್ನು ಸೇರಿಸಿದಾಗ ನಮ್ಮ ಟ್ರೇಡಿಂಗ್ ಸಿಗ್ನಲ್ ದರ ಶೇ.10 ಆಗುತ್ತದೆ. ಉದಾಹರಣಗೆ ನಮ್ಮ ಬ್ಯಾಲೆನ್ಸ್ 6 ಸಾವಿರ ರೂ.ಇದ್ದು ಸಿಗ್ನಲ್ ದರ ಶೇ.7 ಇದ್ದರೆ ನಮ್ಮ ಒಂದು ದಿನದ ಟ್ರೇಡಿಂಗ್ ಲಾಭ 288 ರೂಪಾಯಿ, ಅದೇ ಸಿಗ್ನಲ್ ದರ ಶೇ.10 ಇದ್ದರೆ ಲಾಭ 480 ಆಗುತ್ತದೆ. ಇದೇ ರೀತಿ ಹೆಚ್ಚು ಹಣ ಹೂಡಿಕೆ ಮಾಡಿದವರಿಗೆ ಇನ್ನೂ ಹೆಚ್ಚಿನ ಲಾಭ ಬರುತ್ತದೆ.


ಬಿಟ್ ಖಾತೆಯಲ್ಲಿ ಹಣದ ಮೊತ್ತ ಏರಿಕೆಯಾಗುತ್ತಲೇ ಹೋಗುತ್ತದೆ…!
ನಾವು ದಿನ ಟ್ರೇಡಿಂಗ್ ಮಾಡುತ್ತ ಹೋದಂತೆ ನಮ್ಮ ಲಾಭದ ಮೊತ್ತ ಕೂಡ ಏರುತ್ತಲೇ ಹೋಗುತ್ತದೆ. ನಮ್ಮ  ಆ್ಯಪ್ ನ ಬಿಟ್ ಖಾತೆಯಲ್ಲಿ ಅಂದರೆ ವಾಲೆಟ್‌ನಲ್ಲಿ ನಾವು ಹೂಡಿಕೆ ಮಾಡಿದ 6 ಸಾವಿರಕ್ಕೆ ಹಣ ಸೇರುತ್ತಲೇ ಹೋಗುತ್ತದೆ.ಪ್ರತಿದಿನ ಕಡಿಮೆ ಎಂದರೂ 288 ರೂಪಾಯಿ ಸೇರುತ್ತಾ ಹೋದರೆ ತಿಂಗಳು ಕಳೆಯುವಾಗ ವಾಲೆಟ್‌ನಲ್ಲಿ ಹಣ ತುಂಬಿಕೊಳ್ಳುತ್ತದೆ. ಹೀಗೆ ಬಿಟ್ ಖಾತೆಯಲ್ಲಿ 2 ಲಕ್ಷ ರೂಪಾಯಿ ದಾಟಿದವರು ಕೂಡ ಇದ್ದಾರೆ.


ಹಣ ಡ್ರಾ ಮಾಡಲು ಸಾಧ್ಯವೇ…?
ಕಂಪೆನಿಯವರು ಜನರನ್ನು ನಂಬಿಸುವ ರೀತಿಯೇ ಅಂತಹುದು. ಮೊದಲಿಗೆ ನಾವು 6 ಸಾವಿರ ರೂ.ಹೂಡಿಕೆ ಮಾಡಿ ಟ್ರೇಡಿಂಗ್ ಮಾಡುತ್ತಾ ಹೋದಂತೆ ನಮ್ಮ ವಾಲೆಟ್‌ನಲ್ಲಿ 14 ಸಾವಿರ ರೂ.ಆದ ತಕ್ಷಣ ನಾವು ಹೂಡಿಕೆ ಮಾಡಿದ 6 ಸಾವಿರವನ್ನು ಹಿಂಪಡೆಯಲು ಅವಕಾಶವಿದೆ. ಇಲ್ಲಿ ಹಣವನ್ನು ಹಿಂಪಡೆಯುವಾಗ ಶೇ.20 ಟ್ಯಾಕ್ಸ್ ಕಡಿತಗೊಳ್ಳುತ್ತದೆ. ನಾವು ಕಟ್ಟಿದ 6 ಸಾವಿರ ರೂ.ಹಿಂಪಡೆದ ಬಳಿಕ ನಾವು ಮತ್ತೆ ಟ್ರೇಡಿಂಗ್ ಮುಂದುವರಿಸಿಕೊಂಡು ಹೋಗಬಹುದು. ಒಮ್ಮೆ 6 ಸಾವಿರ ಹಿಂಪಡೆದ ಬಳಿಕ ಮತ್ತೆ ನಾವು ಹಣ ವಿಥ್‌ಡ್ರಾ ಮಾಡಲು ಹೋಗುವುದಿಲ್ಲ, ಒಮ್ಮೆಲೆ ಹಣ ಹಿಂಪಡೆಯುವ ಅಂತ ಆಗುತ್ತದೆ. ಹಾಗಂತ ಹಿಂಪಡೆಯಲು ಸಾಧ್ಯವೂ ಆಗುವುದಿಲ್ಲ. ಹಿಂಪಡೆಯುವಾಗ ಕಂಪೆನಿ ನಮಗೆ ಅವಕಾಶ ಒದಗಿಸಿ ನೀವು ಇನ್ನೂ ಹೆಚ್ಚಿನ ಹಣ ಗಳಿಸಿ ಬಳಿಕ ಹಿಂಪಡೆಯಿರಿ ಎಂದು ಮೆಸೇಜ್ ಕೊಡುತ್ತದೆ. ಹೀಗೆ ವಾಲೆಟ್‌ನಲ್ಲಿ ಹಣ ಬೆಳೆಯುತ್ತಲೇ ಹೋಗುತ್ತದೆ. ನಾವು ನಮ್ಮ ಸ್ನೇಹಿತ ವರ್ಗವನ್ನು ಇದಕ್ಕೆ ಸೇರ್ಪಡೆಗೊಳಿಸುತ್ತಾ ಹೋಗುತ್ತೇವೆ.


ಮತ್ತೆ 6 ಸಾವಿರ ಹಣ ಹೂಡಿಕೆಗೆ ಮೆಸೇಜ್ ಹಾಕಿದ ನಿಯಂತ್ರಕರು..!
ಈಗಾಗಲೇ ವಾಲೆಟ್‌ನಲ್ಲಿರುವ ಹಣವನ್ನು ಹಿಂಪಡೆಯಲು ಸಾಧ್ಯವಾಗದೇ ಇದ್ದು ಈ ಹಣವನ್ನು ನಮ್ಮ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಿಕೊಳ್ಳಲು ಕಂಪೆನಿ ನಿಯಂತ್ರಕರು ಮತ್ತೆ ಗ್ರಾಹಕರಿಂದ 6 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡಿದೆ. ಭಾರತೀಯ ನಿಯಂತ್ರಕರು ಅಗತ್ಯವಿರುವಂತೆ ಕೆವೈಸಿ ಪರಿಶೀಲನೆಯನ್ನು ಪೂರ್ಣಗೊಳಿಸಲು ಸೆ.11, 2023 ರ ಮೊದಲು ರೂ.6ಸಾವಿರವನ್ನು ಪಾವತಿಸಬೇಕು. ಇಲ್ಲದಿದ್ದರೆ ಇಲ್ಲದಿದ್ದರೆ ನಿಮ್ಮ ಬಿಟ್ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ ಮತ್ತು ಬಿಟ್ ಕ್ವಾಂಟ್‌ನಿಂದ ನೀವು ಹಿಂತೆಗೆದುಕೊಳ್ಳುವ ಬ್ಯಾಂಕ್ ಮೊತ್ತ ಬ್ಯಾಂಕಿನಿಂದ ಕೂಡ ಫ್ರೀಜ್ ಮಾಡಲಾಗುತ್ತದೆ. ಬಿಟ್ ಖಾತೆಯ ಹಣವನ್ನು ಹಿಂಪಡೆಯಲು ಮತ್ತು ವ್ಯಾಪಾರ ಮಾಡಲು ಸಾಧ್ಯವಿಲ್ಲ, ದಯವಿಟ್ಟು ನಿಯಂತ್ರಕ ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ಸಹಕರಿಸಿ ಮತ್ತು ಕೆವೈಸಿ ಪರಿಶೀಲನೆಯನ್ನು ಪೂರ್ಣಗೊಳಿಸಿ ಬಳಿಕ ನಿಮ್ಮ ವಾಪಸಾತಿ ಚಾನಲ್ ಸ್ವಯಂಚಾಲಿತವಾಗಿ ತೆರೆಯುತ್ತದೆ ಎಂದು ಕಂಪೆನಿಯವರು ಮೆಸೇಜ್ ಹಾಕಿದ್ದಾರೆ. ಈಗಾಗಲೇ ಕೆಲವು ಮಂದಿ ಮತ್ತೆ 6 ಸಾವಿರ ಹಣವನ್ನು ಹೂಡಿಕೆ ಮಾಡಿ ಬಿಟ್ ಖಾತೆಯಲ್ಲಿರುವ ಹಣವನ್ನು ಹಿಂಪಡೆಯೋಣ ಅಂತ ಯೋಚಿಸಿ 6 ಸಾವಿರ ಹಣ ಹೂಡಿಕೆ ಮಾಡಿದರೆ ಮತ್ತೆ ಮೋಸ ಆಗಿದೆ. ಕಂಪನಿ ಮತ್ತೆ 7 ಸಾವಿರ ಪಾವತಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.


ಕೊನೇಯ ಕ್ಷಣ ಪಾವತಿದಾರರಿಗೆ ಬಿಗ್ ಮೋಸ…!
2023 ರ ಫೆಬ್ರವರಿ ತಿಂಗಳಿನಲ್ಲಿ ಈ ಚೈನ್ ಹೂಡಿಕೆ ಸಿಸ್ಟಮ್ ಮಂಗಳೂರಿಗೆ ಕಾಲಿಟ್ಟಿದೆ ಎಂದು ಹೇಳಲಾಗಿದೆ. ಆ ಬಳಿಕ ಬಹಳಷ್ಟು ಮಂದಿ ಅದರಲ್ಲೂ ವಿದ್ಯಾವಂತರೇ ಇದಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಹೂಡಿಕೆ ಮಾಡಿದವರಿಗೆ ಮಾತ್ರ ನಿರಾಸೆಯಾಗಿದೆ.ಏಕೆಂದರೆ ಅವರು ಹೂಡಿಕೆ ಮಾಡಿದ ಹಣವನ್ನು ಕೂಡ ಡ್ರಾ ಮಾಡಲು ಸಾಧ್ಯವಾಗದೇ ಇರುವುದರಿಂದ ಬಹಳಷ್ಟು ಮಂದಿ ಮೋಸ ಹೋಗಿದ್ದಾರೆ.


ಆಮಿಷಗಳಿಗೆ ಬಲಿಯಾಗಬೇಡಿ…
ಹಣ ಹೂಡಿಕೆ ಮಾಡುವ ಮುನ್ನ ಎಚ್ಚರ…!
ಸ್ಮಾರ್ಟ್ ಯುಗದಲ್ಲಿ ನಾವು ಬಹಳಷ್ಟು ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಾದ ಅನಿವಾರ‍್ಯತೆ ಇದೆ. ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ಅದರಲ್ಲೂ ಹಣದ ವಿಚಾರದಲ್ಲಿ ನಾವು ಬಹಳ ಕ್ಯಾರ್‌ಫುಲ್ ಆಗಿ ವ್ಯವಹರಿಸಬೇಕಾಗಿದೆ. ಕಡಿಮೆ ಆದಾಯದೊಂದಿಗೆ ಹೆಚ್ಚಿನ ಆದಾಯದ ಭರವಸೆಗಳ ಬಗ್ಗೆ ಸಂಶಯವಿರಲಿ. ಏಕೆಂದರೆ ಅಂತಹ ಹಕ್ಕುಗಳು ಸಾಮಾನ್ಯವಾಗಿ ಹಗರಣಗಳೊಂದಿಗೆ ಸಂಬಂಧ ಹೊಂದಿದೆ. ಯಾವಾಗಲೂ ನಮ್ಮ ಹಣಕಾಸಿನ ಭದ್ರತೆಗೆ ಆದ್ಯತೆ ನೀಡುವ ಮೂಲಕ ಯಾವುದೇ ಮನಿ ಆಪ್ ಇತ್ಯಾದಿಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರವಿರಲಿ.

LEAVE A REPLY

Please enter your comment!
Please enter your name here