ಮಂಗಳೂರು:ಮುಂದಿನ ಫೆಬ್ರವರಿಯಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಅದರೊಳಗೆ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿರುವ ನಗರೋತ್ಥಾನ ಕಾರ್ಯಕ್ರಮಗಳ ಯೋಜನೆ ಪೂರ್ಣಗೊಳಿಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಯೋಜನೆಗಳ ಕುರಿತು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಜತೆಗೆ, ಟೆಂಡರ್ ಪ್ರಕ್ರಿಯೆಗಳನ್ನು ಈ ಅವಧಿಯೊಳಗೆ ಪೂರ್ಣಗೊಳಿಸಬೇಕು.ಚುನಾವಣೆ ಘೋಷಣೆ ಆದರೆ, ಟೆಂಡರ್ ಆಗದಿದ್ದಲ್ಲಿ ಕಾಮಗಾರಿಗಳು ಬಾಕಿ ಆಗಲಿವೆ. ಹಾಗಾಗಿ ಎಲ್ಲ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಸಚಿವರು ಸೂಚನೆ ನೀಡಿದರು.
ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ: ಈ ಬಾರಿ ಮಳೆ ಕೊರತೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಹಿನ್ನಲೆಯಲ್ಲಿ ಮುಂಚಿತವಾಗಿಯೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.
ಜಿಲ್ಲೆಯ ವಿವಿಧ ಕಡೆಗಳಲ್ಲಿ ನಿರ್ಮಿಸಲಾಗಿರುವ ಚೆಕ್‌ಡ್ಯಾಂಗಳಲ್ಲಿ ನೀರು ಸಂಗ್ರಹಿಸುವ ಬಗ್ಗೆ ಗಮನ ಹರಿಸುವಂತೆ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಸಲಹೆ ನೀಡಿದರು.ಅಡ್ಯಾರ್ ಅಣೆಕಟ್ಟಿನಿಂದ ತುಂಬೆ ಅಣೆಕಟ್ಟಿಗೆ ಪೈಪ್‌ಲೈನ್ ಮೂಲಕ ನೀರೆತ್ತುವ ಕಾರ್ಯಕ್ಕೆ ಕ್ರಮ ವಹಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸಲಹೆ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯ ತ್ಯಾಜ್ಯ ನಿರ್ವಹಣಾ ಘಟಕದ ಪಾರಂಪರಿಕ ತ್ಯಾಜ್ಯ ವಿಲೇ ಹಾಗೂ ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ವಸೂಲಾತಿಗೆ ಸೂಕ್ತ ಕ್ರಮ ವಹಿಸುವಂತೆ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ನಗರ ಪಾಲಿಕೆಗಳಲ್ಲಿ ಜೂನಿಯರ್ ಇಂಜಿನಿಯರ್‌ಗಳು, ಹಿರಿಯ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರು, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ ಕೊರತೆ ಇರುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಚಿವರ ಗಮನ ಸೆಳೆದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಪಾಲಿಕೆ ಆಯುಕ್ತ ಆನಂದ್, ನಗರಾಭಿವೃದ್ಧಿ ಕೋಶದ ಜಿಲ್ಲಾ ಅಧಿಕಾರಿ ಅಭಿಷೇಕ್, ಕಾರ್ಯನಿರ್ವಾಹಕ ಅಭಿಯಂತರ ಪುರಂದರ ಮೊದಲಾದವರು ಉಪಸ್ಥಿತರಿದ್ದರು.
130 ಕೋಟಿ ರೂ.ಗಳ 302 ಕಾಮಗಾರಿ ಮಂಜೂರು 68 ಪೂರ್ಣ
ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ನಗರಗಳ ಅಭಿವೃದ್ಧಿ ಯೋಜನೆ ನಾಲ್ಕನೆ ಹಂತ(ನಗರೋತ್ಥಾನ)ದ ಕಾರ್ಯಕ್ರಮದಡಿ ದ.ಕ.ಜಿಲ್ಲೆಯ 14 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 130 ಕೋಟಿ ರೂ.ಗಳ 302 ಕಾಮಗಾರಿಗಳು ಮಂಜೂರಾಗಿವೆ.ಅದರಲ್ಲಿ 68 ಕಾಮಗಾರಿಗಳು ಪೂರ್ಣಗೊಂಡಿವೆ.213 ಕಾಮಗಾರಿಗಳು ಟೆಂಡರ್ ಆಗಿ ವಿವಿಧ ಹಂತದಲ್ಲಿ ಕೆಲಸ ಚಾಲ್ತಿಯಲ್ಲಿವೆ.41 ಕಾಮಗಾರಿಗಳು ಟೆಂಡರ್ ಆಗಿಲ್ಲ ಅಥವಾ ಟೆಂಡರ್ ಪ್ರಕ್ರಿಯೆಯಲ್ಲಿವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದರು.
ಕಡಬ, ವಿಟ್ಲ ಸೇರಿ 9ಕಡೆ ಇಂದಿರಾ ಕ್ಯಾಂಟೀನ್‌ಗಳಿಗೆ ಪ್ರಸ್ತಾವನೆ
ದ.ಕ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ 9 ಇಂದಿರಾ ಕ್ಯಾಂಟೀನ್‌ಗಳ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವ ದಿನೇಶ್ ಗುಂಡೂರಾವ್, ಕ್ಯಾಂಟೀನ್‌ಗಳ ನಿರ್ವಹಣೆಯ ಜತೆಗೆ ಸ್ವಚ್ಛತೆಯನ್ನು ಕಾಪಾಡುವಲ್ಲಿ ಗುತ್ತಿಗೆ ನಿರ್ವಹಿಸುವವರು ಆದ್ಯತೆ ನೀಡುವುದನ್ನು ಖಾತರಿಪಡಿಸಬೇಕೆಂದು ಸೂಚಿಸಿದರು. ಕಡಬ, ವಿಟ್ಲ, ಸೋಮೇಶ್ವರ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ, ಕಿನ್ನಿಗೋಳಿ, ಕೋಟೆಕಾರ್, ಬಜ್ಪೆ ಸೇರಿದಂತೆ ಜಿಲ್ಲೆಯ 9 ಕಡೆ ಹೊಸದಾಗಿ ಇಂದಿರಾ ಕ್ಯಾಂಟೀನ್ ಆರಂಭ ಹಾಗೂ 2 ಅಡುಗೆ ತಯಾರಿ ಕೇಂದ್ರಗಳನ್ನು ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು. ಯಾವ ಜಾಗದಲ್ಲಿ ಕ್ಯಾಂಟೀನ್ ಅಗತ್ಯವಿದೆ ಎಂಬ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡಬೇಕು.ಸೂಕ್ತವಾದ ಜಾಗ ಇಲ್ಲವಾದಲ್ಲಿ ಬಿಬಿಎಂಪಿಯಲ್ಲಿರುವಂತೆ ಮೊಬೈಲ್ ಕ್ಯಾಂಟೀನ್‌ಗೆ ಆದ್ಯತೆ ನೀಡಬಹುದು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದರು.