ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ದರ್ಬೆ ಶಶಿಶಂಕರ ಸಭಾಂಗಣದಲ್ಲಿ ನಡೆದ ನೃತ್ಯಾಂತರಂಗದ 104ನೇ ಸರಣಿ ಕಾರ್ಯಕ್ರಮದಲ್ಲಿ ಮೂಲ್ಕಿ ಶಿವಪ್ರಣಾಮ್ ನೃತ್ಯ ಸಂಸ್ಥೆಯ ವಿದುಷಿ ಅನ್ನಪೂರ್ಣ ದೇಶ್ ಅವರು ಭರತನಾಟ್ಯ ನೃತ್ಯ ಪ್ರಸ್ತುತಿ ಮಾಡಿದರು.
ಮಂಗಳೂರಿನ ಭರತಾಂಜಲಿ ನೃತ್ಯ ಸಂಸ್ಥೆಯ ಗುರು ವಿದುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ್ ಹೊಳ್ಳ ಅವರ ಶಿಷ್ಯೆಯಾಗಿರುವ ಅನ್ನಪೂರ್ಣ ಅವರು ಪ್ರಾರಂಭದಲ್ಲಿ ಪುಷ್ಪಾಂಜಲಿ ಶೈಲಿಯಲ್ಲಿ ನೃತ್ಯ ಮಾಡಿ ದೇವಿಯ ಸ್ತುತಿ ಮಾಡಿದರು. ಬಳಿಕ ಸುಧೀರ್ಘವಾಗಿ ನವರಾಗ ಮಾಲಿಕೆಯ ಪದವರ್ಣ ಮಾಡಿದರು. ಕಾರ್ಯಕ್ರಮವನ್ನು ಪತ್ರಕರ್ತ ಹರಿಪ್ರಸಾದ್ ನೆಲ್ಯಾಡಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಗೀತ ನಿರ್ದೇಶಕಿ ವಿದುಷಿ ಪ್ರೀತಿಕಾಲ ಅವರ ಓಂ ಕಾರದೊಂದಿಗೆ ವಿದ್ವಾನ್ ದೀಪಕ್ ಕುಮಾರ್ ಶಂಖನಾದವನ್ನು ಮೊಳಗಿಸಿದರು. ಪುಟಾಣಿ ಕಲಾವಿದರ ಅಲಪದ್ಮ ತಂಡ ಪ್ರಾರ್ಥಿಸಿದರು. ಅಪೇಕ್ಷಾ, ದಿಶಾ ಶೆಟ್ಟಿ, ಹಿಮಾನೀಶ್ ಅಭ್ಯಾಗತರು ಮತ್ತು ಕಲಾವಿದರನ್ನು ಪರಿಚಯಿಸಿದರು. ಅನ್ನಪೂರ್ಣ ಅವರ ಶಿಷ್ಯೆ ಹಿತ ಅವರು ಭರತನಾಟ್ಯ ಪ್ರಸ್ತುತಿಯ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಲಾವಿದೆ ಅಕ್ಷಯಪಾರ್ವತಿ ಸರೋಳಿ ಅವರು ಸಭಾ ಕಾರ್ಯಕ್ರಮವನ್ನು ತುಳುವಿನಲ್ಲಿ ನಿರ್ವಹಿಸಿದರು.