ವಿಟ್ಲ: ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ದ. ಕ. ಆಶ್ರಯದಲ್ಲಿ ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶವು ಅ.3ರಂದು ಬೆಳಗ್ಗೆ 10ಕ್ಕೆ ಮಂಗಳೂರು ಪುರಭವನದಲ್ಲಿ ನಡೆಸಲಿದ್ದೇವೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ದ. ಕ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ರವರು ಹೇಳಿದರು.ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪಂಚಾಯತ್ ರಾಜ್ ಅಧಿ ನಿಯಮದ ಪರಿಚಯವನ್ನು ಮಾಜಿ ಸಭಾಪತಿ ಬಿ.ಎಲ್. ಶಂಕರ್ ಮಾಡಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯರ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಕಾರ್ಯಕ್ರಮಾದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಪಂಚಾಯಿತಿಗಳ ಪ್ರತಿನಿಧಿಗಳು, ಮಾಜಿ ಸದಸ್ಯರು, ಸ್ಪರ್ಧಿಸಿದ ಅಭ್ಯರ್ಥಿಗಳು, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸದಸ್ಯರನ್ನು ಸಮಾವೇಶದಲ್ಲಿ ಸೇರಿಸಲಿದ್ದೇವೆ. ಸಮಾವೇಶ ಭಾಷಣಕ್ಕೆ ಸೀಮಿತವಾದ ಪಂಚಾಯಿತಿ ಪ್ರತಿನಿಧಿಗಳ ಧ್ವನಿಯಾಗಲಿದೆ. 6 ವಿಧಾನ ಸಭಾ ಕ್ಷೇತ್ರದ ತಲಾ ಒಬ್ಬ ಗ್ರಾಮ ಪಂಚಾಯತ್ ಪ್ರತಿನಿಧಿಗೆ ವಿಚಾರ ಮಂಡನೆಗೆ ಅವಕಾಶವನ್ನು ಕಲ್ಪಿಸುವ ಜತೆಗೆ ಜಿಲ್ಲಾ ಪಂಚಾಯತ್ ನಿಂದ ತಾಲೂಕು ಪಂಚಾಯತ್ ನಿಂದ ತಲಾ ಒಬ್ಬ ಮಾಜಿ ಅಧ್ಯಕ್ಷರು ಅವರು ಸ್ಥಳಿಯಾಡಳಿತದ ಬಗ್ಗೆ ಪ್ರಶ್ನೆ ಕೇಳಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪಂಚಾಯತ್ ಪ್ರತಿನಿಧಿಗಳನ್ನು ಅಭಿನಂಧಿಸುವ ಕಾರ್ಯಕ್ರಮ ನಡೆಯಲಿದೆ. ಪಂಚಾಯತ್ ಪ್ರತಿನಿಧಿಗಳಿಗೆ ಸಿಗುವ ಗೌರವ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಲಾಗುವುದು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಸಚಿವರ ಗಮನ ಸೆಳೆದು, ಪರಿಹಾರ ಕಂಡುಕೊಳ್ಳುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಅತಿ ಶೀಘ್ರವಾಗಿ ನಡೆಸುವ ಬೇಡಿಕೆಯನ್ನು ಇಡಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ. ಬಿ., ಕೆಪಿಸಿಸಿ ಸದಸ್ಯರಾದ ಎಂ.ಎಸ್.ಮಹಮ್ಮದ್, ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಭಂಡಾರಿ, ವಿಟ್ಲ ಬ್ಲಾಕ್ ಅಧ್ಯಕ್ಷ ಹಸೈನಾರ್ ನೆಲ್ಲಿಗುಡ್ಡೆ, ಬ್ಲಾಕ್ ಕಾರ್ಯದರ್ಶಿ ಎಸ್. ಕೆ. ಮಹಮ್ಮದ್ ಉಪಸ್ಥಿತರಿದ್ದರು.