ಅ.22:ವಿಜಯ ಸಾಮ್ರಾಟ್ ಪುತ್ತೂರು ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ‘ಪುತ್ತೂರುದ ಪಿಲಿಗೊಬ್ಬು’ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ವಿಜಯ ಸಾಮ್ರಾಟ್ ಪುತ್ತೂರು ಇದರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ತಾಸೆದ ಪೆಟ್ಟ್‌ಗ್ ಊರುದ ಪಿಲಿಕುಲು ನಲಿಪುನ ಪೊರ್ಲು ‘ಪುತ್ತೂರುದ ಪಿಲಿಗೊಬ್ಬು 2023 ಹಾಗೂ ವಿವಿಧ ಖಾದ್ಯಗಳ ಫುಡ್ ಫೆಸ್ಟ್’ ಅದ್ದೂರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸೆ.28 ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.


ಮೊದಲಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥನದ ಅರ್ಚಕರಿಂದ ಪುತ್ತೂರ‍್ದ ಪಿಲಿಗೊಬ್ಬು-ಫುಡ್ ಫೆಸ್ಟ್ ಕಾರ್ಯಕ್ರಮವು ಯಶಸ್ವಿಯಾಗಲೆಂದು ಆಶೀರ್ವಚನ ಕಾರ್ಯಕ್ರಮ ನೆರವೇರಿತು. ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಪ್ರಸಿದ್ಧ ಚರ್ಮರೋಗ ತಜ್ಞರಾದ ಡಾ.ನರಸಿಂಹ ಶರ್ಮ ಕಾನಾವುರವರು ಜಂಟಿಯಾಗಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.


ಬಳಿಕ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯರವರು, ದೇವಸ್ಥಾನದ ರಥಬೀದಿಯಲ್ಲಿ ನಡೆಯುವಂತಹ ಈ ಪಿಲಿಗೊಬ್ಬು ಹಾಗೂ ವಿವಿಧ ಖಾದ್ಯಗಳ ಫುಡ್ ಫೆಸ್ಟ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ. ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಈ ಪಿಲಿಗೊಬ್ಬು ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವರು ಯಶಸ್ವಿಯಾಗಲೆಂದು ಅನುಗ್ರಹಿಸಲಿ ಎಂದು ಹೇಳಿ ಶುಭ ಹಾರೈಸಿದರು.


ಚರ್ಮರೋಗ ತಜ್ಞರಾದ ಡಾ.ನರಸಿಂಹ ಶರ್ಮ ಕಾನಾವುರವರು ಮಾತನಾಡಿ, ಜಿಲ್ಲೆಯ ಜನಪದ ಕಾರ್ಯಕ್ರಮವೆನಿಸಿದ ಈ ಪಿಲಿಗೊಬ್ಬು ಸಂಭ್ರಮವನ್ನು ಎಲ್ಲರೂ ಆನಂದಿಸುವಂತಾಗಲಿ ಮಾತ್ರವಲ್ಲ ಈ ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಯಶಸ್ವಿಯಾಗಲಿ. ಪುತ್ತೂರಿನಲ್ಲಿ ವಿಜಯ ಸಾಮ್ರಾಟ್ ವತಿಯಿಂದ ಪ್ರಥಮ ಬಾರಿಗೆ ನಡೆಯುವ ಈ ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹದಿಂದ ಯಶಸ್ಸನ್ನು ಪಡೆಯಲಿ ಎಂಬುದೇ ಹಾರೈಕೆಯಾಗಿದೆ ಎಂದರು.


ಪಿಲಿಗೊಬ್ಬು ಸಮಿತಿಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಹುಟ್ಟುಹಾಕಿದ ಸಂಸ್ಥೆ ವಿಜಯ ಸಾಮ್ರಾಟ್. ಈ ಸಂಸ್ಥೆಯಡಿಯಲ್ಲಿ ೧೫೦೦ಕ್ಕೂ ಮಿಕ್ಕಿ ಅಗತ್ಯವುಳ್ಳವರಿಗೆ, ಆಶಾ ಕಾರ್ಯಕರ್ತರಿಗೆ ಆಹಾರ ಸಾಮಾಗ್ರಿಗಳು, ಮನೆ ನಿರ್ಮಾಣ ಕಾರ್ಯವನ್ನು ಮಾಡಿರುತ್ತದೆ. ಸಹಜ್‌ರವರ ನೇತೃತ್ವದಲ್ಲಿ ಅಳಿವಿನಂಚಿನಲ್ಲಿರುವ ಹುಲಿವೇಷ ಎಂಬ ಜನಪದ, ದೈವಿಕ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಆರಂಭಿಸಲಾಗಿದೆ. ಜೊತೆಗೆ ತುಳುನಾಡಿನ ವಿವಿಧ ಆಹಾರ ಖಾದ್ಯಗಳ ಆಹಾರ ಮೇಳವನ್ನು ಏರ್ಪಡಿಸಿ ಜನತೆಗೆ ಉಣ ಬಡಿಸಲಿದ್ದೇವೆ. ಪುತ್ತೂರಿನಲ್ಲಿ ಜಾತ್ರೆ, ಕಂಬಳ ಬಳಿಕ ಈ ಪಿಲಿಗೊಬ್ಬು ಮೂರನೇ ಅತೀ ದೊಡ್ಡ ಜಾತ್ರೆಯಾಗಿ ಗುರುತಿಸಲ್ಪಡಲಿದೆ ಎಂದರು.
ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಪಿಲಿಗೊಬ್ಬು ಸಮಿತಿಯ ಸಂಚಾಲಕ ನಾಗಾರಾಜ್ ನಡುವಡ್ಕ, ಜೊತೆ ಕಾರ್ಯದರ್ಶಿ ಶಂಕರ್ ಭಟ್ ಈಶಾನ್ಯ, ಕೋಶಾಧಿಕಾರಿ ರಾಜೇಶ್ ಕೆ.ಗೌಡ, ಕಾರ್ಯದರ್ಶಿ ಶರತ್ ಕುಮಾರ್ ಮಾಡಾವು ಸಹಿತ ಹಲವರು ಉಪಸ್ಥಿತರಿದ್ದರು.


ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ..
ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿರುವ ವಿಜಯ ಸಾಮ್ರಾಟ್ ತಂಡದಿಂದ ದಕ್ಷಿಣ ಕನ್ನಡ ಜಿಲ್ಲೆಯ ಆಹ್ವಾನಿತ ಬಲಿಷ್ಟ ತಂಡಗಳಿಂದ ಹುಲಿವೇಷ ಕುಣಿತ ಜರಗಲಿದೆ. ಹುಲಿವೇಷ ಕುಣಿತದ ಜೊತೆಗೆ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ವಿವಿಧ ಖಾದ್ಯಗಳ ಫುಡ್ ಫೆಸ್ಟ್ ಕೂಡ ನಡೆಯಲಿಕ್ಕಿದೆ. ವಿಸ್ತಾರವಾದ ಪೆಂಡಾಲ್ ನಿರ್ಮಿಸುವ ಮೂಲಕ ಪ್ರೇಕ್ಷಕರಿಗೆ ಕಾರ್ಯಕ್ರಮದ ರಸದೌತಣವನ್ನು ಉಣಬಡಿಸಲಿದ್ದು ಜೊತೆಗೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಿಲಿಗೊಬ್ಬು ಜೊತೆಗೆ ಫುಡ್ ಫೆಸ್ಟಿವಲ್ ಕಾರ್ಯಕ್ರಮವು ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆಯಲಿದೆ.
-ಸಹಜ್ ರೈ ಬಳಜ್ಜ, ಗೌರವಾಧ್ಯಕ್ಷರು. ಪಿಲಿಗೊಬ್ಬು ಸಮಿತಿ

-10 ತಂಡಗಳಿಗೆ ಮಾತ್ರ ಅವಕಾಶ
-ಪ್ರತಿ ತಂಡಕ್ಕೆ 23 ನಿಮಿಷಗಳ ಅವಕಾಶ
-ಗರಿಷ್ಟ 15 ಹುಲಿಗಳಿಗೆ ಮಾತ್ರ ಒಂದು ತಂಡದಲ್ಲಿ ಅವಕಾಶ
-ಪರಿಣತಿ ಹೊಂದಿದ ತೀರ್ಪುಗಾರರು
-ತಂಡಗಳ ನಿಯಮ ಮತ್ತು ನಿಬಂಧನೆಗಳನ್ನು ಆಯಾ ತಂಡಗಳಿಗೆ ಪ್ರತ್ಯೇಕವಾಗಿ ನೀಡಲ್ಪಡುತ್ತದೆ
-ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್ ಚಲನಚಿತ್ರ ನಟರ ವಿಶೇಷ ಮೆರುಗು

ಬಹುಮಾನಗಳು..
ಪ್ರಥಮ=3,೦೦,೦೦೦/-
ದ್ವಿತೀಯ=2,೦೦,೦೦೦/-
ತೃತೀಯ=1,೦೦,೦೦೦/-
ರೂ =1೦,೦೦೦ ಐದು ವೈಯಕ್ತಿಕ ಬಹುಮಾನಗಳು

LEAVE A REPLY

Please enter your comment!
Please enter your name here