ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ನರೇಗಾ, ಜಿ.ಪಂ., ತಾ.ಪಂ. ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಮಳೆ ನೀರು ಬಳಕೆ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು ಹಾಗೂ ಸುದ್ದಿ ಕೃಷಿ ಸೇವಾ ಕೇಂದ್ರ ಪುತ್ತೂರು ಇದರ ಸಹಯೋಗದಲ್ಲಿ ಮಳೆ ನೀರು ಬಳಕೆ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆ ಕುರಿತು ಮಾಹಿತಿ ಕಾರ್ಯಾಗಾರ ಸೆ.29ರಂದು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಮಳೆನೀರು ಕೊಯ್ಲು: ಮಳೆನೀರು ಕೊಯ್ಲು ವಿಭಾಗದ ವಿಜಯರಾಜ್ ಶಿಶೋದ್ಯ ಮಳೆ ಕೊಯ್ಲು ಮಾಹಿತಿ ನೀಡಿ ಪ್ರಸ್ತುತ ಮಳೆನೀರು ಕೊಯ್ಲು ಪ್ರಚಲಿತದಲ್ಲಿದೆ. ಮಳೆನೀರು ಕೊಯ್ಲು ಮಹತ್ವ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಪಂಚಭೂತಗಳಲ್ಲಿ ನೀರು ಕೂಡ ಮುಖ್ಯವಾದುದು. ಆಕಾಶದಿಂದ ಗಂಗೆಯ ರೂಪದಲ್ಲಿ ಬರುವ ನೀರನ್ನು ನಾವು ಉಳಿಸಿಕೊಳ್ಳುವುದಿಲ್ಲ. ನೀರನ್ನು ನಾವು ಉಳಿಸಿದರೆ ನಮ್ಮನ್ನು ನೀರು ಉಳಿಸುತ್ತದೆ ಎಂದರು. ಮಳೆ ಬೀಳುವ ಕಾಲ ಬದಲಾಗಿದೆ. ಜಗತ್ತಿನಲ್ಲಿ ಮುಂದಿನ ಯುದ್ಧ ಏನಾದರು ಸಂಭವಿಸಿದರೆ ಅದು ನೀರಿಗಾಗಿ ಮಾತ್ರ ಆಗುತ್ತದೆ. ಮಳೆನೀರು ಕೊಯ್ಲು ಮಹತ್ವ ಯಾರಿಗೂ ತಿಳಿಯಲಿಲ್ಲ. ಮುಂದಿನ ಪೀಳಿಗೆಗೆ ಇದನ್ನು ಕೊಡುವುದು ಹೇಗೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಪುತ್ತೂರಿನಲ್ಲಿ 4೦೦೦ ಎಮ್.ಎಮ್. ಮಳೆ ಬೀಳುತ್ತದೆ. ಒಂದು ಮನೆಯ ಛಾವಣಿಯಿಂದ 4ಲಕ್ಷ ಲೀ. ನೀರು ಬೀಳುತ್ತದೆ. ಇದನ್ನು ಹಿಡಿದಿಟ್ಟುಕೊಳ್ಳುವ ಪ್ರಕ್ರಿಯೆ ಮಾಡಬೇಕು ಎಂದರು. ಬೆಂಗಳೂರಿನಂತಹ ಮಹಾನಗರದಲ್ಲಿ ನೀರು 15೦೦ ಅಡಿಯ ಆಳದಲ್ಲಿರುತ್ತದೆ. 10 ಬೋರ್‌ವೆಲ್ ಕೊರೆಸಿದರೆ 4 ಬೋರ್‌ವೆಲ್‌ನಲ್ಲಿ ನೀರು ಸಿಗುತ್ತದೆ. ಇಂತಹ ಸನ್ನಿವೇಶಗಳು ಪುತ್ತೂರಿಗೂ ಬರಬಹುದು. ಬೋರ್‌ವೆಲ್‌ಗಳು ಯಾವತ್ತೂ ಶಾಶ್ವತವಲ್ಲ. ಅತಿವೃಷ್ಟಿ ಮತ್ತು ಅನಾವೃಷ್ಟಿ ಒಂದೇ ನಾಣ್ಯದ ಎರಡು ಮುಖಗಳು. ಮಳೆನೀರನ್ನು 1೦೦ ವರ್ಷ ಹಾಳಾಗಂತೆ ಕಾಯ್ದಿಟ್ಟುಕೊಳ್ಳಬಹುದು ಎಂದರು. ಭಾರತದಲ್ಲಿ ಬೀಳುವ ಮಳೆಯಲ್ಲಿ ಶೇ.35 ಮಾತ್ರ ಉಪಯೋಗವಾಗುತ್ತದೆ. ಉಳಿದ ಶೇ.65 ನೀರು ಸಮುದ್ರದ ಪಾಲಾಗುತ್ತದೆ. ಆದುದರಿಂದ ಮಳೆನೀರನ್ನು ಕಾಪಾಡಬೇಕು. ಮನೆಯ ಮೇಲ್ಛಾವಣಿಯ ಮೂಲಕ ಹರಿದ ನೀರನ್ನು ಪೈಪ್ ಅಳವಡಿಕೆ ಮಾಡಿ ಒಂದೇ ಕಡೆ ತಂದು ಫಿಲ್ಟರ್ ಅಳವಡಿಸಿ ಟ್ಯಾಂಕ್, ಬಾವಿ, ಕೆರೆ ಹಾಗೂ ಬೋರ್‌ವೆಲ್‌ಗಳಿಗೆ ಹರಿಸಬೇಕು ಎಂದರು. ರಾಜ್ಯ ಹಾಗೂ ಅಂತರಾಜ್ಯದಲ್ಲಿ ವಿವಿಧ ಕಂಪೆನಿ, ಉದ್ಯಮ ಸಂಸ್ಥಗಳಲ್ಲಿ ಅಳವಡಿಸಿದ ಮಳೆಕೊಯ್ಲು ತಂತ್ರಜ್ಞಾನವನ್ನು ಪಿಪಿಟಿ ಮೂಲಕ ತೋರಿಸಿ ವಿವರಿಸಿದರು.

ಸೋಲಾರ್ ಬಳಕೆ ಮಾಹಿತಿ: ಉಮೇಶ್ ರೈ ಕೈಕಾರರವರು ಸೋಲಾರ್ ವಿದ್ಯುತ್ ಉತ್ಪಾದನೆ ಮಾಹಿತಿ ನೀಡಿ ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸಿ ಕೆಇಬಿಗೆ ಮಾರಾಟ ಮಾಡಿ ಲಾಭ ಗಳಿಸುವ ಬಗ್ಗೆ ತಿಳಿಸಿದರು. ಆನ್‌ಗ್ರಿಡ್ ವ್ಯವಸ್ಥೆ ಉತ್ತಮವಾದುದು. ಆನ್‌ಗ್ರಿಡ್ ವ್ಯವಸ್ಥೆಯಲ್ಲಿ 2 ಕಿ.ವ್ಯಾಟ್‌ನಿಂದ 50 ಕಿ.ವ್ಯಾಟ್ ವಿದ್ಯುತ್ ಉತ್ಪಾದನೆಯ ಸೋಲಾರ್ ಅಳವಡಿಸಲು ಕೆಇಬಿ ಅವಕಾಶ ಕಲ್ಪಿಸಿದೆ ಎಂದರು. ಮುಂದಿನ ದಿನಗಳಲ್ಲಿ ಇಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳವಾಗುತ್ತದೆ. ಈ ಕಾರಣಕ್ಕಾಗಿ ಸೋಲಾರ್ ಮೂಲಕ ವಿದ್ಯುತ್ ಮಾಡಬಹುದು. ಹೆಚ್ಚಾದ ವಿದ್ಯುತ್‌ನ್ನು ಕೆಇಬಿಗೆ ಮಾರಾಟ ಮಾಡಿ ಹಣ ಗಳಿಸಬಹುದು. ಇದನ್ನು 25 ವರ್ಷಗಳವರೆಗೆ ಮಾಡಬಹದು. ಆನ್‌ಗ್ರಿಡ್ ಸೋಲಾರ್ ಅಳವಡಿಸಲು ಯಾವುದೇ ಹೂಡಿಕೆ ಮಾಡಬೇಕಾಗಿಲ್ಲ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಕೆಲವು ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆ ನೀಡುತ್ತದೆ. ಇದನ್ನು ಉಪಯೋಗಿಸಿಕೊಳ್ಳಬಹುದು ಎಂದರು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಪ್ರಾಸ್ತಾವಿಕ ಮಾತನಾಡಿ ಸುದ್ದಿ ಸಂಸ್ಥೆಯು ಪತ್ರಿಕೆಯ ಜೊತೆಗೆ ಮಳೆ ನೀರು ಕೊಯ್ಲು ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆಯ ಕುರಿತು ಆಂದೋಲನ ಹಮ್ಮಿಕೊಂಡಿದ್ದೇವೆ. ನದಿಯ ನೀರನ್ನು ನಾವು ಬಳಕೆ ಮಾಡುತ್ತೇವೆ. ಆದರೆ ಮಳೆಯ ನೀರನ್ನು ಯಾಕೆ ಬಳಕೆ ಮಾಡಬಾರದು ಎಂದರು. ನದಿ ನೀರಿಗಿಂತ ಮಳೆ ನೀರು ಶುದ್ಧವಾಗಿದೆ. ಆದುದರಿಂದ ಮಳೆ ನೀರನ್ನು ಫಿಲ್ಟರ್ ಮೂಲಕ ಶುಧ್ಧೀಕರಿಸಿ ಉಪಯೋಗಿಸಿ ಎಂದರು. ಗ್ರಾಮ ಪಂಚಾಯತ್‌ನ ಕಟ್ಟಡದಲ್ಲಿ ಮಳೆನೀರು ಕೊಯ್ಲು ಮತ್ತು ಸೋಲಾರ್ ಅಳವಡಿಸಿಕೊಂಡು ನೀವೇ ಮೊದಲಿಗರಾಗಿ ಎಂದು ಕರೆ ನೀಡಿದರು. ಜಿಲ್ಲಾ ಪಂಚಾಯತ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ನಾಯಕ್ ಮಾಹಿತಿ ನೀಡಿ ಪ್ರಶ್ನೆಗಳಿಗೆ ಉತ್ತರಿಸಿದರು.

ಮಾಹಿತಿ ಕಾರ್ಯಾಗಾರ ಬಳಿಕ ಮಳೆ ನೀರು ಕೊಯ್ಲು ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಪಿಡಿಒ, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರೊಂದಿಗೆ ಪ್ರಶ್ನೋತ್ತರ ನಡೆಯಿತು. ತಾಲೂಕು ಪಂಚಾಯತ್‌ನ ನರೇಗಾ ಮಾಹಿತಿ ಶಿಕ್ಷಣ ಸಂವಹನ ನಿರ್ದೇಶಕ ಭರತ್‌ರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕು ಪಂಚಾಯತ್ ಯೋಜನಾಧಿಕಾರಿ ಸುಕನ್ಯ ವಂದಿಸಿದರು. ಪುತ್ತೂರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್ ಪಿಡಿಒ, ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.

ನೀರನ್ನು ನಾವು ಉಳಿಸಿದರೆ ನಮ್ಮನ್ನು ನೀರು ಉಳಿಸುತ್ತದೆ – ವಿಜಯರಾಜ್ ಶಿಶೋದ್ಯ
ಮುಂದಿನ ದಿನಗಳಲ್ಲಿ ವಿದ್ಯುತ್ ಭಾರ ಆಗುತ್ತದೆ – ಉಮೇಶ್ ರೈ ಕೈಕಾರ
ನದಿ ನೀರಿಗಿಂತ ಮಳೆ ನೀರು ಶುದ್ಧವಾಗಿದೆ- ಡಾ.ಯು.ಪಿ.ಶಿವಾನಂದ

LEAVE A REPLY

Please enter your comment!
Please enter your name here