ಬಿಳಿನೆಲೆ ಕೈಕಂಬ ಶಾಲಾ ವಿದ್ಯಾರ್ಥಿನಿಯ ಪತ್ರ ಸಿ.ಎಂ. ಕಛೇರಿಗೆ – ಕೆಲವೇ ತಾಸಿನಲ್ಲಿ ತಂಬಾಕು ಮಾರಾಟ ಅಂಗಡಿಗೆ ದಾಳಿ-ಪ್ರಕರಣ ದಾಖಲು

0

ಕಡಬ: ಶಾಲೆಯ ಬಳಿ ತಂಬಾಕು ಮಾರಾಟ ನಿಷೇದಿಸಿದ್ದರೂ ಅಂಗಡಿಯಲ್ಲಿ ನಿಯಮ ಮೀರಿ ಮಾರಾಟ ಮಾಡುತ್ತಿದ್ದ ಬಗ್ಗೆ ಬಿಳಿನೆಲೆ ಕೈಕಂಬ ಶಾಲಾ 3ನೇ ತರಗತಿ ವಿದ್ಯಾರ್ಥಿನಿ ಆಯೋರ ಎಂಬಾಕೆ ಪತ್ರಿಕೆಯೊಂದರ ಓದುಗರ ವಿಭಾಗಕ್ಕೆ ಬರೆದ ಪತ್ರವನ್ನು ಪತ್ರಿಕಾ ಕಛೇರಿಯವರು ಪತ್ರವನ್ನು ಮುಖ್ಯ ಮಂತ್ರಿ ಕಛೇರಿಗೆ ತಲುಪಿಸಿದ ಕೆಲವೇ ಸಮಯದಲ್ಲಿ ಬಿಳಿನೆಲೆ ಕೈಕಂಬ ಶಾಲಾ ಬಳಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗೆ ಕಡಬ ಪೋಲಿಸರು ದಾಳಿ ನಡೆಸಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.
ಧಾರ್ಮಿಕ ಕೇಂದ್ರಗಳ ಬಳಿ ತಂಬಾಕು ನಿಷೇಧ ಮಾಡಿದ ವಿಚಾರ ಸೆ.14ರ ವಿಜಯವಾಣಿ ಮುಖಪುಟದಲ್ಲಿ ಪ್ರಕಟವಾಗಿತ್ತು. ಇದನ್ನು ಓದಿದ ಬಾಲಕಿ ಶಾಲೆಯಿಂದ 100 ಮೀ. ದೂರದವರೆಗೆ ತಂಬಾಕು ಮಾರಾಟ ಮಾಡಬಾರದೆಂದು ತಿಳಿದುಕೊಂಡಿದ್ದಾಳೆ. ಶಾಲೆಯ ಬಳಿ ತಂಬಾಕು ವಸ್ತುಗಳ ಪಟ್ಟಣ ಬಿದ್ದಿರುವುದನ್ನು ಪೋಷಕರಲ್ಲಿ ಹೇಳಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಪೋಷಕರು ಹೇಳಿದಂತೆ ಬಾಲಕಿ ಪತ್ರಿಕಾ ಕಛೇರಿಗೆ ಪತ್ರ ಬರೆದಿದ್ದಾಳೆ. ಪತ್ರಿಕಾ ಕಛೇರಿಯವರು ಆ ಪತ್ರವನ್ನು ಸಿ.ಎಂ. ಕಛೇರಿಗೆ ಕಳಿಸಿದ್ದಾರೆ.
ಪತ್ರ ತಲುಪಿದ ಕೆಲವೇ ತಾಸಿನಲ್ಲಿ ಅಂಗಡಿಗೆ ದಾಳಿ
ಸಿ.ಎಂ.ಕಛೇರಿಗೆ ಪತ್ರ ತಲುಪಿದ ಕೆಲವೇ ತಾಸಿನಲ್ಲಿ ಕಡಬ ಪೋಲಿಸರು ದಾಳಿ ನಡೆಸಿದಾಗ ಕೈಕಂಬ ಶಾಲಾ ಬಳಿ ಇರುವ ನವೀನ್ ಎಂಬವರ ಧನಶ್ರೀ ಫ್ಯಾನ್ಸಿ ಮತ್ತು ಪೂಟ್ ವೇರ್ ಅಂಗಡಿಯಲ್ಲಿ ತಂಬಾಕು ಮತ್ತು ಸಿಗರೇಟ್ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಆ ಬಗ್ಗೆ ಅಂಗಡಿ ಮಾಲಕರ ವಿರುದ್ದ ಪ್ರಕರಣ ದಾಖಲಿಸಿ, ದಂಡ ವಿಧಿಸಿದ್ದಾರೆ.

LEAVE A REPLY

Please enter your comment!
Please enter your name here