ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಭೇಟಿ

0

ಪುತ್ತೂರು: ರಾಜ್ಯ ಧಾರ್ಮಿಕ ಪರಿಷತ್‌ನ ಏಕೈಕ ಮಹಿಳಾ ಸದಸ್ಯೆಯಾಗಿ ನೇಮಕಗೊಂಡಿರುವ ಮಲ್ಲಿಕಾ ಪಿ. ಪಕ್ಕಳ ಅವರು ಅ.5 ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಶಾಲು ಹೊದಿಸಿ, ದೇವರ ಸ್ಮರಣಿಕೆ ನೀಡಿ ಅಭಿನಂದಿಸಿ ಸನ್ಮಾನಿಸಿದರು.

ಈ ವೇಳೆ ಸುದ್ದಿಯ ಜೊತೆಗೆ ಮಾತನಾಡಿದ ಮಲ್ಲಿಕಾ ಪಿ. ಪಕ್ಕಳ ಅವರು, ಅನಿರೀಕ್ಷಿತವಾಗಿ ರಾಜ್ಯಮಟ್ಟದ ಜವಾಬ್ದಾರಿಯನ್ನು ನೀಡಿದ್ದಾರೆ. 25 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ. ಹೊಸ ಜವಾಬ್ದಾರಿ ಖುಷಿ ಕೊಟ್ಟಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇದು ಹೊಸ ಅನುಭವ. ಈಗ ಜವಾಬ್ದಾರಿ ವಹಿಸಿಕೊಂಡು ವಾರವಾಗಿದೆ ಅಷ್ಟೇ. ಮುಂದಿನ ದಿನಗಳಲ್ಲಿ ಎಲ್ಲಾ ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಮಿತಿಯ ಸದಸ್ಯರು, ಅಧಿಕಾರಿಗಳ ಜೊತೆಗೆ ಚರ್ಚಿಸಿಕೊಂಡು, ಹೇಗೆ ಅನುದಾನಗಳನ್ನು ತರಬಹುದು ಎನ್ನುವುದನ್ನು ತಿಳಿದುಕೊಂಡು ಕೆಲಸ ಮಾಡುತ್ತೇನೆ. 4 ವರ್ಷಗಳ ಅವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತೇನೆ ಎನ್ನುವ ಭರವಸೆ ಇದೆ ಎಂದು ಹೇಳಿದರು.


ಈ ವೇಳೆ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಐತ್ತಪ್ಪ ನಾಕ್, ರಾಮದಾಸ್ ಗೌಡ, ಶೇಖರ್ ನಾರಾವಿ ವೀಣಾ ಬಿ.ಕೆ., ಪ್ರಮುಖರಾದ ರಮೇಶ್ ರೈ ಡಿಂಬ್ರಿ, ನಯನಾ ವಿ ರೈ, ಹರಿಣಾಕ್ಷಿ ಜೆ. ಶೆಟ್ಟಿ, ಸಬಿತ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಈ ಸ್ಥಾನ ಸಿಗುವುದಕ್ಕೆ ಮಾಜಿ ಸಚಿವರಾದ ರಮಾನಾಥ ರೈಯವರು ಮುಖ್ಯ ಕಾರಣ. ಈ ಸ್ಥಾನ ಸಿಗಬಹುದು ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಇಟ್ಟಿರುವ ನಂಬಿಕೆ, ಭರವಸೆಯನ್ನು ನಾನು ನೆರವೇರಿಸುತ್ತೇನೆ. ದೈವದೇವರ, ಗುರುಹಿರಿಯರ, ಹೆತ್ತವರ ಆಶೀರ್ವಾದದಿಂದ ಇದು ಲಭಿಸಿದೆ. ಜವಾಬ್ದಾರಿ ನಿರ್ವಹಣೆಯಲ್ಲಿ ಎಲ್ಲ ದೈವದೇವರ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತಿದ್ದೇನೆ.
– ಮಲ್ಲಿಕಾ ಪಿ. ಪಕ್ಕಳ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರು

LEAVE A REPLY

Please enter your comment!
Please enter your name here