ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ತಿಂಗಳಾಡಿ, ಕೆ.ಎಸ್.ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಮೇಳ (ಆಯುಷ್ಮಾನ್ ಭವ) ಅ.10 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಕೆದಂಬಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆ ದೀಪ ಬೆಳಗಿಸಿ ಆರೋಗ್ಯ ಮೇಳವನ್ನು ಉದ್ಘಾಟಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ದೀಪಕ್ ರೈಯವರು ಮಾತನಾಡಿ, ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಿಕೊಳ್ಳುವುದು ಅತೀ ಅಗತ್ಯ ಈ ನಿಟ್ಟಿನಲ್ಲಿ ಸರಕಾರ ಹಾಗೂ ಆರೋಗ್ಯ ಮೇಳಗಳನ್ನು ಮಾಡುತ್ತಾ ಬರುತ್ತಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿ, ಆಯುಷ್ಮಾನ್ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭವ್ಯ, ಕೆ.ಎಸ್.ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರುಗಳಾದ ಡಾ.ನಂಜೇಶ್, ಡಾ.ಸಂಜಯ್, ಡಾ.ನಿಖಿಲ್, ಡಾ.ರಮ್ಯ, ಡಾ.ಫರ್ಝಾನ, ಡಾ.ಸೂರ್ಯಕಲಾ, ಡಾ.ನವೀನ್, ಸೋಶಿಯಲ್ ವರ್ಕರ್ ರವಿ ಉಪಸ್ಥಿತರಿದ್ದರು.
ಆರೋಗ್ಯ ಮೇಳದಲ್ಲಿ ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಗಳೂರು ಇಲ್ಲಿನ ತಜ್ಞ ವೈದ್ಯರುಗಳಿಂದ ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣಿನ ಪರೀಕ್ಷೆ, ಮಕ್ಕಳ ಪರೀಕ್ಷೆ, ಎನ್‌ಸಿಡಿ ಕ್ಯಾಂಪ್, ಅಭಾ ಕಾರ್ಡ್ ನೋಂದಣಿ, ಲ್ಯಾಬ್ ಸೌಲಭ್ಯಗಳು, ಆರ್ಗನ್ ಡೋನೇಷನ್ ಕ್ಯಾಂಪ್ ಇತ್ಯಾದಿ ಸೌಲಭ್ಯಗಳು ಇದ್ದು ಗ್ರಾಮಸ್ಥರು ಇದರ ಪ್ರಯೋಜನವನ್ನು ಪಡೆದುಕೊಂಡರು. ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸಹಕರಿಸಿದ್ದರು.