ಗಡಿ ಪ್ರದೇಶದಲ್ಲಷ್ಟೇ ಯುದ್ಧದ ವಾತಾವರಣ ನಾವು ಸುರಕ್ಷಿತ: ತಾಯ್ನಾಡಿನಲ್ಲಿ ಆತಂಕ ಬೇಡ

0

ಇಸ್ರೇಲ್ ಉದ್ಯೋಗಿ ಪ್ರದೀಪ್ ಕೊಯಿಲ

ಇಲ್ಲಿ ಹಲವು ಮಂದಿ ದ.ಕ. ಜಿಲ್ಲೆಯವರು ಇದ್ದರೂ, ನನ್ನ ಸಂಪರ್ಕದಲ್ಲಿ ಗಣೇಶ್ ಮತ್ತು ಕಡಬ ತಾಲೂಕಿನ ದಿನೇಶ್, ಉಮೇಶ್ ಎಂಬವರು ನೇರ ಸಂಪರ್ಕದಲ್ಲಿದ್ದಾರೆ. ಅವರು ಸೇರಿದಂತೆ ದ.ಕ. ಜಿಲ್ಲೆಯವರಿಗೆ ಇಲ್ಲಿ ಯಾವುದೇ ತೊಂದರೆ ಆಗಿಲ್ಲ. ಯಹೂದಿಗಳಿಗೆ ಭಾರತೀಯರೆಂದರೆ ಬಹಳ ಅಭಿಮಾನವಿದ್ದು, ತಮ್ಮ ಮನೆಯವರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದ್ದರಿಂದ ಈ ಯುದ್ಧದಿಂದ ನಮಗೇನೂ ತೊಂದರೆ ಆಗಿಲ್ಲ.

ಭಾರತೀಯರು ಸುರಕ್ಷಿತರಾಗಿದ್ದೇವೆ-ಅಕ್ಷಯ್
ಉಪ್ಪಿನಂಗಡಿ : ಇಸ್ರೇಲ್ ತನ್ನ ಮೇಲಿನ ಹಠಾತ್ ಆಕ್ರಮಣದಿಂದ ಆಕ್ರೋಶಗೊಂಡು ಯುದ್ದ ಘೋಷಿಸಿರುವುದರಿಂದ ನಾವೆಲ್ಲಾ ಕಟ್ಟೆಚ್ಚರದಿಂದ ಇದ್ದೇವೆಯಾದರೂ ಸದ್ಯ ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದೇವೆ. ಮಿಸೈಲ್ ಅಪ್ಪಳಿಸುವ ಶಬ್ದ ದಿನ ನಿತ್ಯ ಕೇಳಿಸುತ್ತಿದೆಯಾದರೂ ಇಸ್ರೇಲ್ ಒಳಭಾಗ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕಳೆದ 8 ವರ್ಷಗಳಿಂದ ಇಸ್ರೇಲ್ ನಲ್ಲಿ ಉದ್ಯೋಗದಲ್ಲಿರುವ ಮಡಂತ್ಯಾರು ಬಳಿಯ ಪಾರೆಂಕಿ ನಿವಾಸಿ ಅಕ್ಷಯ್ ಪತ್ರಿಕೆಗೆ ತಿಳಿಸಿದ್ದಾರೆ.

ಇಲ್ಲಿನ ಪ್ರತಿಯೊಂದು ಮನೆಗಳಿಗೂ ಬಾಂಬ್ ದಾಳಿಯಿಂದ ರಕ್ಷಿಸಿಕೊಳ್ಳಬಹುದಾದ ಸುರಕ್ಷಾ ಕೊಠಡಿಗಳಿವೆ. ಕ್ಷಿಪಣಿ ದಾಳಿಯ ಸಾಧ್ಯತೆಯನ್ನು ಮನಗಂಡು ಮುಂಚಿತವಾಗಿಯೇ ಎಚ್ಚರಿಸುವ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿರುವುದರಿಂದ ಸೈರನ್ ಮೊಳಗಿದ ಕೂಡಲೇ ನಾವೆಲ್ಲಾ ಸುರಕ್ಷಾ ಕೊಠಡಿಗಳಿಗೆ ಧಾವಿಸುತ್ತೇವೆ. ಸರಕಾರ ಯುದ್ದ ಘೋಷಿಸಿರುವುದರಿಂದ ರಸ್ತೆಗಳಲ್ಲಿ ಜನ ಸಂಚಾರ ಕಡಿಮೆಯಾಗಿದೆ.

ಸಂಭಾವ್ಯ ಅಪಾಯವನ್ನು ಎದುರಿಸುವ ಸಲುವಾಗಿ ಕನಿಷ್ಠ 2 , 3 ದಿನಗಳಿಗೆ ಆಗುವಷ್ಟು ಆಹಾರ ಧಾನ್ಯಗಳನ್ನು ಮನೆಯಲ್ಲಿ ದಾಸ್ತಾನು ಇರಿಸಲು ಇಲ್ಲಿನ ಆಡಳಿತದಿಂದ ನಿರ್ದೇಶನ ನೀಡಲಾಗಿದೆ. ಯುದ್ದದ ಸ್ವರೂಪ ಯಾವ ಮಟ್ಟಕ್ಕೆ ಹೋಗುತ್ತದೆ ಎನ್ನುವುದು ಊಹಿಸಲು ಯಾರಿಗೂ ಸಾಧ್ಯವಿಲ್ಲದ ಕಾರಣ ಏನಾಗುವುದೋ ಎನ್ನುವ ಭೀತಿ ಸಹಜವಾಗಿ ಕಾಡುತ್ತಿದೆ.

ಶನಿವಾರದ ಹಠಾತ್ ದಾಳಿಯ ಬಳಿಕ ಸುರಕ್ಷಾ ವ್ಯವಸ್ಥೆ ಕಟ್ಟೆಚ್ಚರ ಸ್ಥಿತಿಯಲ್ಲಿದೆ. ಹಮಾಸ್ ದಾಳಿಗೈದ ಪ್ರದೇಶದಿಂದ ತುಂಬಾ ಸಾವು ನೋವುಗಳ ಮಾಹಿತಿ ಲಭಿಸಿದೆ. ಅದರಲ್ಲಿ ಅಮೇರಿಕಾ, ಜರ್ಮನ್, ನೇಪಾಳ ದೇಶವೂ ಸೇರಿದಂತೆ ಹಲವು ವಿದೇಶಿಯರು ಹತ್ಯೆ , ಅಪಹರಣದಂತಹ ಸಾವು ನೋವಿಗೆ ತುತ್ತಾಗಿದ್ದಾರೆ. ಅದೃಷ್ಠಾವಶಾತ್ ಭಾರತೀಯರು ಶನಿವಾರದ ಆಕ್ರಮಣಕ್ಕೆ ಸಿಲುಕಿಲ್ಲ ಎಂದು ನಂಬಿದ್ದೇವೆ.

ಗಾಝಾ ಪ್ರದೇಶ ಮಾತ್ರ ಭೀಕರ ಕದನಕ್ಕೆ ಒಳಗಾಗಿದ್ದು, ಹಮಾಸ್ ದಾಳಿ ಮತ್ತು ಅದಕ್ಕೆ ಇಸ್ರೇಲ್ ಸೇನೆಯ ಪ್ರತ್ಯುತ್ತರದಿಂದ ಅಲ್ಲಿ ಉಂಟಾಗುತ್ತಿರುವ ಶಬ್ದ ಅಲ್ಲಿಂದ ಎಂಭತ್ತು ಕಿ ಮೀ ದೂರದ ಹರ್‌ಝಿಲಿಯಾ ನಗರದಲ್ಲಿರುವ ನಮಗೆ ಕೇಳಿಸುತ್ತಿದೆ.ಹಮಾಸ್ ಉಗ್ರರ ದಾಳಿ ಇಸ್ರೇಲ್ ನಿಯಂತ್ರಣದಲ್ಲಿರುವ ಗಾಝಾ ಪ್ರದೇಶದಲ್ಲಿ ಸಂಭವಿಸಿದ್ದರಿಂದ ಇಸ್ರೇಲಿನ ಉಳಿದ ಭೂ ಭಾಗಗಳು ಸದ್ಯ ಸುರಕ್ಷಾ ವ್ಯವಸ್ಥೆಯಡಿ ಸುರಕ್ಷಿತವಾಗಿದೆ. ಮಾತ್ರವಲ್ಲದೆ ಭಾರತೀಯರೆಲ್ಲರೂ ಸದ್ಯಕ್ಕೆ ಸುರಕ್ಷಿತರಾಗಿದ್ದೇವೆ ಎಂದು ವಿವರಿಸಿದ್ದಾರೆ.

ಉಪ್ಪಿನಂಗಡಿ: ಯುದ್ಧ ನಡೆಯುತ್ತಿರುವ ಇಸ್ರೇಲ್‌ನಲ್ಲಿ ದ.ಕ. ಜಿಲ್ಲೆಯವರು ಸಾಕಷ್ಟು ಮಂದಿ ಉದ್ಯೋಗದಲ್ಲಿದ್ದು, ಯುದ್ಧದ ನಡುವೆಯೂ ಎಲ್ಲರೂ ಇಲ್ಲಿ ಸುರಕ್ಷಿತವಾಗಿದ್ದಾರೆ. ಆದ್ದರಿಂದ ತಾಯ್ನಾಡಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಇಸ್ರೇಲ್‌ನ ರೆಹೋವೊತ್ ಪ್ರದೇಶದಲ್ಲಿರುವ ಪುತ್ತೂರು ತಾಲೂಕಿನ ಕೆಮ್ಮಾರ ನಿವಾಸಿ ಪ್ರದೀಪ್ ಕೊಯಿಲ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗಾಝಾ ಪಟ್ಟಿಯಿಂದ ನಾನಿರುವ ಪ್ರದೇಶ ಸುಮಾರು 55 ಕಿ.ಮೀ. ದೂರವಿದೆ. ಇಲ್ಲಿ ಯಾವುದೇ ಯುದ್ಧದ ವಾತಾವರಣ ಕಾಣುತ್ತಿಲ್ಲ. ಅದೇನಿದ್ದರೂ ಗಡಿ ಪ್ರದೇಶದಲ್ಲಿ. ಉಗ್ರರ ರಾಕೆಟ್ ಉಡಾವಣೆಯೇನಿದ್ದರೂ ಅದು ನಡೆದಿದ್ದು ಗಡಿಗೆ ಹೊಂದಿಕೊAಡಿರುವ ಪ್ರದೇಶ ಹಾಗೂ ಸಮುದ್ರ ತೀರದ ಮೇಲೆ. ಇಸ್ರೇಲ್‌ನಲ್ಲಿ ಶುಕ್ರವಾರ ಸಂಜೆಯಿಂದ ಆರಂಭವಾಗಿ ಶನಿವಾರ ಸಂಜೆಯವರೆಗೆ ವಾರದ ರಜಾ ದಿನವಾಗಿದ್ದು, ಅದಕ್ಕೆ ಸಬ್ಬತ್ ಅಥವಾ ಶಬ್ಬತ್ ಅನ್ನುತ್ತಾರೆ.

ಈ ದಿನ ಅವರಿಗೆ ಪವಿತ್ರತೆ ಮತ್ತು ವಿಶ್ರಾಂತಿಯ ವಾರದ ದಿನವಾಗಿದೆ. ಆ ದಿನಗಳಂದು ಅವರಿಗೆ ಅವರದ್ದೇ ಆದ ಧಾರ್ಮಿಕ ಕಟ್ಟುಪಾಡುಗಳಿವೆ. ಅಲ್ಲದೇ, ಇಸ್ರೇಲ್‌ನಲ್ಲಿ ಒಂದು ವಾರದ ವಾರ್ಷಿಕ ಉತ್ಸವ ನಡೆಯುತ್ತದೆ. ತಮರ್ ಉತ್ಸವದಂದು ಇಸ್ರೇಲ್‌ನ ಅತೀ ದೊಡ್ಡ ಸಂಗೀತ ಉತ್ಸವವು ದೆಡ್ ಸೀಯ ದಂಡೆಯಲ್ಲಿ ನಡೆಯುತ್ತದೆ. ಇದು ಗಾಝಾ ಪಟ್ಟಿಯ ಗಡಿಯಂಚಿನಲ್ಲಿದ್ದು, ಈ ಹಬ್ಬದ ಕೊನೆಯ ದಿನವನ್ನು ಲಾಸ್ಟ್ ಡೇ ಆಫ್ ಸುಕ್ಕೋಟ್ ಅನ್ನುತ್ತಾರೆ. ಇದು ಶಬ್ಬತ್‌ನ ದಿನ ಬರುವುದಾಗಿದ್ದು, ಆ ಸಮಯವನ್ನು ನೋಡಿ ಉಗ್ರರು ದಾಳಿ ನಡೆಸಿದ್ದಾರೆ.

ಆದ್ದರಿಂದ ಮೊದಲ ದಿನ ಹೆಚ್ಚಿನ ಸಾವು- ನೋವು ಸಂಭವಿಸಿದೆ. ಅಂದು ಇಸ್ರೇಲ್‌ನವರೆಲ್ಲಾ ಹಬ್ಬದ ಸಂಭ್ರಮದಲ್ಲಿದ್ದ ಕಾರಣ ತಕ್ಷಣದ ಪ್ರತಿರೋಧ ಸಿಕ್ಕಿಲ್ಲ. ಆ ಬಳಿಕ ಇಸ್ರೇಲ್ ಕೂಡಾ ಪ್ರತಿ ದಾಳಿ ನಡೆಸಿದ್ದು, ಈಗ ಉಗ್ರರ ದಾಳಿ ಕಡಿಮೆಯಾಗಿದೆ. ನಾನು ತಿಳಿದ ಹಾಗೆ, ಉಗ್ರರ ಬಳಿ ಸುಧಾರಿತ ತಂತ್ರಜ್ಞಾನದ ರಾಕೆಟ್‌ಗಳಿಲ್ಲ. ಇಸ್ರೇಲ್ ಬಳಿ ರಾಕೆಟ್‌ಗಳ ದಾಳಿಯನ್ನು ತಡೆಯುವ ಐರನ್ ಡ್ಯಾಮ್ ಎಂಬ ತಂತ್ರಜ್ಞಾನವಿದ್ದು, ಅದರಿಂದ ರಾಕೆಟ್‌ಗಳ ದಾಳಿಯನ್ನು ತಡೆಯಲಾಗುತ್ತಿದೆ.

ಒಮ್ಮೆಲೇ ಹಲವಾರು ರಾಕೆಟ್‌ಗಳನ್ನು ಹಾರಿಸಿದಾಗ ಈ ತಂತ್ರಜ್ಞಾನದಿಂದಲೇ ರಾಕೆಟ್‌ಗಳನ್ನು ಇಸ್ರೇಲ್ ತಡೆಯುತ್ತಿದೆ. ಅದರಲ್ಲಿ ಒಂದೆರಡು ರಾಕೆಟ್‌ಗಳು ತಪ್ಪಿಸಿಕೊಂಡು ಬಂದು ಬಿದ್ದು ಕೆಲವು ಕಡೆ ಹಾನಿಯಾಗುತ್ತಿದೆಯೇ ಹೊರತು ಬೇರೇನೂ ದೊಡ್ಡ ಮಟ್ಟದ ರಾಕೆಟ್ ದಾಳಿಗಳು ಇಸ್ರೇಲ್ ಮೇಲೆ ಈಗ ಆಗುತ್ತಿಲ್ಲ. ಇಲ್ಲಿ ಉಗ್ರರು ಮುಖ್ಯವಾಗಿ ಟಾರ್ಗೆಟ್ ಮಾಡಿರುವುದು ಐಟಿ ಕಚೇರಿ, ಮಾಲ್‌ಗಳು, ಪಾರ್ಕ್ ಹೀಗೆ ಜನಸಂದಣಿಯಿರುವ ಪ್ರದೇಶಗಳನ್ನು. ಅದು ಕೂಡಾ ಗಡಿಯಂಚಿನ ಪ್ರದೇಶಗಳಲ್ಲಿ ಮಾತ್ರ.

ಗಡಿ ಪ್ರದೇಶವಾಗಿರುವ ಗಾಝಾಪಟ್ಟಿಯ ಬಳಿ ಯಹೂದಿಗಳ ಕೃಷಿ ಜಮೀನುಗಳಿದ್ದು ಅಲ್ಲಿ ಕೃಷಿ ಕೆಲಸಕ್ಕಿದ್ದ ಬಾಂಗ್ಲಾ ಹಾಗೂ ಭಾರತೀಯರನ್ನು ಅಪಹರಿಸಲಾಗಿದೆ ಎಂಬ ಸುದ್ದಿ ಇದೆ. ಮತ್ತೆ ಇಸ್ರೇಲ್‌ನಲ್ಲಿ ನಿರ್ಮಾಣವಾಗಿರುವ ಪ್ರತಿ ಹೊಸ ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಶೆಲ್ಟರ್‌ಗಳಿವೆ. ರಾಕೆಟ್ ದಾಳಿಯಾಗುವ 10-15 ಸೆಕೆಂಡ್‌ಗಳ ಮುಂಚೆಯೇ ರಾಕೆಟ್ ಬಂದು ಬೀಳಬಹುದಾದ ಪ್ರದೇಶದಲ್ಲಿ ಸೈರನ್ ಮೊಳಗುವ ವ್ಯವಸ್ಥೆಯಿದ್ದು, ಆಗ ಎಲ್ಲರೂ ಬಂದು ಬಾಂಬ್ ಶೆಲ್ಟರ್‌ನಲ್ಲಿ ಕುಳಿತುಕೊಳ್ಳುತ್ತಾರೆ. ನಾನಿರುವ ಪ್ರದೇಶದಲ್ಲಿ ಇಸ್ರೇಲ್‌ನ ಏರ್‌ಬೇಸ್ ಇದ್ದು, ಇಲ್ಲಿಂದ ಯುದ್ಧ ವಿಮಾನಗಳು ಆಗಾಗ ಹೋಗಿ ಬಂದು ಮಾಡುತ್ತಿರುವುದು ಮೊನ್ನೆಯಿಂದ ಕಾಣುತ್ತಿದೆ ಎಂದು ಪ್ರದೀಪ್ ಮಾಹಿತಿ ನೀಡಿದ್ದರು.

ಇಲ್ಲಿ ಹಲವು ಮಂದಿ ದ.ಕ. ಜಿಲ್ಲೆಯವರು ಇದ್ದರೂ, ನನ್ನ ಸಂಪರ್ಕದಲ್ಲಿ ಗಣೇಶ್ ಮತ್ತು ಕಡಬ ತಾಲೂಕಿನ ದಿನೇಶ್, ಉಮೇಶ್ ಎಂಬವರು ನೇರ ಸಂಪರ್ಕದಲ್ಲಿದ್ದಾರೆ. ಅವರು ಸೇರಿದಂತೆ ದ.ಕ. ಜಿಲ್ಲೆಯವರಿಗೆ ಇಲ್ಲಿ ಯಾವುದೇ ತೊಂದರೆ ಆಗಿಲ್ಲ. ಯಹೂದಿಗಳಿಗೆ ಭಾರತೀಯರೆಂದರೆ ಬಹಳ ಅಭಿಮಾನವಿದ್ದು, ತಮ್ಮ ಮನೆಯವರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದ್ದರಿಂದ ಈ ಯುದ್ಧದಿಂದ ನಮಗೇನೂ ತೊಂದರೆ ಆಗಿಲ್ಲ. ಇವತ್ತು ಕೂಡಾ ನಾನು ನಿರ್ಭೀತಿಯಿಂದ ಮಾರುಕಟ್ಟೆ ಪ್ರದೇಶಕ್ಕೆ ಹೋಗಿ ಬಂದಿದ್ದೇನೆ. ಆದ್ದರಿಂದ ತಾಯ್ನಾಡಿನವರು ಆತಂಕ ಪಡೋದು ಬೇಡ ಎಂದು ತಿಳಿಸಿದ ಪ್ರದೀಪ್ ಅವರು, ನಾನು ಕಂಡ್ಹಾಗೆ ಯಹೂದಿಗಳು ಶಾಂತಿ, ಸಹನೆವುಳ್ಳವರು. ಅವರಿಗೆ ಅವರದ್ದೇ ಆದ ಧಾರ್ಮಿಕ ಕಟ್ಟುಪಾಡುಗಳಿವೆ. ವಾರದ ರಜಾ ದಿನವಾದ ಸಬ್ಬತ್‌ನಂದು ಕೂಡಾ ಯಾವುದು ಮಾಡಬಾರದು ಎಂದಿದೆಯೋ ಅದನ್ನು ಅವರು ಚಾಚೂತಪ್ಪದೇ ಪಾಲಿಸುತ್ತಾರೆ. ಇದೇ ಉಗ್ರರ ಅಟ್ಟಹಾಸಕ್ಕೆ ಇಲ್ಲಿ ಕಾರಣವಾಗಿದೆ ಎಂದು ಪ್ರದೀಪ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here