ಹಬ್ಬ, ಮದುವೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಟಾಕಿ ನಿಷೇಧ: ದೀಪಾವಳಿಗೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ

0

ಬೆಂಗಳೂರು:ಗಣೇಶ ಹಬ್ಬ, ಮದುವೆ ಸಮಾರಂಭ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆಯಲ್ಲಿ ಮಂಗಳವಾರ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಚರ್ಚಿಸಿದ ಮುಖ್ಯಮಂತ್ರಿ, ದೀಪಾವಳಿ ಸಮೀಪವೇ ಬರುತ್ತಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿದ್ದೇವೆ.ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದೆ.

ಪಟಾಕಿ ಸಿಡಿಸುವಾಗ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.ರಾಜ್ಯದೆಲ್ಲೆಡೆ ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋದಾಮುಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸೂಚಿಸಲಾಗಿದೆ ಎಂದು ಸಿಎಂ ಹೇಳಿದರು.

ಪಟಾಕಿ ಲೈಸನ್ಸ್ ಪ್ರತಿ ವರ್ಷ ನವೀಕರಣ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಅವಘಡಗಳನ್ನು ತಪ್ಪಿಸಲು ಇನ್ನಷ್ಟು ಬಿಗಿ ನಿಯಮ ತರಲಾಗಿದ್ದು, ಪಟಾಕಿ ಮಾರಾಟಕ್ಕೆ 5 ವರ್ಷಕ್ಕೆ ಇರುವ ಲೈಸೆನ್ಸ್‌ನ್ನು ಇನ್ಮುಂದೆ ಪ್ರತಿ ವರ್ಷವೂ ಹೊಸದಾಗಿ ನವೀಕರಿಸಬೇಕಾಗಿದೆ.

ಪಟಾಕಿ ಗೋದಾಮುಗಳ ಮುಂಭಾಗದಲ್ಲಿ ವಿಶಾಲವಾದ ಖಾಲಿ ಜಾಗ ಇರುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here